ಮಿತಿಮೀರಿದ ಬೀಡಾಡಿ ಜಾನುವಾರು ಕಾಟ

7
ಕಾರವಾರದ ಪ್ರಮುಖ ರಸ್ತೆಗಳ ನಡುವೆಯೇ ಹಿಂಡುಹಿಂಡಾಗಿ ಸಾಗುವ ಎಮ್ಮೆ, ಹಸುಗಳು

ಮಿತಿಮೀರಿದ ಬೀಡಾಡಿ ಜಾನುವಾರು ಕಾಟ

Published:
Updated:
Deccan Herald

ಕಾರವಾರ: ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಚಾಲಕರು ಅಡ್ಡಾದಿಡ್ಡಿ ವಾಹನ ನಿಲ್ಲಿಸುವ ಸಮಸ್ಯೆ ಒಂದೆಡೆ. ಅವುಗಳ ಮಧ್ಯೆ ಹಿಂಡುಹಿಂಡಾಗಿ ಬರುವ ಬೀಡಾಡಿ ದನ, ಎಮ್ಮೆಗಳ ಕಾಟ ಮತ್ತೊಂದೆಡೆ. ಇವುಗಳಿಂದಾಗಿ ಪಾದಚಾರಿಗಳಿಗೆ ಇಲ್ಲಿ ಜಾಗವಿಲ್ಲ ಎಂಬಂತಾಗಿದೆ.

ಗ್ರೀನ್‌ಸ್ಟ್ರೀಟ್‌ನ ಸುಭಾಶ್ ವೃತ್ತ, ಗ್ರಾಮೀಣ ಪೊಲೀಸ್ ಠಾಣೆ ಸಮೀಪ, ಅಂಬೇಡ್ಕರ್ ವೃತ್ತದ ಸುತ್ತಮುತ್ತ ಹಾಗೂ ಈ ರಸ್ತೆಗೆ ಸೇರುವ ಅಡ್ಡರಸ್ತೆಗಳ ತುಂಬ ಜಾನುವಾರು ಹಾವಳಿ ಮಿತಿಮೀರಿದೆ. ರಸ್ತೆಯ ಮಧ್ಯೆಯೇ ಮಲಗುವ ಅವು, ವಾಹನ ಸಂಚಾರಕ್ಕೆ ಅಡಚಣೆ ಮಾಡುತ್ತಿವೆ.

ವಾಹನ ಚಾಲಕರು ಹತ್ತಿರ ಬಂದು ಗಟ್ಟಿಯಾಗಿ ಹಾರ್ನ್ ಮಾಡಿದರೆ ಒಮ್ಮೆಗೇ ಎದ್ದು ಪಕ್ಕಕ್ಕೆ ಸರಿಯುತ್ತವೆ. ಆಗ ಅವುಗಳ ಸಮೀಪದಲ್ಲಿ ನಡೆದುಕೊಂಡು ಹೋಗುತ್ತಿರುವವರು ಭಯಭೀತರಾಗುತ್ತಾರೆ. ಮಹಿಳೆಯರು ಮತ್ತು ಮಕ್ಕಳು ಆತಂಕದಿಂದ ಜೋರಾಗಿ ಕೂಗಿಕೊಳ್ಳುವುದೂ ಸಾಮಾನ್ಯವಾಗಿದೆ.

‘ಜಾನುವಾರನ್ನು ಕೊಟ್ಟಿಗೆಯಲ್ಲಿಟ್ಟು ಸಾಕಬೇಕು. ಅದು ಕಷ್ಟ ಎಂದಾದರೆ, ನಗರದ ಹೊರವಲಯಕ್ಕೆ ಮೇಯಲು ಬಿಟ್ಟವರು ಸಂಜೆ ಅವುಗಳನ್ನು ಹೊಡೆದುಕೊಂಡು ಬಂದು ತಮ್ಮ ಮನೆಯ ಬಳಿ ಕಟ್ಟಿಹಾಕಬೇಕು. ಈ ರೀತಿ ಎಲ್ಲೆಂದರಲ್ಲಿ ಇರಲು ಅವಕಾಶ ಕೊಡುವುದು ಸರಿಯಲ್ಲ. ಇದರಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ’ ಎನ್ನುತ್ತಾರೆ ಹಿರಿಯರಾದ ದೇವಯ್ಯ.

‘ಪಾದಚಾರಿ ದಾರಿಯಲ್ಲಿ, ರಸ್ತೆಗಳಲ್ಲಿ ಸೆಗಣಿ ಹಾಕಿರುತ್ತವೆ. ಕತ್ತಲಲ್ಲಿ ಗೊತ್ತಾಗದೇ ಅದನ್ನು ತುಳಿದಾಗ, ಅದರ ಮೇಲೆ ವಾಹನಗಳು ಜೋರಾಗಿ ಸಾಗಿದಾಗ ಬಟ್ಟೆ ಮೇಲೆ ಸಿಡಿದು ರಾಡಿಯಾಗುತ್ತದೆ. ಮಳೆ ಬಂದಾಗಂತೂ ಅಸಹ್ಯವಾಗಿರುತ್ತದೆ’ ಎನ್ನುತ್ತಾರೆ ಅವರು.

ಆತಂಕ ತಂದಿಟ್ಟಿದ್ದ ಎಮ್ಮೆ ಕರು: ಜೂನ್ ತಿಂಗಳ ಆರಂಭದಲ್ಲಿ ರಾತ್ರಿವೇಳೆ ಗ್ರೀನ್‌ಸ್ಟ್ರೀಟ್‌ನ ರಸ್ತೆಬದಿ ತರಕಾರಿ ಅಂಗಡಿಯೊಂದರ ಮುಂದೆ ಒಂದಿಷ್ಟ ತರಕಾರಿ ಬಿದ್ದಿತ್ತು. ಎಮ್ಮೆಕರುವೊಂದು ಅದನ್ನು ತಿನ್ನಲು ಅಲ್ಲಿದ್ದ ಪ್ಲಾಸ್ಟಿಕ್ ಕುರ್ಚಿಯ ಮಧ್ಯೆ ತಲೆ ತೂರಿಸಿತ್ತು. ಕೊಂಬಿನಲ್ಲಿ ಕುರ್ಚಿಯು ಸಿಲುಕಿ ಕಂಗೆಟ್ಟ ಎಮ್ಮೆಕರು, ರಸ್ತೆಯುದ್ದಕ್ಕೂ ದಿಕ್ಕೆಟ್ಟು ಓಡಿತ್ತು. ಕುರ್ಚಿಯು ತಲೆಯಿಂದ ಉದುರಿದ ಬಳಿಕವೇ ಅದು ಸಮಾಧಾನಗೊಂಡಿತ್ತು. ಸುಮಾರು 15 ನಿಮಿಷಗಳ ಸನ್ನಿವೇಶದಿಂದ ಸುತ್ತಮುತ್ತ ಜನರು ಆತಂಕಗೊಂಡಿದ್ದರು.

‘ಮಾಲೀಕರಿಗೆ ದಂಡ ವಿಧಿಸಿ’

ಬೀಡಾಡಿ ಜಾನುವಾರುಗಳನ್ನು ಹಿಡಿದು ಯಾವುದಾದರೂ ಗೋಶಾಲೆಗೆ ಸಾಗಿಸುವ ವ್ಯವಸ್ಥೆಯಾಗಬೇಕು. ಅವುಗಳ ಮಾಲೀಕರನ್ನು ಪತ್ತೆಹಚ್ಚಿ ದಂಡ ವಿಧಿಸಬೇಕು. ಶಿರಸಿಯೂ ಸೇರಿದಂತೆ ಜಿಲ್ಲೆಯ ಕೆಲವೆಡೆ ಬೀಡಾಡಿ ಜಾನುವಾರು ಕುತ್ತಿಗೆಗೆ ಪ್ರತಿಫಲಕವಿರುವ ಪಟ್ಟಿಗಳನ್ನು ಅಳವಡಿಸಲಾಗುತ್ತಿದೆ. ಅದೇ ರೀತಿಯಲ್ಲಿ ಕಾರವಾರದಲ್ಲೂ ಆಗಬೇಕು ಎನ್ನುತ್ತಾರೆ ದ್ವಿಚಕ್ರ ವಾಹನ ಸವಾರ ಗಜಾನನ ನಾಯ್ಕ.

ರಸ್ತೆಗಳ ನಡುವೆ ವಿಭಜಕಗಳಲ್ಲಿ ನೆಟ್ಟಿರುವ ಗಿಡಗಳನ್ನೂ ಅವು ತಿಂದುಹಾಕುತ್ತವೆ. ಇದರಿಂದ ನಗರಸಭೆಗೆ ಆಗುತ್ತಿರುವ ನಷ್ಟವನ್ನು ಯಾರು ಭರ್ತಿ ಮಾಡಬೇಕು ಎಂಬ ಬಗ್ಗೆಯೂ ಚಿಂತನೆಯಾಗಬೇಕು ಎನ್ನುವುದು ಅವರ ಒತ್ತಾಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !