ವಿದ್ಯಾರ್ಥಿಗಳ ಕೈಯಲ್ಲಿ ಸಿದ್ದವಾದ ‘ಗುರುತಿನ ಚೀಟಿ’

ಶನಿವಾರ, ಮೇ 25, 2019
25 °C
ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು ತರಬೇತಿಯಲ್ಲಿ ಪ್ರಾಯೋಗಿಕ ಜ್ಞಾನ

ವಿದ್ಯಾರ್ಥಿಗಳ ಕೈಯಲ್ಲಿ ಸಿದ್ದವಾದ ‘ಗುರುತಿನ ಚೀಟಿ’

Published:
Updated:
Prajavani

ಶಿರಸಿ: ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟಿನಲ್ಲಿ (ಎನ್‌ಎಸ್‌ಕ್ಯೂಎಫ್‌) ತರಬೇತಿ ಪಡೆದಿರುವ ಮಕ್ಕಳು ಪ್ರಾಯೋಗಿಕವಾಗಿ ಸಿದ್ಧಪಡಿಸಿರುವ ಗುರುತಿನ ಚೀಟಿಗಳು ವಿದ್ಯಾರ್ಥಿಗಳು, ಶಿಕ್ಷಕರ ಮನಗೆದ್ದಿವೆ.

ವಿದ್ಯಾರ್ಥಿಗಳಲ್ಲಿ ಸ್ವಯಂ ಉದ್ದಿಮೆಯ ಕಲ್ಪನೆ ಮೂಡಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಆರ್‌ಎಂಎಸ್‌ಎ ಯೋಜನೆಯಡಿ ರೂಪಿಸಿರುವ ಎನ್‌ಎಸ್‌ಕ್ಯೂಎಫ್‌ ತರಬೇತಿಯು ಇಲ್ಲಿನ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯಲ್ಲಿ ಐದು ವರ್ಷಗಳ ಹಿಂದೆ ಅನುಷ್ಠಾನಗೊಂಡಿದೆ. ಮಾಹಿತಿ ತಂತ್ರಜ್ಞಾನ ಮತ್ತು ರಿಟೇಲ್‌ ಎರಡು ವಿಭಾಗಗಳಿಂದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ.

ಪ್ರೌಢಶಾಲಾ ಹಂತದಿಂದ ತರಬೇತಿ ಪಡೆದು, ಪ್ರಥಮ ಪಿಯುಸಿಯಲ್ಲೂ ಇದೇ ವಿಷಯವನ್ನು ಆಯ್ಕೆ ಮಾಡಿಕೊಂಡಿರುವ ಕೆಲವು ಮಕ್ಕಳು ಸೇರಿ, 8ನೇ ತರಗತಿಯ ವಿದ್ಯಾರ್ಥಿಗಳ ಗುರುತಿನ ಚೀಟಿ (ಐಡಿ ಕಾರ್ಡ್‌) ತಯಾರಿಸಿದ್ದಾರೆ. ಈ ಹಿಂದೆ ಹುಬ್ಬಳ್ಳಿ ಅಥವಾ ಹೊರ ಊರುಗಳಲ್ಲಿ ಸಿದ್ಧಪಡಿಸಿಕೊಂಡು ತರುತ್ತಿದ್ದ ಗುರುತಿನ ಚೀಟಿಯನ್ನು, ಇಲ್ಲಿ ತರಬೇತಿ ಪಡೆದ ಮಕ್ಕಳು ಶಾಲೆಯಲ್ಲಿಯೇ ಅಚ್ಚುಕಟ್ಟಾಗಿ ತಯಾರು ಮಾಡಿದ್ದಾರೆ.

‘ಪ್ರೌಢಶಾಲೆ ಹಂತದಲ್ಲಿಯೇ ನಮಗೆ ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ತಂತ್ರಜ್ಞಾನದ ಮಾಹಿತಿ ಸಿಗುವುದರಿಂದ ಮುಂದಿನ ಕಲಿಕೆಗೆ ಈ ಶಿಕ್ಷಣ ನೆರವಾಗಿದೆ. ಐಟಿಯನ್ನು ಒಂದು ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದು ಸಾರ್ಥಕವೆನಿಸುತ್ತದೆ. ಇಲ್ಲಿ ಸಿಗುವ ಪ್ರಾಯೋಗಿಕ ಜ್ಞಾನ ಅದ್ಬುತ ಅನುಭವ ನೀಡಿದೆ’ ಎನ್ನುತ್ತಾರೆ ವಿದ್ಯಾರ್ಥಿಗಳಾದ ದರ್ಶನ ನಾಯ್ಕ, ಸಿದ್ದಾರ್ಥ ಕಲಬುರ್ಗಿ.

‘9ನೇ ತರಗತಿಗೆ ಈ ವಿಷಯ ಲಭ್ಯವಿದೆ. ಪ್ರೌಢಶಾಲೆಯಲ್ಲಿ ತೃತೀಯ ಭಾಷೆ ಬದಲಾಗಿ ಈ ವಿಷಯ ಆಯ್ಕೆ ಮಾಡಿಕೊಂಡರೆ, ಪಿಯುಸಿಯಲ್ಲಿ ಭಾಷೆಯ ಜತೆಗೆ ಕೌಶಲ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಪ್ರತಿ ತರಗತಿಗೆ 25 ವಿದ್ಯಾರ್ಥಿಗಳ ಗರಿಷ್ಠ ಮಿತಿಯಿದೆ. ಹೀಗೆ ಈ ವಿಷಯವನ್ನು ಆಯ್ಕೆ ಮಾಡಿಕೊಂಡು ಸುಮಾರು 12 ವಿದ್ಯಾರ್ಥಿಗಳು ಸೇರಿ, 8ನೇ ತರಗತಿಗೆ ಪ್ರವೇಶ ಪಡೆದ ಮಕ್ಕಳ ಗುರುತಿನ ಚೀಟಿ ಸಿದ್ಧಪಡಿಸಿದರು’ ಎನ್ನುತ್ತಾರೆ ಐಟಿ ವಿಭಾಗದ ಶಿಕ್ಷಕ ಅನಿಲ್ ನಾಯಕ.

’ಖಾಸಗಿಯವರಿಗೆ ನೀಡಿದರೆ ಒಂದು ಗುರುತಿನ ಚೀಟಿಗೆ ₹ 60ರಷ್ಟು ಖರ್ಚು ಬರುತ್ತದೆ. ನಮ್ಮ ವಿದ್ಯಾರ್ಥಿಗಳು ₹ 40ರಲ್ಲಿ ಗುಣಮಟ್ಟದ ಗುರುತಿನ ಚೀಟಿ ಸಿದ್ಧಪಸಿದ್ದಾರೆ. ಎನ್‌ಎಸ್‌ಕ್ಯೂಎಫ್ ಸೇರಿದರೆ ಬಿ.ಕಾಂ, ಬಿಬಿಎ ಪದವಿಯಲ್ಲಿ ಬರುವ ಎಲ್ಲ ವಿಷಯಗಳನ್ನು ಪ್ರೌಢಶಾಲಾ ಹಂತದಲ್ಲಿಯೇ ಮಕ್ಕಳು ಕಲಿಯಬಹುದು. ಆರಂಭದ ಎರಡು ವರ್ಷ ಈ ತರಬೇತಿಯನ್ನು ಹೆಚ್ಚುವರಿ ವಿಷಯವಾಗಿ ಪರಿಗಣಿಸಲಾಗುತ್ತಿತ್ತು. ಈಗ ಇದು ಪಠ್ಯ ವಿಷಯಗೊಳಗೆ ಸೇರಿದೆ. ಪ್ರೌಢ ಶಿಕ್ಷಣ ಮಂಡಳಿ ಹಾಗೂ ಪಿಯು ಮಂಡಳಿಯಿಂದಲೇ ಪರೀಕ್ಷೆಗಳು ನಡೆಯುತ್ತವೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !