ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಜಾತಾ ಕುಸ್ತಿಯಲ್ಲಿ ‘ಕರ್ನಾಟಕದ ಕಿಶೋರಿ’

ತಂದೆಯಿಂದಲೇ ಮೊದಲ ತರಬೇತಿ: ಕಿರಿಯ ವಯಸ್ಸಿಗೇ ಸಾಧನೆಯ ಹಂಬಲ
Last Updated 23 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಕಾರವಾರ: ಕುಸ್ತಿ ಅಖಾಡಾದಲ್ಲಿ ತಂದೆಯ ಜೊತೆ ಆಗಾಗ ಪಟ್ಟು ಹಾಕುತ್ತಿದ್ದ ಹುಡುಗಿ ಇಂದು ರಾಷ್ಟ್ರಮಟ್ಟದ ಕುಸ್ತಿಪಟುವಾಗಿ ಬೆಳೆದು ನಿಂತಿದ್ದಾಳೆ.

ಹಳಿಯಾಳ ತಾಲ್ಲೂಕಿನ ಸಾತ್ನಳ್ಳಿ ಗ್ರಾಮದ ತುಕಾರಾಮ್ ಪಾಟೀಲ್ ಹಾಗೂ ಜೀಜಾಬಾಯಿ ದಂಪತಿಯ ಪುತ್ರಿ ಸುಜಾತಾ ಪಾಟೀಲ ಕುಸ್ತಿ ಅಖಾಡದಲ್ಲಿ ‘ಕರ್ನಾಟಕದ ಕಿಶೋರಿ’ ಎಂಬ ಬಿರುದಿಗೂ ಪಾತ್ರಳಾಗಿದ್ದಾಳೆ.

ಅಂತರರಾಷ್ಟ್ರೀಯ ಮಟ್ಟದ ಕುಸ್ತಿಪಟುವಾಗಿ ಬೆಳೆಯಬೇಕು ಎನ್ನುವ ಇರಾದೆ ಹೊಂದಿರುವ ಈಕೆ, ಹಳಿಯಾಳ ತಾಲ್ಲೂಕಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಸತಿ ನಿಲಯದಲ್ಲಿ 10ನೇ ತರಗತಿ ವ್ಯಾಸಂಗ ಪೂರ್ಣಗೊಳಿಸಿದ್ದಾಳೆ. ಇದೀಗ ಪದವಿಪೂರ್ವ ವಿದ್ಯಾರ್ಥಿಗಳ ಕ್ರೀಡಾ ವಸತಿ ನಿಲಯದ ಆಯ್ಕೆ ಶಿಬಿರಕ್ಕೆಂದು ಬುಧವಾರ ದಾವಣಗೆರೆಗೆ ಹೊರಟಿದ್ದಾಳೆ. ಅಲ್ಲಿಯೂ ಆಯ್ಕೆಗೊಳ್ಳುವ ವಿಶ್ವಾಸ ಹೊಂದಿದ್ದಾಳೆ.

ಕಿರಿಯ ವಯಸ್ಸು: ಐದನೇ ತರಗತಿಯಲ್ಲಿರುವಾಗಲೇ ಕುಸ್ತಿ ಅಖಾಡಕ್ಕೆ ಇಳಿದಿದ್ದ ಸುಜಾತಾಳಿಗೆ ತಂದೆ ತುಕಾರಾಮ್ ಪಾಟೀಲ್ ಪ್ರೋತ್ಸಾಹ ನೀಡಿದರು. ಹೀಗಾಗಿ ಅಲ್ಲಿಂದ ಕುಸ್ತಿಯಲ್ಲಿ ಸೆಣಸಾಟ ಪ್ರಾರಂಭಿಸಿ, ಕ್ರೀಡಾ ಶಾಲೆಗೆ ಸೇರಿ ಮತ್ತಷ್ಟು ಬಲಿಷ್ಠವಾದಳು. ವಸತಿ ನಿಲಯದ ಕುಸ್ತಿ ತರಬೇತುದಾರರಾದ ಕಾಡೇಶ ನ್ಯಾಮಗೌಡ ಹಾಗೂ ಬಾಳಕೃಷ್ಣ ದಡ್ಡಿ ಕುಸ್ತಿಯಲ್ಲಿನ ವಿವಿಧ ಕೌಶಲಗಳನ್ನು ಬೋಧಿಸಿದರು. ಅವುಗಳನ್ನೆಲ್ಲ ಈಕೆ ಚಾಚೂ ತಪ್ಪದೇ ಮೈಗೂಡಿಸಿಕೊಂಡಳು.

ನಾಲ್ಕು ಬಾರಿ ರಾಷ್ಟ್ರಮಟ್ಟಕ್ಕೆ: ಸುಜಾತಾ, ಒಟ್ಟು ನಾಲ್ಕು ಬಾರಿ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾಳೆ. 2017– 18ನೇ ಸಾಲಿನಲ್ಲಿ ಮಹಾರಾಷ್ಟ್ರ, 2018– 19ನೇ ಸಾಲಿನಲ್ಲಿ ಒಡಿಶಾ, ಹರಿಯಾಣ ಹಾಗೂ ಉತ್ತರ ಪ್ರದೇಶದಲ್ಲಿ ನಡೆದ ಪಂದ್ಯಾವಳಿಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾಳೆ. ಹರಿಯಾಣದಲ್ಲಿ ನಡೆದ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಪಡೆದಿದ್ದಾಳೆ.

ಹಳಿಯಾಳದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದುಕೊಂಡಿದ್ದಳು. ಆಗ ಆರನೇ ತರಗತಿಯಲ್ಲಿದ್ದಳು. ಅಂದಿನಿಂದ ಶುರುವಾದ ಪದಕಗಳ ಬೇಟೆ ಇಂದಿಗೂ ಮುಂದುವರಿದಿದೆ.

ಕುಸ್ತಿ ಕುಟುಂಬ:ತುಕಾರಾಮ್ ಪಾಟೀಲ್ ಅವರದ್ದು ‘ಕುಸ್ತಿ ಕುಟುಂಬ’ ಎಂದೇ ಪ್ರಸಿದ್ಧವಾಗಿದೆ. ಸ್ವತಃ ಅವರು ಕೂಡ ಈ ಮೊದಲು ಕುಸ್ತಿ ಆಡುತ್ತಿದ್ದರು. ನಂತರ ತಮ್ಮ ಇಬ್ಬರು ಹೆಣ್ಣು ಮಕ್ಕಳಿಗೆ ಹಾಗೂ ಒಬ್ಬ ಮಗನಿಗೂ ಕುಸ್ತಿ ತರಬೇತಿ ನೀಡಿ, ಅವರನ್ನೂ ‘ಪೈಲ್ವಾನ್’ಗಳನ್ನಾಗಿ ಮಾಡಿದ್ದಾರೆ.

ಸುಜಾತಾ ಈಗ ಕುಸ್ತಿಯಲ್ಲಿ ಮಿಂಚುತ್ತಿದ್ದರೆ, ಈಕೆಯ ಅಕ್ಕ ಸುವರ್ಣಾ ಕೂಡ ರಾಷ್ಟ್ರೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಕೊಲ್ಲಾಪುರದಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇತ್ತ ಅಣ್ಣ ಸಹದೇವ ಕೂಡ ಕುಸ್ತಿಪಟುವಾಗಿದ್ದು, ಸದ್ಯ ಅಷ್ಟಾಗಿ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಿಲ್ಲ. ಇನ್ನೊಬ್ಬ ಅಕ್ಕ ಕುಮಾರಿ ಅಥ್ಲೆಟಿಕ್ಸ್‌ನಲ್ಲಿ ಮಿಂಚುತ್ತಿದ್ದಾರೆ.

‘ನನ್ನಂತೆಯೇ ಹೆಣ್ಣು ಮಕ್ಕಳನ್ನು ಕುಸ್ತಿಪಟುಗಳನ್ನಾಗಿ ತಯಾರು ಮಾಡಿದ್ದೇನೆ. ಗಂಡು ಮಕ್ಕಳಂತೆ ಅವರೂ ಅಖಾಡದಲ್ಲಿ ಕುಸ್ತಿ ಆಡುತ್ತಾರೆ. ಇದು ಹೆಮ್ಮೆ ಎನಿಸುತ್ತದೆ’ ಎಂದು ತುಕಾರಾಮ್ ಪಾಟೀಲ್ ಸಂತೋಷ ವ್ಯಕ್ತಪಡಿಸಿದರು.

ಕುಸ್ತಿಯಲ್ಲಿ ಪ್ರಶಸ್ತಿಗಳ ಸಾಲು

* ಹಳಿಯಾಳದಲ್ಲಿ 2014ರಿಂದ 2018ರವರೆಗೆ ನಡೆದ ರಾಜ್ಯ ಮತ್ತು ರಾಷ್ಟ್ರೀಯ ಪಂದ್ಯಾವಳಿಯಲ್ಲಿ ನಾಲ್ಕು ಬಾರಿ ಪ್ರಥಮ

* 2018– 19ರಲ್ಲಿ ಹಳಿಯಾಳದಲ್ಲಿ ನಡೆದ ರಾಜ್ಯ ಮತ್ತು ರಾಷ್ಟ್ರೀಯ ಪಂದ್ಯಾವಳಿಯಲ್ಲಿ ದ್ವಿತೀಯ

* ಆಳ್ವಾಸ್‌ನಲ್ಲಿ 2017– 18ರಲ್ಲಿ ಪಂದ್ಯಾವಳಿಯಲ್ಲಿ ಪ್ರಥಮ

* 2019– 20ರಲ್ಲಿ ಬೆಳಗಾವಿಯಲ್ಲಿ ನಡೆದ ಕರ್ನಾಟಕ ಕುಸ್ತಿ ಹಬ್ಬದಲ್ಲಿ ಪ್ರಥಮ

* 2016– 17 ಹಾಗೂ 2018– 19ರಲ್ಲಿ ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ

* ವಿಜಯಪುರದಲ್ಲಿ 2017– 18ರಲ್ಲಿ ನಡೆದ ರಾಜ್ಯಮಟ್ಟದ ಟೂರ್ನಿಯಲ್ಲಿ ದ್ವಿತೀಯ

* ಜಮಖಂಡಿಯಲ್ಲಿ 2016– 17ರಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ದ್ವಿತೀಯ

* ಮೈಸೂರಿನಲ್ಲಿ 2018– 19ರಲ್ಲಿ ನಡೆದ ರಾಜ್ಯ ಮತ್ತು ರಾಷ್ಟ್ರಮಟ್ಟದ ದಸರಾ ಕುಸ್ತಿಯಲ್ಲಿ ದ್ವಿತೀಯ

* 2015– 16ರಲ್ಲಿ ಗದಗದಲ್ಲಿ ನಡೆದ ರಾಜ್ಯಮಟ್ಟದಸೆಣಸಾಟದಲ್ಲಿತೃತೀಯ

* 2017– 18ರಲ್ಲಿ ಕುಂಬಾರಹಳ್ಳಿಯಲ್ಲಿ ನಡೆದ ರಾಜ್ಯಮಟ್ಟದ ಪೈಪೋಟಿಯಲ್ಲಿ ತೃತೀಯ

* 2018– 19ರಲ್ಲಿ ಹಳಿಯಾಳದಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿಯಲ್ಲಿ ಪ್ರಥಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT