ಗುರುವಾರ , ನವೆಂಬರ್ 21, 2019
26 °C
ಈ ವಾರ ಈರುಳ್ಳಿ, ಟೊಮೆಟೊ ತುಟ್ಟಿ: ಬಂಗಡೆ ಮೀನಿನ ದರ ಇಳಿಕೆ

ತುಳಸಿ ಹಬ್ಬಕ್ಕೆ ಗೆಣಸು ದುಬಾರಿ

Published:
Updated:
Prajavani

ಕಾರವಾರ: ತುಳಸಿ ಹಬ್ಬದ ಸಮಯದಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ಗೆಣಸಿನ ವ್ಯಾಪಾರ ಈ ಬಾರಿ ನೀರಸವಾಗಿದೆ. ಸಾಂಪ್ರದಾಯಿಕವಾಗಿ ಹಬ್ಬದ ಸಮಯದಲ್ಲಿ ವ್ರತಾಚರಣೆಗೆ ಬಳಸುವ ಗೆಣಸಿನ ಆವಕ ಕಡಿಮೆಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

‘ಹಿಂದಿನ ವರ್ಷ ಕೆ.ಜಿ.ಗೆ ₹ 20ರಲ್ಲಿ ಬಿಕರಿಯಾಗುತ್ತಿತ್ತು. ಆದರೆ, ಈ ಸಲ ₹ 30ರಂತೆ ವ್ಯಾಪಾರವಾಗುತ್ತಿದೆ. ಮಳೆಯಿಂದ ನಿರೀಕ್ಷಿಸಿದಷ್ಟು ಫಸಲು ಬಂದಿಲ್ಲ. ಆವಕ ಕಡಿಮೆಯಾಗಿರುವುದರಿಂದ ₹ 10ರಷ್ಟು ಬೆಲೆ ಏರಿಕೆಯಾಗಿದೆ. ಇದರಿಂದ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಮೊದಲಿನಷ್ಟು ವ್ಯಾಪಾರ ವಹಿವಾಟು ನಡೆಯುತ್ತಿಲ್ಲ’ ಎನ್ನುತ್ತಾರೆ ಬೀದಿ ಬದಿಯ ವ್ಯಾಪಾರಸ್ಥೆ ಕಮಲಾ.

ಈರುಳ್ಳಿ ದುಬಾರಿ: ಕೆ.ಜಿ.ಗೆ ₹ 40 ದರವನ್ನು ಹೊಂದಿದ್ದ ಈರುಳ್ಳಿ, ಒಂದೇ ವಾರದಲ್ಲಿ ಗಣನೀಯ ಏರಿಕೆ ಕಂಡಿದೆ. ಬರೋಬ್ಬರಿ ₹ 20ರಷ್ಟು ಏರಿಕೆಯಾಗಿದ್ದು, ಪ್ರತಿ ಕೆ.ಜಿ.ಗೆ ₹ 60ರಲ್ಲಿ ಮಾರಾಟವಾಗುತ್ತಿದೆ. ಏಕಾಏಕಿ ದುಬಾರಿಯಾಗಿದ್ದು, ಗ್ರಾಹಕರ ಚಿಂತೆಗೆ ಕಾರಣವಾಗಿದೆ. 

ಟೊಮೆಟೊ ಮತ್ತು ಕ್ಯಾರೇಟ್ ತಲಾ ₹ 10ರಷ್ಟು ಏರಿಕೆ ಕಂಡಿದ್ದು, ಪ್ರತಿ ಕೆ.ಜಿ.ಗೆ ₹ 50, ₹ 70ರಲ್ಲಿ ಬಿಕರಿಯಾಗುತ್ತಿದೆ. ಕೆ.ಜಿ.ಗೆ ₹ 100ರ ದರವನ್ನು ಹೊಂದಿದ್ದ ಶುಂಠಿ, ಈಗ ₹ 120ಕ್ಕೆ ಏರಿಕೆಯಾಗಿದೆ. ಮೂಲಂಗಿಯು ಸದ್ಯ ಪ್ರತಿ ಕೆ.ಜಿ.ಗೆ ₹80ರಲ್ಲಿ ಮಾರಾಟವಾಗುತ್ತಿದ್ದರೆ, ಮಿಕ್ಕ ತರಕಾರಿಗಳ ದರದಲ್ಲಿ ಏರುಪೇರು ಕಂಡಿಲ್ಲ. ಆದರೆ, ಮಳೆಗಾಲದ ನಂತರ ತರಕಾರಿಗಳ ದರ ಇಳಿಕೆ ಕಾಣದೇ, ಅಷ್ಟಷ್ಟೇ ಏರಿಕೆಯಾಗುತ್ತ ಸಾಗಿದೆ.

ಪಾಂಫ್ರೆಟ್ ಮೀನು ತುಟ್ಟಿ: ಈ ಮೊದಲು ಮೀನಿನ ಕೊರತೆ ಎದುರಿಸಿದ್ದ ವ್ಯಾಪಾರಸ್ಥರು ಸದ್ಯ ನಿರಾಳರಾಗಿದ್ದಾರೆ. ಮಾರುಕಟ್ಟೆಗೆ ಮೀನಿನ ಆವಕ ಹೇರಳವಾಗಿದೆ. ಆದರೆ, ಬಾಯಲ್ಲಿ ನೀರೂರಿಸುವ ಪಾಂಫ್ರೆಟ್ ಮೀನು ₹ 300ರಷ್ಟು ಏರಿಕೆ ಕಂಡಿದೆ. ಪ್ರತಿ ಕೆ.ಜಿ.ಗೆ ₹500ರಲ್ಲಿ ಮಾರಾಟವಾಗುತ್ತಿತ್ತು. ಆದರೆ ಸದ್ಯ ₹ 800ರಿಂದ ₹ 900ರವರೆಗೆ ದರ ಹೊಂದಿದೆ. ₹ 100ಕ್ಕೆ ನಾಲ್ಕರಿಂದ ಐದು ಸಿಗುತ್ತಿದ್ದ ಬಂಗಡೆ ಮೀನು, ಸದ್ಯ ಎಂಟರಿಂದ ಹತ್ತರವರೆಗೆ ಸಿಗುತ್ತಿದೆ. 

ಕಾರವಾರ ಮಾರುಕಟ್ಟೆ

ತರಕಾರಿ      ದರ (₹ಗಳಲ್ಲಿ)

ಆಲೂಗಡ್ಡೆ      30

ಟೊಮೆಟೊ     50

ಸೌತೆಕಾಯಿ      40

ತೊಂಡೆಕಾಯಿ 60

ಬೀನ್ಸ್              80

ಬೆಂಡೆಕಾಯಿ    60

ಕ್ಯಾರೆಟ್           70

ಬೀಟ್‌ರೂಟ್    40

ಕ್ಯಾಪ್ಸಿಕಂ        60

ಬದನೆಕಾಯಿ    60

ಹೂಕೋಸು     40

ಕ್ಯಾಬೇಜ್         40

ಮೆಣಸಿನಕಾಯಿ 60

ಬೆಳ್ಳುಳ್ಳಿ          200

ಶುಂಠಿ             120

ಪ್ರತಿಕ್ರಿಯಿಸಿ (+)