ಚುನಾವಣೆಗೆ ದೇಶಪಾಂಡೆ ನೇತೃತ್ವ ಹಾಸ್ಯಾಸ್ಪದ: ಸುನೀಲ್ ಹೆಗಡೆ ವಾಗ್ದಾಳಿ

ಶುಕ್ರವಾರ, ಏಪ್ರಿಲ್ 26, 2019
36 °C

ಚುನಾವಣೆಗೆ ದೇಶಪಾಂಡೆ ನೇತೃತ್ವ ಹಾಸ್ಯಾಸ್ಪದ: ಸುನೀಲ್ ಹೆಗಡೆ ವಾಗ್ದಾಳಿ

Published:
Updated:

ಶಿರಸಿ: ಸಚಿವ ಆರ್.ವಿ. ದೇಶಪಾಂಡೆ ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಕಳೆದ ವಿಧಾನಸಭಾ ಚುನಾವಣೆ ವೇಳೆ ಆರೋಪ ಮಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಪ್ರಸ್ತುತ ಅವರ ನೇತೃತ್ವದಲ್ಲೇ ಉತ್ತರ ಕನ್ನಡದಲ್ಲಿ ಲೋಕಸಭೆ ಚುನಾವಣೆ ಎದುರಿಸಲು ಸಜ್ಜಾಗಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಧುರೀಣ ಸುನೀಲ್ ಹೆಗಡೆ ಟೀಕಿಸಿದರು.

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿರೋಧ ಪಕ್ಷದಲ್ಲಿದ್ದ ಸಂದರ್ಭದಲ್ಲಿ ದೇಶಪಾಂಡೆಯವರ ಮೇಲೆ ಭೂಮಿ ಅತಿಕ್ರಮಣ ಆರೋಪ ಹೊರಿಸಿದ್ದ ಕುಮಾರಸ್ವಾಮಿ ಈಗ ಅವರನ್ನು ಸಚಿವ ಸಂಪುಟದಲ್ಲಿಟ್ಟುಕೊಂಡಿದ್ದಾರೆ. ಯಾರು ಸುಳ್ಳರು ಎಂಬುದು ಜನತೆಗೆ ತಿಳಿಯುತ್ತಿದೆ. ದೇಶಪಾಂಡೆ ಅವರ ಮೇಲೆ ಪ್ರಕರಣ ದಾಖಲಿಸುತ್ತೇನೆ ಎಂದು ಹೇಳಿದ್ದ ಕುಮಾರಸ್ವಾಮಿ, ಅವರನ್ನಿಟ್ಟುಕೊಂಡು ಚುನಾವಣೆ ಮಾಡುತ್ತಾರೆ. ಧೈರ್ಯವಿದ್ದರೆ ಅವರು ದೇಶಪಾಂಡೆ ವಿರುದ್ಧ ತನಿಖೆ ನಡೆಸಬೇಕು ಎಂದು ಸವಾಲು ಹಾಕಿದರು.

ರಾಜ್ಯ ಸರ್ಕಾರದ ರೈತರ ಸಾಲಮನ್ನಾ ಭರವಸೆಯಾಗಿಯೇ ಉಳಿದಿದೆ. ರೈತರಿಗೆ ಸಾಲಮನ್ನಾ ಆಗಿದೆ ಎಂದು ಫೆಬ್ರುವರಿಯಲ್ಲಿ ಪತ್ರ ಕಳುಹಿಸಲಾಗಿತ್ತು. ಆದರೆ, ಅದೇ ರೈತರು ಮಾರ್ಚ್‌ನಲ್ಲಿ ಸಹಕಾರಿ ಸಂಘಗಳಿಂದ ಸಾಲ ಮರುಪಾವತಿ ಮಾಡುವಂತೆ ನೋಟಿಸ್ ಪಡೆದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್- ಕಾಂಗ್ರೆಸ್ ಜಂಟಿ ಸಭೆಯಲ್ಲಿ ಬಸವರಾಜ ಹೊರಟ್ಟಿಯವರು ‘ನಾವೆಲ್ಲರೂ ರಾಮಕೃಷ್ಣ ಹೆಗಡೆ ಶಿಷ್ಯಂದಿರು’ ಎಂದಿದ್ದಾರೆ. ಆದರೆ ಜೆಡಿಎಸ್‌ನಲ್ಲಿ ದೇವೇಗೌಡರು, ರಾಮಕೃಷ್ಣ ಹೆಗಡೆ ಅವರನ್ನು ರಾಜಕೀಯವಾಗಿ ಮುಗಿಸಿದ್ದಾರೆ. ಹೊರಟ್ಟಿಗೆ ಸಚಿವ ಸ್ಥಾನ ನೀಡದೇ ವಂಚಿಸಿದ್ದಾರೆ. ಹೆಗಡೆ ಶಿಷ್ಯರಾದ ದೇಶಪಾಂಡೆಯವರ ಪ್ರಾಬಲ್ಯ ಕುಗ್ಗಿಸಲು ಕ್ಷೇತ್ರವನ್ನು ಜೆಡಿಎಸ್‌ಗೆ ಕೊಟ್ಟಿದ್ದಾರೆ. ರಾಮಕೃಷ್ಣ ಹೆಗಡೆ ಬೆಂಬಲಿಗರನ್ನು ರಾಜಕೀಯವಾಗಿ ಬಗ್ಗುಬಡಿಯಲು ಜೆಡಿಎಸ್ ಸಂಚು ನಡೆಸಿದೆ ಎಂದು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !