ಶುಕ್ರವಾರ, ಜೂನ್ 25, 2021
23 °C
ಮಾಜಾಳಿಯಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ನಿರ್ಬಂಧ ಜಾರಿ

ಗಡಿಯಲ್ಲಿ ಕಠಿಣ ಕ್ರಮ: ಅಧಿಕಾರಿಗಳಿಂದ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ರಾಜ್ಯದಲ್ಲಿ ಕೋವಿಡ್ ನಿಯಂತ್ರಣದ ಸಲುವಾಗಿ ಮೇ 10ರಿಂದ ಲಾಕ್‌ಡೌನ್ ಘೋಷಿಸಿರುವ ಕಾರಣ, ಮಾಜಾಳಿಯ ಅಂತರರಾಜ್ಯ ಗಡಿಯಲ್ಲಿ ಕಠಿಣ ನಿಯಮಗಳು ಜಾರಿಯಾಗಲಿವೆ. ಈ ಹಿನ್ನೆಲೆಯಲ್ಲಿ ಅಲ್ಲಿ ಕೈಗೊಳ್ಳಲಾಗಿರುವ ಸಿದ್ಧತೆಗಳು ಮತ್ತು ಬೇಕಾಗಿರುವ ಕ್ರಮಗಳ ಬಗ್ಗೆ ಅಧಿಕಾರಿಗಳು ಶನಿವಾರ ಪರಿಶೀಲಿಸಿದರು.

ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ, ತಹಶೀಲ್ದಾರ್ ಆರ್.ವಿ.ಕಟ್ಟಿ ಹಾಗೂ ಡಿ.ವೈ.ಎಸ್‌.ಪಿ ಅರವಿಂದ ಕಲಗುಜ್ಜಿ ಹಾಗೂ ಇತರ ಅಧಿಕಾರಿಗಳು ಮಾಜಾಳಿಗೆ ಭೇಟಿ ನೀಡಿದರು. ಮೇ 10ರವರೆಗೆ ಈಗಿನಂತೆ ಎಲ್ಲ ವಾಹನಗಳ ಸಂಚಾರಕ್ಕೆ ಅವಕಾಶ ಇರಲಿದೆ. ನಂತರ, ಸರಕು ಮತ್ತು ಜೀವನಾವಶ್ಯಕ ವಸ್ತುಗಳ ಸಾಗಣೆ ವಾಹನಗಳು, ತುರ್ತು ಸೇವೆಗಳನ್ನು ಹೊರತುಪಡಿಸಿ ಮತ್ತೆಲ್ಲವುಗಳಿಗೂ ನಿಷೇಧ ಹೇರುವುದು ನಿಚ್ಚಳವಾಗಿದೆ.

ಪರಿಶೀಲನೆಯ ಬಳಿಕ ಮಾಹಿತಿ ನೀಡಿದ ತಹಶೀಲ್ದಾರ್ ಆರ್.ವಿ.ಕಟ್ಟಿ, ‘ಸದ್ಯಕ್ಕೆ ಈಗಿರುವ ನಿಯಮಗಳೇ ಜಾರಿಯಲ್ಲಿ ಇರುತ್ತವೆ. ಚೆಕ್‌ಪೋಸ್ಟ್‌ನಲ್ಲಿ ಬೇಕಾಗಿರುವ ಸಿದ್ಧತೆಗಳನ್ನು ಪರಿಶೀಲಿಸಲಾಗಿದೆ. ಅನಗತ್ಯವಾಗಿ ಸಂಚರಿಸುವವರನ್ನು ಖಂಡಿತವಾಗಿ ತಡೆಯಲಾಗುವುದು. ಗೋವಾದಲ್ಲಿ ಕೆಲಸ ಮಾಡುವವರು ಸದ್ಯಕ್ಕೆ ಅಲ್ಲೇ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತ’ ಎಂದರು.

‘ಕೈಗೆ ಮುದ್ರೆ: ಚಿಂತನೆ’

‘ರಾಜ್ಯದ ಗಡಿಗಳಲ್ಲಿ (ಮಾಜಾಳಿ ಮತ್ತು ಅನಮೋಡ) ಕೈಗೊಳ್ಳಬೇಕಾದ ನಿರ್ಬಂಧಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಗಡಿಗಳ ಮೂಲಕ ರಾಜ್ಯ ಪ್ರವೇಶಿಸುವವರ ಕೈಗೆ ಕಳೆದ ಬಾರಿಯಂತೆ ಮುದ್ರೆಯೊತ್ತುವ ಬಗ್ಗೆಯೂ ಚಿಂತಿಸಲಾಗುತ್ತಿದೆ. ಅಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಭಾನುವಾರ ಸ್ಪಷ್ಟವಾದ ಮಾರ್ಗಸೂಚಿ ಸಿದ್ಧವಾಗಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ‘ಪ್ರಜಾವಾಣಿ’ ತಿಳಿಸಿದರು.

ಗೋವಾ ಸೇರಿದಂತೆ ಬೇರೆ ರಾಜ್ಯಗಳಲ್ಲಿರುವ ನೂರಾರು ಮಂದಿ ಜಿಲ್ಲೆಗೆ ಶನಿವಾರ ವಾಪಸಾದರು. ಮಾಜಾಳಿಯಲ್ಲಿರುವ ಚೆಕ್‌ಪೋಸ್ಟ್‌ನಲ್ಲಿ ಅವರನ್ನು ಪರಿಶೀಲಿಸಿ ಒಳಬರಲು ಅವಕಾಶ ನೀಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು