ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಾಪುರ: ಹಳ್ಳಿ ಶಾಲೆಯಲ್ಲಿ ಪರಿಸರ, ಗುಣಮಟ್ಟದ ಕಲಿಕೆ

ಹುಲ್ಕುತ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
Last Updated 11 ಅಕ್ಟೋಬರ್ 2019, 19:31 IST
ಅಕ್ಷರ ಗಾತ್ರ

ಸಿದ್ದಾಪುರ: ಪಟ್ಟಣದಿಂದ ಅತ್ಯಂತ ದೂರದಲ್ಲಿದ್ದರೂ ಹುಲ್ಕುತ್ರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಣಮಟ್ಟದ ಶಿಕ್ಷಣದಿಂದ ದೂರವಾಗಿಲ್ಲ. ಮಕ್ಕಳಲ್ಲಿ ಪರಿಸರದ ಜ್ಞಾನ ಮೂಡಿಸಲು ಈ ಶಾಲೆಯಲ್ಲಿ ವಿಶೇಷ ಪ್ರಯತ್ನ ನಡೆಯುತ್ತಿದೆ.

1964ರಲ್ಲಿ ಸ್ಥಾಪನೆಯಾದ ಈ ಶಾಲೆಯಲ್ಲಿ ಈಗ 44 ವಿದ್ಯಾರ್ಥಿಗಳಿದ್ದಾರೆ. ತಾಲ್ಲೂಕು ಕೇಂದ್ರದಿಂದ ಸುಮಾರು 28 ಕಿ.ಮೀ ದೂರದಲ್ಲಿದೆ. ಈ ಶಾಲೆಯ ಮುಖ್ಯ ಶಿಕ್ಷಕರಾಗಿ ದರ್ಶನ ಹರಿಕಾಂತ, ಸಹಶಿಕ್ಷಕರಾಗಿ ಮೈತ್ರಿ ಹೆಗಡೆ ಮತ್ತು ಶ್ಯಾಮಲಾ ನಾಯ್ಕ ಕೆಲಸ ಮಾಡುತ್ತಿದ್ದಾರೆ. ಚಂದ್ರಶೇಖರ ಗೌಡ ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದಾರೆ. ಈ ಶಾಲೆಯಲ್ಲಿ 15 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಅಂಕೋಲಾ ತಾಲ್ಲೂಕಿನ ಬಿಳೇಹೊಂಯ್ಗಿ ಗ್ರಾಮದ ದರ್ಶನ ಹರಿಕಾಂತ, ಈ ಶಾಲೆಯ ಸುತ್ತಲಿನ ಪ್ರದೇಶದ ಇತಿಹಾಸವನ್ನು ದಾಖಲಿಸಿ ‘ಹುಲ್ಕುತ್ರಿ ಸಂಸ್ಕೃತಿ’ ಎಂಬ ಪುಸ್ತಕವನ್ನೂ ಪ್ರಕಟಿಸಿದ್ದಾರೆ.

ಹುಲ್ಕುತ್ರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಲ್ಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಾವಿನಬೀಳು ಗ್ರಾಮದಲ್ಲಿದೆ. ಬೇಸಿಗೆಯಲ್ಲಿ ಮಾತ್ರ ಬಸ್ ಸೌಲಭ್ಯವಿರುವುದರಿಂದ ಮಳೆಗಾಲದಲ್ಲಿ ಪಟ್ಟಣದಿಂದ ಇಲ್ಲಿಗೆ ಬರುವುದೂ ಕಷ್ಟವೇ. ಆದರೂ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ.

ಗ್ರಾಮಸ್ಥರ ನೆರವಿನಿಂದ₹ 50 ಸಾವಿರ ವೆಚ್ಚದಲ್ಲಿ ಇಲ್ಲಿ ಸ್ಮಾರ್ಟ್ ಕ್ಲಾಸ್ ರೂಪಿಸಲಾಗಿದೆ. ನಲಿ–ಕಲಿ ಕೊಠಡಿಯನ್ನು ಅಗತ್ಯ ಪೀಠೋಪಕರಣಗಳನ್ನು ಸಜ್ಜುಗೊಳಿಸಲಾಗಿದೆ. ಮಕ್ಕಳಿಗೆ ತಮ್ಮ ಗ್ರಾಮದ ಸುತ್ತಲೂ ಇರುವ ಸ್ಥಳಗಳನ್ನು ವಿಶೇಷತೆಗಳನ್ನು ತಿಳಿಸಿಕೊಡುವ ದೃಷ್ಟಿಯಿಂದ ಚಾರಣವನ್ನು ಆಯೋಜಿಸಲಾಗುತ್ತಿದೆ. ಶಾಲೆಯ ಪಕ್ಕದ ಅಘನಾಶಿನಿ ನದಿ ತೀರದ ತೆಪ್ಪಸಾಲಿನಲ್ಲಿ ಹೊರಸಂಚಾರ ಮತ್ತು ಸ್ಥಳೀಯರೊಂದಿಗೆ ಸೇರಿ ಹೊಳೆ ಊಟ ಏರ್ಪಡಿಸಲಾಗುತ್ತದೆ. ಐದು ವರ್ಷಗಳಿಂದ ಮೆಟ್ರಿಕ್ ಸಂತೆ ಅದ್ಧೂರಿಯಾಗಿ ನಡೆಯುತ್ತಿದೆ.

‘ಗ್ರಾಮೀಣ ಭಾಗದಲ್ಲಿದ್ದರೂ ನಮ್ಮ ಶಾಲೆಯಲ್ಲಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ನವೋದಯ ಶಾಲೆ, ಮೊರಾರ್ಜಿ ಶಾಲೆ ಮತ್ತು ಆಳ್ವಾಸ್ ಸೇರಿದಂತೆ ಪ್ರತಿಷ್ಠಿತ ಶಿಕ್ಷಣ ಕೇಂದ್ರಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದು ನಮಗೆ ಹೆಮ್ಮೆಯ ಸಂಗತಿ’ಎನ್ನುತ್ತಾರೆಮುಖ್ಯ ಶಿಕ್ಷಕ ದರ್ಶನ ಹರಿಕಾಂತ.

ಸ್ಥಳೀಯರು ಹಾಗೂ ದಾನಿಗಳು ನೀಡಿದ ಆರ್ಥಿಕ ಸಹಕಾರದಿಂದ ಮಕ್ಕಳ ಶಿಕ್ಷಣಕ್ಕೆ ಅಗತ್ಯವಾದ ಹಲವು ಸೌಕರ್ಯಗಳನ್ನು ಈ ಶಾಲೆಯಲ್ಲಿ ರೂಪಿಸಿಕೊಳ್ಳಲಾಗಿದೆ. ಆದರೆ ಶಾಲೆಯ ನಾಲ್ಕು ಕೊಠಡಿಗಳು ಶಿಥಿಲಾವಸ್ಥೆ ಗೊಂಡಿದ್ದು, ಶಾಲೆಗೆ ಸುಸಜ್ಜಿತ ಕಟ್ಟಡದ ಅಗತ್ಯವಿದೆ ಎನ್ನುತ್ತಾರೆ ಸ್ಥಳೀಯರು.

ಕೃಷಿಯ ಪ್ರಾಯೋಗಿಕ ಅಧ್ಯಯನ:ಮಕ್ಕಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಬೆಳೆಸಲು ಈ ಶಾಲೆಯಲ್ಲಿ ನಡೆಸಿರುವ ಪ್ರಯೋಗ ಮಾರ್ಗದರ್ಶಕವಾಗಿದೆ. ವಿದ್ಯಾರ್ಥಿಗಳುಪಕ್ಕದ ಊರಿನಲ್ಲಿ ಸ್ವತಃ ಭತ್ತದ ಗದ್ದೆಯಲ್ಲಿ ನಾಟಿ ಮಾಡಿದ್ದಾರೆ. ಗದ್ದೆಯ ಭತ್ತದ ಸಸಿಗಳ ಬೆಳವಣಿಗೆಯನ್ನು ಪ್ರತಿ 15 ದಿನಗಳಿಗೊಮ್ಮೆ ವೀಕ್ಷಿಸುತ್ತಿದ್ದಾರೆ. ಭತ್ತದ ಕೊಯ್ಲು ಮಾಡಿ, ಕಾಳುಗಳನ್ನು ಬೇರ್ಪಡಿಸುವ ಕೆಲಸದಲ್ಲಿಯೂ ಕೈಜೋಡಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT