ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ: ಇಕ್ಕಟ್ಟು ಕೊಠಡಿಯಲ್ಲಿ ಕಲಿಕೆಗೆ ಪರದಾಟ

ಅವಧಿ ಮುಗಿದರೂ ಪೂರ್ಣಗೊಳ್ಳದ ಹೊಸ ಕಟ್ಟಡ ಕಾಮಗಾರಿ
Last Updated 18 ಜನವರಿ 2022, 19:30 IST
ಅಕ್ಷರ ಗಾತ್ರ

ಮುಂಡಗೋಡ: ಈ ಶಾಲೆಯಲ್ಲಿ ಇಕ್ಕಟ್ಟಾದ ಕೊಠಡಿಯಲ್ಲಿಯೇ ಕುಳಿತು ಮಕ್ಕಳು ಪಾಠ ಕೇಳಬೇಕಾಗಿದೆ. ಶೌಚಾಲಯದ ವ್ಯವಸ್ಥೆ ಇಲ್ಲ. ಹಾಗಾಗಿ, ಮಕ್ಕಳು ಮನೆಗೇ ಹೋಗಿ ಬರುವ ಅನಿವಾರ್ಯತೆಯಿದೆ. ಶಾಲೆಗೊಂದು ಮೈದಾನವೂ ಇಲ್ಲ.

ಇದು ತಾಲ್ಲೂಕಿನ ಇಂದಿರಾನಗರ ಕೊಪ್ಪ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪರಿಸ್ಥಿತಿ. ಸ್ವಂತ ಕಟ್ಟಡ ಇಲ್ಲದೇ ಬಾಡಿಗೆ ಕೊಠಡಿಯಲ್ಲಿ ಸದ್ಯ ತರಗತಿ ನಡೆಯುತ್ತಿದೆ. 35ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಮಕ್ಕಳಿಗೆ ಸರಿಯಾದ ಪೀಠೋಪಕರಣ, ಮೂಲ ಸೌಕರ್ಯ ನೀಡಲು ಶಿಕ್ಷಣ ಇಲಾಖೆ ವಿಫಲವಾಗಿದೆ ಎಂಬುದು ಪಾಲಕರ ದೂರಾಗಿದೆ.

ಬಿಸಿಲಿಗೆ ಚಾವಣಿ ಬಿಸಿಯೇರುತ್ತದೆ. ರಸ್ತೆಯಲ್ಲಿ ವಾಹನಗಳು ಹೋದರೆ, ಕೊಠಡಿಯೊಳಗೆ ದೂಳು ಹಾರಿ ಬರುತ್ತದೆ. ಸದಾ ವಾಹನಗಳ ಶಬ್ದಕ್ಕೆ ಇಲ್ಲಿನ ವಿದ್ಯಾರ್ಥಿಗಳು ಕಿವಿಗೊಡಬೇಕಿದೆ. ಇರುವ ಕೊಠಡಿಯಲ್ಲಿಯೇ ಸ್ವಲ್ಪ ಭಾಗದಲ್ಲಿ ಬಿಸಿ ಊಟ ತಯಾರಿಸಲಾಗುತ್ತಿದೆ. ಕಲಿಕೆಗೆ ಪೂರಕ ವಾತಾವರಣ ಇರಬೇಕು, ಶಾಲಾ ಪರಿಸರವು ಮಕ್ಕಳ ಆಸಕ್ತಿಯನ್ನು ಹೆಚ್ಚಿಸುವಂತಿರಬೇಕು ಎಂಬ ನಿಯಮಗಳಿಗೆ ಈ ಶಾಲೆ ವಿರುದ್ಧವಾಗಿದೆ ಎಂದು ಆರೋಪಿಸುತ್ತಾರೆ.

‘ಕೋವಿಡ್‌ ಸಮಯದಲ್ಲಿ ಮಕ್ಕಳನ್ನು ಶಾಲೆಗೆ ಕಳುಹೊಸಲು ಭಯವಾಗುತ್ತದೆ. ಇರುವ ಚಿಕ್ಕ ಕೊಠಡಿಯಲ್ಲಿಯೇ ನಿರ್ದಿಷ್ಟ ಅಂತರ ಕಾಪಾಡಿಕೊಂಡು ವಿದ್ಯಾರ್ಥಿಗಳು ಕುಳಿತುಕೊಳ್ಳಲು ಆಗುವುದಿಲ್ಲ. ಊರಿಗೊಂದು ಸುಂದರ ಶಾಲೆ ನಿರ್ಮಿಸಿಕೊಡಲು ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗಬೇಕು. ಬೇಗ ಕಟ್ಟಡ ಕಾಮಗಾರಿ ಮುಗಿಸಿ, ಹೊಸ ಶಾಲೆಯಲ್ಲಿ ಮಕ್ಕಳು ಕಲಿಯುವಂತಾಗಲಿ’ ಎಂದು ಗ್ರಾಮಸ್ಥ ಸಂತೋಷ ಒತ್ತಾಯಿಸಿದರು.

‘ಈ ಹಿಂದೆ ಗ್ರಾಮದಲ್ಲಿ ಇದ್ದ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡಿತ್ತು. ನಂತರ ಹೊಸದಾಗಿ ಕಟ್ಟಲು ಹಳೆಯದನ್ನು ಕೆಡವಲಾಯಿತು. ಎರಡು ವರ್ಷಗಳಿಂದ ಹೊಸ ಕಟ್ಟಡದ ಕಾಮಗಾರಿ ನಡೆಯುತ್ತಿದೆ. ಅದಿನ್ನೂ ಪೂರ್ಣಗೊಂಡಿಲ್ಲ. ಕೆಲವು ತಿಂಗಳಿನಿಂದ ಕಾಮಗಾರಿ ಸಂಪೂರ್ಣವಾಗಿ ನಿಂತಿದೆ. ಇದರಿಂದ ವಿದ್ಯಾರ್ಥಿಗಳು ಬಾಡಿಗೆ ಕೊಠಡಿಯಲ್ಲಿಯೇ ಕಲಿಯಬೇಕಾಗಿದೆ’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ತೀರ್ಥ ಭೋವಿ ಹೇಳಿದರು.

‘ನೋಟಿಸ್ ನೀಡಲಾಗಿದೆ’:

‘ಸರ್ಕಾರಿ ಶಾಲಾ ಕಟ್ಟಡ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಮುಗಿಸಬೇಕೆಂದು ಗುತ್ತಿಗೆದಾರರಿಗೆ ಎರಡು ಬಾರಿ ನೋಟಿಸ್‌ ನೀಡಲಾಗಿದೆ. ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈಗಾಗಲೇ ನಿಗದಿತ ಅವಧಿ ಮುಗಿದಿದೆ. ಟೆಂಡರ್‌ ಪ್ರಕ್ರಿಯೆ ರದ್ದುಪಡಿಸಿ, ಬೇರೆಯವರಿಗೆ ಕಾಮಗಾರಿ ನೀಡುವಂತೆ ಮೇಲಧಿಕಾರಿಗಳಿಗೆ ವರದಿ ಕಳುಹಿಸಲಾಗಿದೆ. ಕಟ್ಟಡದ ಅಪೂರ್ಣ ಕಾಮಗಾರಿಯಿಂದ ವಿದ್ಯಾರ್ಥಿಗಳು ತೊಂದರೆ ಪಡುತ್ತಿರುವುದು ಗಮನಕ್ಕೆ ಬಂದಿದೆ’ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ವಿನಾಯಕ ಭಟ್ಟ ಹೇಳಿದರು.

* ಶಾಲೆಯ ಕಟ್ಟಡ ಕಾಮಗಾರಿಯನ್ನು ಬೇಗ ಮುಗಿಸಿಕೊಡುವಂತೆ ಅಧಿಕಾರಿಗಳು, ಎಂಜಿನಿಯರ್‌ಗಳಿಗೆ ಹಲವು ಸಲ ಮನವಿ ಮಾಡಿದ್ದೇವೆ. ಆದರೆ, ಕೆಲಸ ಮಾತ್ರ ಆಗುತ್ತಿಲ್ಲ.

- ತೀರ್ಥ ಭೋವಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT