ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರಿಗಳಲ್ಲಿ ಬ್ಲಾಸ್ಟಿಂಗ್ ಮಾಡದಂತೆ ಸೂಚನೆ

ಜೊಯಿಡಾ ತಾಲ್ಲೂಕಿನ ರಾಮನಗರದಲ್ಲಿ ಕಲ್ಲು ಗಣಿಗಾರಿಕೆಯಿಂದ ತೊಂದರೆ
Last Updated 21 ನವೆಂಬರ್ 2019, 14:20 IST
ಅಕ್ಷರ ಗಾತ್ರ

ಜೊಯಿಡಾ: ತಾಲ್ಲೂಕಿನ ರಾಮನಗರದ ಅನಧಿಕೃತ ಕಲ್ಲು ಕ್ವಾರಿಗಳಲ್ಲಿ ಬ್ಲಾಸ್ಟಿಂಗ್ ಮಾಡದಂತೆ ತಹಶೀಲ್ದಾರ್ ಸಂಜಯ ಕಾಂಬಳೆ ಸೂಚನೆ ನೀಡಿದ್ದಾರೆ.ರಾಮನಗರ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಬುಧವಾರ ನಡೆದ ಕಲ್ಲು ಗಣಿಗಾರಿಕೆ ಮಾಲೀಕರ ಮತ್ತು ಸಾರ್ವಜನಿಕರ ಸಭೆಯಲ್ಲಿಅವರು ಮಾತನಾಡಿದರು.

ಕಲ್ಲು ಕ್ವಾರಿಗಳಲ್ಲಿಮಿತಿಮೀರಿಬ್ಲಾಸ್ಟಿಂಗ್ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ತಹಶೀಲ್ದಾರ್‌ಗೆ ದೂರು ನೀಡಿದ್ದರು.

ಸಭೆಯಲ್ಲಿ ಮಾತನಾಡಿದಶ್ರೀನಿವಾಸ ನಾಗನೂರ, ‘ಕ್ವಾರಿಗಳಮಾಲೀಕರು ಅಮೋನಿಯಂ ಬಳಸಿ ಕಲ್ಲುಗಳನ್ನು ನಿಯಮಬಾಹಿರವಾಗಿ ಸಿಡಿಸುತ್ತಿದ್ದಾರೆ. ಜೊತೆಗೆ ಕ್ವಾರಿಯಿಂದ ಹರಿಯುವ ನೀರು ನದಿ, ನಾಲೆಗಳನ್ನು ಸೇರುತ್ತಿದೆ. ಇದರಿಂದ ಸ್ಥಳೀಯರು, ಜಲಚರಗಳು, ವನ್ಯಜೀವಿಗಳು ಹಾಗೂ ಸಾಕುಪ್ರಾಣಿಗಳ ಮೇಲೆವ್ಯತಿರಿಕ್ತ ಪರಿಣಾಮವಾಗುತ್ತಿದೆ. ರಾಮನಗರ ಮತ್ತು ಆಡಾಳಿಯ ಶಾಲೆ, ಮನೆಗಳು ಬಿರುಕು ಬಿಟ್ಟಿವೆ’ ದೂರಿದರು.

ಇದೇವೇಳೆ ಮಾತನಾಡಿದಕಲ್ಲು ಗಣಿಗಾರಿಕೆಯ ಮಾಲೀಕರಾದ ಸಂದೀಪ ರಾಣೆ ಹಾಗೂ ಮಹಾದೇವ ಗಾಂದ್ಲೇ, ‘ಕ್ವಾರಿಗಳು ನಿಯಮಬದ್ಧವಾಗಿದ್ದು, ಬೇಲಿ, ಸೂಚನಾಫಲಕ ಸೇರಿ ಎಲ್ಲ ಸೂಚನೆಗಳನ್ನು ಪಾಲಿಸುತ್ತಿದ್ದೇವೆ. ದೊಡ್ಡ ಪ್ರಮಾಣದಲ್ಲಿ ಸ್ಫೋಟಗಳನ್ನು ಮಾಡುತ್ತಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಡಿ.ಬಿ.ಎಲ್ ಕಂಪನಿಯವರು ಅಧಿಕ ಪ್ರಮಾಣದಲ್ಲಿ ಬ್ಲಾಸ್ಟಿಂಗ್ ಮಾಡುತ್ತಿದ್ದು, ಅವರನ್ನು ಸಭೆಗೆ ಕರೆಸುವಂತೆ ಸಾರ್ವಜನಿಕರು ಪಟ್ಟುಹಿಡಿದರು. ಬಳಿಕ ಸಭೆಗೆ ಬಂದ ಸಂಸ್ಥೆಯ ವ್ಯವಸ್ಥಾಪಕ ರಾಮನಾಥ ತ್ರಿಪಾಠಿ, ಬ್ಲಾಸ್ಟಿಂಗ್‌ನಿಂದ ಆದ ಹಾನಿಗೆ ಪರಿಹಾರ ಕೊಡುವುದಾಗಿ ತಿಳಿಸಿದರು.ಇದಕ್ಕೆ ಗ್ರಾಮಸ್ಥರು ಆಕ್ಷೇಪಿಸಿ, ತಮಗೆ ಪರಿಹಾರ ಬೇಡ. ಬ್ಲಾಸ್ಟಿಂಗ್ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಹಶಿಲ್ದಾರ್ ಸಂಜಯ ಕಾಂಬಳೆ, ‘ಚುನಾವಣೆ ಮುಗಿದ ಮೇಲೆ ಸಾರ್ವಜನಿಕರೊಂದಿಗೆ ಸಭೆ ನಡೆಸಲಾಗುವುದು. ದೂರಿನ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಯಾವುದೇ ಕಲ್ಲು ಕ್ವಾರಿಗಳಲ್ಲಿ ಬ್ಲಾಸ್ಟಿಂಗ್ ಮಾಡಬಾರದು’ ಎಂದುಸೂಚಿಸಿದರು.

ಈ ಸಂದರ್ಭದಲ್ಲಿ ರಾಮನಗರ ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿನೋದ ದೇಸಾಯಿ, ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಅಮರೇಶ ರಾಥೋಡ, ಸದಸ್ಯರಾದ ಮಹೇಶ ಮಿರಾಶಿ, ಸದಾನಂದ ಗಾವಡೆ, ಸಾಗರ ದೇಸಾಯಿ, ಪ್ರಕಾಶಬೊಬ್ಲೇಶ್ವರ ಇದ್ದರು.

ಬ್ಲಾಸ್ಟಿಂಗ್ ನಿಲ್ಲಿಸುವಂತೆ ಗ್ರಾಮಸ್ಥರು ರಾಮನಗರ ಗ್ರಾಮ ಪಂಚಾಯ್ತಿಗೆ ನ.16ರಂದು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದರು. ರಾಮನಗರ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಹಾಗೂ ಅಧ್ಯಕ್ಷರು, ಕ್ವಾರಿ ಮಾಲೀಕರನ್ನು ಕರೆಯಿಸಿ ಸಾರ್ವಜನಿಕರ ಸಮಕ್ಷಮದಲ್ಲಿ ಮಾತುಕತೆ ನಡೆಸಿದ್ದರು. ಬ್ಲಾಸ್ಟಿಂಗ್‌ಗೆಅನುಮತಿ ಕೊಡುವವರೆಗೆ ಕಲ್ಲು ಕ್ವಾರಿಯನ್ನು ಮುಚ್ಚುವಂತೆ ಆದೇಶಿಸಿದ್ದರು. ಈ ಸಂಬಂಧ ಅಧಿಕಾರಿಗಳು ಲಿಖಿತ ಭರವಸೆ ನೀಡಿದ ನಂತರ ಸಾರ್ವಜನಿಕರು ಪ್ರತಿಭಟನೆ ಹಿಂಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT