ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿದ ನೀರು, ಮೇಲೆದ್ದ ಊರು!

ಸೂಪಾ: 2003ರ ಬಳಿಕ ಕನಿಷ್ಠ ಮಟ್ಟಕ್ಕೆ ತಲುಪಿದ ನೀರಿನ ಸಂಗ್ರಹ
Last Updated 11 ಜೂನ್ 2022, 15:33 IST
ಅಕ್ಷರ ಗಾತ್ರ

ಜೊಯಿಡಾ (ಉತ್ತರ ಕನ್ನಡ): ರಾಜ್ಯದ ಬೃಹತ್ ಜಲಾಶಯಗಳಲ್ಲಿ ಒಂದಾಗಿರುವ ತಾಲ್ಲೂಕಿನ ಸೂಪಾ ಜಲಾಶಯದ ಒಡಲು ಈ ಬಾರಿ ಬರಿದಾಗಿದೆ. ಜಲಾಶಯ ನಿರ್ಮಾಣದ ಬಳಿಕ ಮುಳುಗಡೆಯಾಗಿದ್ದ ಹಳ್ಳಿಗಳಲ್ಲಿದ್ದ ಬಾವಿಗಳು, ಮನೆಗಳ ಅವಶೇಷಗಳು, ದೇವಸ್ಥಾನಗಳ ಕುರುಹುಗಳು ಕೆಸರಿನ ಮಧ್ಯೆ ಮತ್ತೆ ಕಾಣಿಸಿಕೊಂಡಿದ್ದು, ಮೂಲ ನಿವಾಸಿಗಳನ್ನು ಭಾವುಕರನ್ನಾಗಿಸಿವೆ.

ಈ ಬಾರಿ ಬೇಸಿಗೆಯಲ್ಲಿ ವಿದ್ಯುತ್ ಉತ್ಪಾದನೆಗಾಗಿ ನಿರಂತರವಾಗಿ ನೀರನ್ನು ಹೊರಬಿಡಲಾಗಿದೆ. ಜಲಾಶಯದ ಜಲಾನಯದ ಪ್ರದೇಶದಲ್ಲಿ ನೀರಿನ ಸಂಗ್ರಹ ಇಳಿಕೆಯಾಗಲು ಇದು ಮುಖ್ಯ ಕಾರಣವಾಗಿದೆ. ಮುಳುಗಡೆಯಾಗಿದ್ದ ಗ್ರಾಮಗಳ ಅವಶೇಷಗಳನ್ನು ನೋಡಲು ಸ್ಥಳೀಯರು ಭೇಟಿ ನೀಡುತ್ತಿದ್ದಾರೆ.

ಸುಮಾರು 47 ಹಳ್ಳಿಗಳು ಜಲಾಶಯದ ಹಿನ್ನೀರಿನಲ್ಲಿ ಮುಳುಗಿದ್ದವು. ಈಗ ಕಾಣಿಸುತ್ತಿರುವುದು ಹಸನಗಾಂವ, ಟಿಟವಾಲಿ, ಬಿರೋಡೆ, ಮಳಕುಂಡಿ ಸೇರಿದಂತೆ ಹಲವು ಗ್ರಾಮಗಳ ದೇವಸ್ಥಾನಗಳು, ಕುಡಿಯುವ ನೀರಿನ ಬಾವಿಗಳು ಎಂದು ಈ ಭಾಗದ ಹಿರಿಯರು ಊಹಿಸಿದ್ದಾರೆ.

ಜಲಾಶಯದಲ್ಲಿ ಶನಿವಾರ (ಜೂನ್ 11) ನೀರಿನ ಮಟ್ಟ 519 ಮೀಟರ್ ಇತ್ತು. 21.810 ಟಿ.ಎಂ.ಸಿ ಅಡಿ ನೀರಿದ್ದು, ಜಲಾಶಯದ ಸಾಮರ್ಥ್ಯದ ಶೇ 14.78ರಷ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 535.49 ಮೀಟರ್ ಅಂದರೆ 53.211 ಟಿ.ಎಂ.ಸಿ ಅಡಿ ನೀರಿನ ಸಂಗ್ರಹವಿತ್ತು.

1990ರಿಂದ 2022ರ ಅವಧಿಯಲ್ಲಿ ಸೂಪಾ ಜಲಾಶಯವು ತನ್ನ ಪೂರ್ಣ ಸಾಮರ್ಥ್ಯದಲ್ಲಿ ಭರ್ತಿಯಾಗಿದ್ದು 2006ರಲ್ಲಿ ಮಾತ್ರ. ಆಗ ಒಟ್ಟು 564 ಮೀಟರ್‌ಗಳಷ್ಟು ಎತ್ತರಕ್ಕೆ ನೀರು ಸಂಗ್ರಹವಾಗಿತ್ತು. 2019ರಲ್ಲಿ ಭಾರಿ ಮಳೆಯಿಂದ ಒಳ ಹರಿವು ಗಣನೀಯವಾಗಿ ಏರಿಕೆಯಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ಜಲಾಶಯದ ಕ್ರೆಸ್ಟ್ ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗಿತ್ತು.

‘ಜಲಾಶಯ ನಿರ್ಮಾಣದ ನಂತರ 2003ರಲ್ಲಿ ನೀರಿನ ಸಂಗ್ರಹವು 506.80 ಮೀಟರ್‌ಗೆ ಇಳಿಕೆಯಾಗಿತ್ತು. ಇದು ಈವರೆಗಿನ ಅತಿ ಕಡಿಮೆ ಸಂಗ್ರಹವಾಗಿದೆ. ಆಗಲೂ ಮುಳುಗಿದ್ದ ಗ್ರಾಮದ ಕುರುಹುಗಳು ಕಂಡಿದ್ದವು. ಆದರೆ, ಈಗಿನಂತೆ ಸಾಮಾಜಿಕ ಜಾಲತಾಣಗಳು ಇಲ್ಲದ ಕಾರಣ ಹೊರ ಜಗತ್ತಿನ ಗಮನಕ್ಕೆ ಬರಲಿಲ್ಲ’ ಎಂದು ಜೊಯಿಡಾ ನಿವಾಸಿ ಮಹಾದೇವ ದೇಸಾಯಿ ಹೇಳುತ್ತಾರೆ.

ಅಧಿಕ ವಿದ್ಯುತ್ ಉತ್ಪಾದನೆ:

‘ಈ ಬಾರಿ ಸೂಪಾ ಜಲಾಶಯದಲ್ಲಿರುವ ನೀರನ್ನು ಬಳಸಿಕೊಂಡು ಸೂಪಾ, ಕದ್ರಾ ಹಾಗೂ ನಾಗಝರಿ ಕೇಂದ್ರಗಳಲ್ಲಿ ಅಧಿಕ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಲಾಗಿದೆ. ಬೇಸಿಗೆಯಿಡೀ ನೀರನ್ನು ಸಂಗ್ರಹಿಸಿಟ್ಟು ಮಳೆಗಾಲದಲ್ಲಿ ನದಿಗೆ ಹರಿಸುವ ಬದಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಜಲಾಶಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಿಂಗಣ್ಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

–––––

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT