ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರುಬೂದಿಯಿಂದ ಗಟ್ಟಿಮುಟ್ಟು ಇಟ್ಟಿಗೆ

ಯಲ್ಲಾಪುರದಲ್ಲಿ ನವೋದ್ಯಮ ಆರಂಭಿಸಿದ ಯುವಕ: ಪರಿಚಿತರ ಬೆಂಬಲ
Last Updated 6 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ಕಾರವಾರ:ಬೆಳೆಯುತ್ತಿರುವ ನಗರ, ಪಟ್ಟಣ, ಗ್ರಾಮಗಳಲ್ಲಿ ಕಟ್ಟಡ ನಿರ್ಮಾಣ ಒಂದೆಡೆ. ಆದರೆ, ಗುಣಮಟ್ಟದ ಮಣ್ಣು, ಗಗನಕ್ಕೇರಿದ ಸಿಮೆಂಟ್ ದರ, ಕಾರ್ಮಿಕರ ಕೊರತೆಯಿಂದ ಹಿನ್ನಡೆ ಮತ್ತೊಂದೆಡೆ. ಇದರ ನಡುವೆ ಪರ್ಯಾಯ ಮೂಲವಸ್ತುಗಳಿಂದಲೂ ಇಟ್ಟಿಗೆ ತಯಾರಿಸುವ ತಂತ್ರಜ್ಞಾನ ಅಭಿವೃದ್ಧಿಯಾಗಿದೆ.

ಯಲ್ಲಾಪುರದಲ್ಲಿ ಅಂತಹ ನವೋದ್ಯಮವೊಂದು ಗಮನ ಸೆಳೆಯುತ್ತಿದೆ. ಬಳ್ಳಾರಿಯ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ (ಬಿಟಿಪಿಎಸ್) ಉತ್ಪಾದನೆಯಾಗುವ ಕಲ್ಲಿದ್ದಲಿನ ಹಾರುಬೂದಿಯನ್ನು ಬಳಸಿ ಎಂಬಿಎನ್‌ಟಿ ಎಂಟರ್‌ಪ್ರೈಸಸ್ ಇಟ್ಟಿಗೆ ತಯಾರಿಸುತ್ತಿದೆ.

‘ಈ ಜಿಲ್ಲೆಯಲ್ಲಿ ಚಿರೆಕಲ್ಲಿನ ಬಳಕೆ ಹೆಚ್ಚಿದೆ. ಆದರೆ, ಪರಿಸರ ಸೂಕ್ಷ್ಮಪ್ರದೇಶದಲ್ಲಿ ಮೊದಲಿನಷ್ಟು ಸುಲಭವಾಗಿ ಗಣಿಗಾರಿಕೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಪರ್ಯಾಯ ಮಾರ್ಗಗಳ ಬಗ್ಗೆ ಚಿಂತಿಸಿದ ಫಲವೇ ಇದು. ವ್ಯರ್ಥವಾಗುವ ಹಾರುಬೂದಿಯಿಂದ ನಡೆಯುವ ಈ ಕೈಗಾರಿಕೆ ಪರಿಸರ ಸ್ನೇಹಿಯಾಗಿದೆ’ ಎನ್ನುವುದು ಸಂಸ್ಥೆಯ ಮಾಲೀಕ, 27 ವರ್ಷದ ಬೆಂಗಳೂರಿನ ತಿರುನಾರಾಯಣ ಅವರ ಅನಿಸಿಕೆ. ಅವರ ಉತ್ಸಾಹಕ್ಕೆ ತಂದೆಯ ಗೆಳೆಯ, ಯಲ್ಲಾಪುರದ ನಿವಾಸಿ 52ರ ಹರೆಯದ ವಿ.ಜಿ.ಭಾಗವತ್ ಬೆಂಬಲವಾಗಿದ್ದಾರೆ.

‘ಎಂಟು ಮಂದಿ ಕಾರ್ಮಿಕರಿದ್ದಾರೆ. ಬಹುಪಾಲು ಸ್ವಯಂಚಾಲಿತ ಯಂತ್ರೋಪಕರಣಗಳ ಮೂಲಕವೇ ಕೆಲಸ ನಿರ್ವಹಿಸಲಾಗುತ್ತದೆ. ಗುಜರಾತ್‌ನಲ್ಲಿ ಯಂತ್ರೋಪಕರಣಗಳನ್ನು ವಿನ್ಯಾಸ ಮಾಡಿಸಿ ತರಲಾಗಿದೆ. ಹೈಡ್ರಾಲಿಕ್ ಪ್ರೆಸ್ ಮಷಿನ್ ಬಳಕೆಯಲ್ಲಿದೆ. ಹಾಗಾಗಿ ಇಟ್ಟಿಗೆಯ ಅಂಚು, ಅಳತೆ ಒಂದೇ ರೀತಿಯಿರುತ್ತದೆ. ಇದು ಕಟ್ಟಡದ ನುಣುಪಾದ ಪ್ಲಾಸ್ಟರಿಂಗ್‌ಗೆ ಸಹಾಯಕ’ ಎಂದು ವಿವರಿಸಿದರು.

‘ಹಾರುಬೂದಿಯನ್ನು ಭಾರಿ ಒತ್ತಡದಲ್ಲಿ ಒತ್ತುವ ಮೂಲಕ ಇಟ್ಟಿಗೆ ಮಾಡಲಾಗುತ್ತದೆ. ಹಾಗಾಗಿ ಅದರಲ್ಲಿ ಗಾಳಿ, ನೀರು, ಮರಳಿನಂತಹ ಅಂಶಗಳು ಇರುವುದಿಲ್ಲ. ಬೂದಿಗೆ ಶಾಖವನ್ನು ಹೀರಿಕೊಳ್ಳುವ ಗುಣವಿರುವ ಕಾರಣ ಕೊಠಡಿಯಲ್ಲಿ ಹೊರಗಿನ ವಾತಾವರಣಕ್ಕಿಂತ ಸುಮಾರು ಎರಡು ಡಿಗ್ರಿಗಳಷ್ಟು ಕಡಿಮೆ ಉಷ್ಣಾಂಶವಿರುತ್ತದೆ. ಇಟ್ಟಿಗೆ ಸುಮಾರು 100 ವರ್ಷ ಬಾಳಿಕೆ ಬರುತ್ತದೆ’ ಎಂದು ಮಾಹಿತಿ ನೀಡಿದರು.

‘ಒಂದು ಇಟ್ಟಿಗೆ ಸುಮಾರು 20 ಕೆ.ಜಿ ಭಾರವಿರುತ್ತದೆ. 6x16 ಇಂಚು ಅಳತೆಯ ಪ್ರತಿ ಇಟ್ಟಿಗೆಯನ್ನು ಸದ್ಯ ₹ 37ರಂದು ಮಾರಾಟ ಮಾಡುತ್ತಿದ್ದೇವೆ. ಒಂದು ಟನ್ ಬೂದಿಯಲ್ಲಿ ಸರಾಸರಿ 100 ಇಟ್ಟಿಗೆ ಮಾಡಲು ಸಾಧ್ಯವಾಗುತ್ತದೆ’ ಎಂದು ಅಂಕಿ ಅಂಶ ನೀಡಿದರು.

ನೆಲಮಹಡಿಯಲ್ಲಿ ಬೂದಿ ಸಂಗ್ರಹ:‘ಹಾರುಬೂದಿ ವಾತಾವರಣಕ್ಕೆ ಬಾರದಂತೆ ಸ್ಥಳ ವಿನ್ಯಾಸ ಮಾಡಲಾಗಿದೆ. ಅದನ್ನು ನೆಲಮಾಳಿಗೆಯಲ್ಲಿಟ್ಟು ನೀರು ಚಿಮುಕಿಸುತ್ತೇವೆ. ಯಂತ್ರೋಪಕರಣಗಳನ್ನೂ ಅಲ್ಲೇ ಅಳವಡಿಸಿದ್ದೇವೆ. ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗಿದೆ’ ಎಂದು ತಿರುನಾರಾಯಣ ಹೇಳಿದರು.

ಬಯೋಟೆಕ್ನಾಲಜಿಯಲ್ಲಿ ಬಿಎಸ್‌ಸಿ ಪದವಿ ಪಡೆದಿರುವ ಅವರು, ಹಾರುಬೂದಿಗೆ ಸಂಬಂಧಿಸಿದ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದರು. ಬಳಿಕ ಎರಡು ವರ್ಷ ಅಧ್ಯಯನ ಕೈಗೊಂಡು ವಿ.ಜಿ.ಭಾಗವತ್ ಅವರೊಂದಿಗೆ ಸೇರಿ ಸುಮಾರು ₹ 1 ಕೋಟಿ ಬಂಡವಾಳದಲ್ಲಿ ಸಂಸ್ಥೆ ಆರಂಭಿಸಿದ್ದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT