ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರದ ಕರ್ಫ್ಯೂಗೆ ಜನರ ಬೆಂಬಲ

ಕಾರವಾರದ ಬಸ್ ನಿಲ್ದಾಣದಲ್ಲಿ ಬಾಕಿಯಾದ ತಾಯಿ, ಮಗಳಿಗೆ ಪೊಲೀಸರ ಸಹಾಯ
Last Updated 24 ಮೇ 2020, 12:40 IST
ಅಕ್ಷರ ಗಾತ್ರ

ಕಾರವಾರ:ಕೊರೊನಾ ವೈರಸ್ ಹರಡುವುದನ್ನು ತಡೆಯಲು ಭಾನುವಾರ ಜಾರಿ ಮಾಡಲಾದ ಕರ್ಫ್ಯೂಗೆ ನಗರದಲ್ಲಿ ನಾಗರಿಕರಿಂದ ಉತ್ತಮ ಬೆಂಬಲ ವ್ಯಕ್ತವಾಯಿತು. ಜೀವನಾವಶ್ಯಕ ವಸ್ತುಗಳ ಪೂರೈಕೆಯನ್ನು ಹೊರತುಪಡಿಸಿ ಮತ್ಯಾವುದೇ ಚಟುವಟಿಕೆಗಳಿಗೆ ಅವಕಾಶ ಇರಲಿಲ್ಲ. ಹಾಗಾಗಿ ಜನರೂ ಮನೆಗಳಿಂದ ಹೊರ ಬಾರದೇ ಉಳಿದುಕೊಂಡರು.

ಕೆಲವು ದಿನಸಿ ಅಂಗಡಿಗಳು, ಅಲ್ಲಲ್ಲಿ ತರಕಾರಿ, ಹಣ್ಣು ಮಾರಾಟಗಾರರು, ಔಷಧಿ ಮಳಿಗೆಗಳು ಮಾತ್ರ ಬಾಗಿಲು ತೆರೆದಿದ್ದವು. ಆಟೊರಿಕ್ಷಾ, ಬಸ್, ಟೆಂಪೊ, ಖಾಸಗಿ ವಾಹನಗಳ ಸಂಚಾರ ಇರಲಿಲ್ಲ. ಬಟ್ಟೆ ಮಳಿಗೆ, ಹೋಟೆಲ್‌ಗಳು, ಬೇಕರಿಗಳು, ಕಟ್ಟಡ ಸಾಮಗ್ರಿ ವ್ಯಾಪಾರಸ್ಥರು, ಕ್ಷೌರಿಕರು ಕರ್ಫ್ಯೂಗೆ ಸಹಕರಿಸಿದರು. ಹೀಗಾಗಿ ನಗರದಲ್ಲಿ ಒಂದು ರೀತಿಯ ಬಂದ್ ವಾತಾವರಣ ಕಂಡುಬಂತು.

ಮಹಾತ್ಮಗಾಂಧಿ ರಸ್ತೆ, ಪಿಕಳೆ ರಸ್ತೆ, ಕೋಡಿಬಾಗ ರಸ್ತೆ, ಗ್ರೀನ್‌ಸ್ಟ್ರೀಟ್, ಹಬ್ಬುವಾಡ ಮುಂತಾದೆಡೆ ಜನಸಂಚಾರವಿಲ್ಲದೇ ಬಿಕೊ ಎನ್ನುವಂತಿತ್ತು.ಲಾಕ್‌ಡೌನ್ ನಿಯಮವನ್ನು ಸಡಿಲಿಸಿದ ಬಳಿಕ ನಗರದಲ್ಲಿ ಜನರ ಸಂಚಾರ ಹೆಚ್ಚಾಗಿತ್ತು. ಹಲವೆಡೆ ಪರಸ್ಪರ ಅಂತರ ಕಾಯ್ದುಕೊಳ್ಳುವುದನ್ನು ಮರೆಯುತ್ತಿರುವ ದೂರುಗಳೂ ಕೇಳಿ ಬಂದಿದ್ದವು.

ರಸ್ತೆ ಬದಿಯ ಅಲ್ಲಲ್ಲಿ ತರಕಾರಿ, ಮೀನು ಮಾರಾಟ ಮಾಡುತ್ತಿದ್ದವರಿಗೆ ನಗರಸಭೆಯಿಂದ ಎಂ.ಜಿ ರಸ್ತೆ ಮತ್ತು ಕೈಗಾ ರಸ್ತೆಯಲ್ಲಿ ಕುಳಿತು ವ್ಯಾಪಾರಕ್ಕೆ ಅವಕಾಶ ನೀಡಲಾಗಿತ್ತು. ಇದರಿಂದ ಜನರು ಒಂದೇ ಕಡೆ ಗುಂಪುಗೂಡುವುದನ್ನು ನಿಯಂತ್ರಿಸಲು ಪ್ರಯತ್ನಿಸಲಾಗಿತ್ತು.

ಪೊಲೀಸರ ಮಾನವೀಯತೆ: ಭಾನುವಾರ ಕರ್ಫ್ಯೂ ಇರುವ ಮಾಹಿತಿಯಿಲ್ಲದೇ ಕಾರವಾರಕ್ಕೆ ಶನಿವಾರ ಸಂಜೆ ಬಂದಿದ್ದ ತಾಯಿ ಮತ್ತು ಮಗಳು ನಗರದ ಬಸ್ ನಿಲ್ದಾಣದಲ್ಲೇ ರಾತ್ರಿ ಕಳೆಯುವಂತಾಯಿತು. ಅವರು ಕೊಡಗಿನ ವಿರಾಜಪೇಟೆಯ ಮನೆಯೊಂದರಲ್ಲಿನರ್ಸ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ತಮ್ಮ ಊರು ಮಹಾರಾಷ್ಟ್ರಕ್ಕೆ ತೆರಳಲು ಅವರು ಗೋವಾ ಬಸ್‌ಗಾಗಿ ಕಾಯುತ್ತಿದ್ದರು.‌ ‘ಸೇವಾ ಸಿಂಧು’ ತಂತ್ರಾಂಶದ ಮೂಲಕ ಅವರು ಪರವಾನಗಿಯನ್ನೂ ಪಡೆದುಕೊಂಡಿದ್ದರು.

ತಮಗೆ ಪರಿಚಯವಿಲ್ಲದ ಊರಿನಲ್ಲಿ, ಬಸ್‌ಗಳಿಲ್ಲದೇ ಮುಂದೇನು ಮಾಡಬೇಕು ಎಂದು ತಿಳಿಯದೇಗಾಬರಿಯಲ್ಲಿ ಕುಳಿತಿದ್ದ ಅವರನ್ನು ನಗರದ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಗಮನಿಸಿದರು. ಪಿಎಸ್ಐ ನಿಂಗಣ್ಣ ಜಕ್ಕಣನವರ್ ತಾಯಿ, ಮಗಳಿಗೆ ಸಮಾಧಾನ ಹೇಳಿದರು. ಜೊತೆಗೆ, ಅವರಿಗೆ ತಿಂಡಿ, ಕುಡಿಯಲು ನೀರು ಒದಗಿಸಿದರು. ಬಳಿಕ ಇಬ್ಬರಿಗೂ ನಗರದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಿ ಗೋವಾ ಮೂಲಕ ಮಹಾರಾಷ್ಟ್ರಕ್ಕೆ ಕಳುಹಿಸಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ಸಕ್ರಿಯ ಪ್ರಕರಣ 36ಕ್ಕೇರಿಕೆ:ಯಲ್ಲಾಪುರಕ್ಕೆಮಹಾರಾಷ್ಟ್ರದಿಂದ ಮರಳಿರುವ ದಂಪತಿಯಲ್ಲಿ ಕೋವಿಡ್ 19 ಭಾನುವಾರ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 36ಕ್ಕೇರಿದೆ.

ಹೊಸದಾಗಿ ಖಚಿತಪಟ್ಟಿರುವ ಪ್ರಕರಣಗಳಲ್ಲಿ ಪತ್ನಿಗೆ 21 ವರ್ಷ (ರೋಗಿ ಸಂಖ್ಯೆ 2021) ಹಾಗೂ ಪತಿಗೆ 24 ವರ್ಷ (ರೋಗಿ ಸಂಖ್ಯೆ 2022) ಎಂದು ಆರೋಗ್ಯ ಇಲಾಖೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇಬ್ಬರೂ ಕ್ವಾರಂಟೈನ್ ಕೇಂದ್ರದಲ್ಲೇ ಇದ್ದರು. ಅವರನ್ನು ಕಾರವಾರದ ಕೋವಿಡ್ ವಾರ್ಡ್‌ಗೆ ದಾಖಲಿಸಲಾಗಿ‌ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT