ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಒಂದೇ ವಾರದಲ್ಲಿ 1,150 ಸೋಂಕಿತರು

ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾಧಿಕಾರಿ ಆದೇಶ
Last Updated 9 ಸೆಪ್ಟೆಂಬರ್ 2020, 14:17 IST
ಅಕ್ಷರ ಗಾತ್ರ

ಕಾರವಾರ: ಕೋವಿಡ್ 19 ನಿರ್ಬಂಧಗಳ ನಾಲ್ಕನೇ ಹಂತದ ತೆರವಿನ ಬಳಿಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಕೇವಲ ಒಂದು ವಾರದಲ್ಲಿ 1,150 ಮಂದಿಗೆ ಕೋವಿಡ್ ದೃಢಪಟ್ಟಿದೆ. ಏಳು ಮಂದಿ ಮೃತಪಟ್ಟಿದ್ದಾರೆ.

ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಾದ್ಯಂತ ವಿವಿಧ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಜನಜೀವನವೂ ಲಾಕ್‌ಡೌನ್‌ಗಿಂತ ಮೊದಲಿದ್ದ ರೀತಿಯಲ್ಲೇ ಇದೆ. ಕೋವಿಡ್‌ ನಿಯಂತ್ರಣದಲ್ಲಿ ರಾಜ್ಯದ ಗಮನ ಸೆಳೆದಿದ್ದ ಜಿಲ್ಲೆಯಲ್ಲಿ ಈಗ ಬಹುತೇಕ ಸಾರ್ವಜನಿಕರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮಾರುಕಟ್ಟೆ, ವಾಣಿಜ್ಯ ಕೇಂದ್ರಗಳು, ಜನಸಂದಣಿ ಸೇರುವಂಥ ಜಾಗಗಳಲ್ಲಿ ಅಂತರ ಕಾಯ್ದುಕೊಳ್ಳುವುದನ್ನು ಮರೆಯುತ್ತಿದ್ದಾರೆ. ಹಲವರು ಮುಖಗವಸು ಧರಿಸದೇ ಸಂಚರಿಸುತ್ತಿರುವುದೂ ಸಾಮಾನ್ಯವಾಗಿದೆ.

ಈ ವಿಚಾರವು ಜಿಲ್ಲಾಡಳಿತಕ್ಕೂ ಅಸಮಾಧಾನ ತಂದಿದ್ದು, ಕೋವಿಡ್ ಸಂಬಂಧ ಸರ್ಕಾರದ ಆದೇಶವನ್ನು ಧಿಕ್ಕರಿಸುವವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ನಗರದ ಸಾರ್ವಜನಿಕ ಪ್ರದೇಶಗಳಲ್ಲಿ ಮುಖಗವಸು, ಧರಿಸದೇ ಸಂಚರಿಸುವವರಿಗೆ ₹ 200, ಗ್ರಾಮೀಣ ಭಾಗದಲ್ಲಿ ₹ 100 ದಂಡ ವಿಧಿಸಲು ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಸೂಚಿಸಿದ್ದಾರೆ.

ವ್ಯಾಪಾರದ ಸ್ಥಳಗಳಲ್ಲಿ ಮುಖಗವಸು ಧರಿಸದಿದ್ದರೆ ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ಅಂತರ ಕಾಯ್ದುಕೊಳ್ಳದೇ ಗುಂಪಾಗಿ ನಿಂತಿರುವುದು ಕಂಡು ಬಂದರೆ ಮೊದಲು ಎಚ್ಚರಿಕೆ ನೀಡಬೇಕು. ನಂತರವೂ ಪಾಲಿಸದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಈಗಾಗಲೇ ನಿರ್ದೇಶನ ನೀಡಿದ್ದಾರೆ.

ಅಧಿಕಾರಿಗಳೇ ಹೊಣೆ:ಸಾರ್ವಜನಿಕರು ಮುಖಗವಸು (ಕರವಸ್ತ್ರ ಅಥವಾ ಟವಲ್‌ ಕೂಡ ಬಳಸಬಹುದು) ಧರಿಸುವ ಬಗ್ಗೆ ಡಂಗುರ ಸಾರಿ ಮಾಹಿತಿ ನೀಡಬೇಕು. ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರು ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನಿಯಮದ ಪಾಲನೆ ಆಗದಿದ್ದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

‘ಸರ್ಕಾರಿ ಕಚೇರಿಗೆ ಪ್ರವೇಶವಿಲ್ಲ’:ಮುಖಗವಸು ಧರಿಸದೇ ಬರುವ ಸಾರ್ವಜನಿಕರಿಗೆ ಜಿಲ್ಲೆಯ ಸರ್ಕಾರಿ ಕಚೇರಿಗಳಿಗೆ ಪ್ರವೇಶ ನೀಡುವಂತಿಲ್ಲ ಎಂದು ಸರ್ಕಾರದ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಇದನ್ನು ಉಲ್ಲಂಘಿಸಿದವರ ವಿರುದ್ಧ ‘ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ 1897’, ‘ವಿಪತ್ತು ನಿರ್ವಹಣಾ ಕಾಯ್ದೆ 2005’, ‘ಭಾರತೀಯ ದಂಡ ನೀತಿ ಸಂಹಿತೆ 1860’ ಮತ್ತು ‘ದಂಡ ಪ್ರಕ್ರಿಯಾ ಸಂಹಿತೆ’ಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು. ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT