ಶುಕ್ರವಾರ, ನವೆಂಬರ್ 22, 2019
20 °C
ಯಕ್ಷ ಸಂಭ್ರಮ ಟ್ರಸ್ಟ್‌ನ ತಾಳಮದ್ದಲೆ ಸಪ್ತಾಹ ಆರಂಭ

ಕೆ.ಪಿ.ಹೆಗಡೆಗೆ ಚಂದುಬಾಬು ಪ್ರಶಸ್ತಿ ಪ್ರದಾನ

Published:
Updated:

ಶಿರಸಿ: ಚಂದುಬಾಬು ಸ್ಮರಣಾರ್ಥ ಇಲ್ಲಿನ ಯಕ್ಷ ಸಂಭ್ರಮ ಟ್ರಸ್ಟ್ ನೀಡುವ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಭಾಗವತ ಕೆ.ಪಿ.ಹೆಗಡೆ ಗೋಳಗೋಡ ಅವರಿಗೆ ನೀಡಿ ಗೌರವಿಸಲಾಯಿತು.

ಟ್ರಸ್ಟ್ ವತಿಯಿಂದ ನೆಬ್ಬೂರು ನಾರಾಯಣ ಭಾಗವತ ಸ್ಮರಣಾರ್ಥ ಭಾನುವಾರದಿಂದ ಟಿಎಂಎಸ್ ಸಭಾಭವನದಲ್ಲಿ ಆಯೋಜಿಸಿರುವ ಐದನೇ ವರ್ಷದ ತಾಳಮದ್ದಲೆ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮದಲ್ಲಿ ತಾಳಮದ್ದಲೆ ಅರ್ಥಧಾರಿ ಎಂ.ಪ್ರಭಾಕರ ಜೋಶಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.

‘ನೆಬ್ಬೂರು ಭಾಗವತರು ಯಕ್ಷ ಕಲಾವಿದರಿಗೆ ಆದರ್ಶಪ್ರಾಯ ವ್ಯಕ್ತಿಯಾಗಿದ್ದರು. ಯಕ್ಷರಂಗದ ಮೂಲ, ಚೂರಾಗಿ ವಿಕಾರವಾಗುತ್ತಿದ್ದ ವೇಳೆ ಸಾಂಪ್ರದಾಯಿಕ ಶೈಲಿಯ ಮೂಲಕ ಭಾಗವತಿಕೆ ಕಟ್ಟಿ ರಂಗವನ್ನು ಸದೃಢ ಮಾಡಿದವರು ಅವರು. ನೆಬ್ಬೂರರ ಭಾಗವತಿಕೆ ಇಲ್ಲದಿದ್ದರೆ ಹಲವು ಕಲಾವಿದರು ಮೇರು ಸ್ಥಾನ ಪಡೆಯಲು ಕಷ್ಟಪಡಬೇಕಿತ್ತು. ಯಕ್ಷಗಾನದ ಘನತೆಯನ್ನು ತಮ್ಮ ಸ್ವಂತಿಕೆ ಮೂಲಕ ಗಟ್ಟಿಗೊಳಿಸಿದವರು ನೆಬ್ಬೂರ ಭಾಗವತರು’ ಎಂದು ಹೇಳಿದರು.

ಯಕ್ಷ ಸಂಭ್ರಮ ಟ್ರಸ್ಟ್ ಅಧ್ಯಕ್ಷ ಎಂ.ಎ.ಹೆಗಡೆ ದಂಟ್ಕಲ್ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನಕ್ಕೆ ಪೂರಕವಾಗಿ ಹುಟ್ಟಿದ ಸಂಘ–ಸಂಸ್ಥೆಗಳಿಗೆ ಸರ್ಕಾರದಿಂದ ಅನುದಾನ ಸಿಗುತ್ತಿಲ್ಲ. ಸರ್ಕಾರಕ್ಕೆ ಯಾವ ಕಲಾವಿದರೂ ಬದುಕಬಾರದು ಎಂಬ ನಡೆ ಇದ್ದಂತಿದೆ. ಹೀಗಾಗಿ ಕಲೆ ಉಳಿಸಲು ಪ್ರೇಕ್ಷಕರೇ ಉದಾರ ನೆರವು ನೀಡಬೇಕು.

ಕೆ.ಪಿ.ಹೆಗಡೆ ಗೋಳಗೋಡ ಮಾತನಾಡಿ, ‘ನೆಬ್ಬೂರು ಭಾಗವತರ ಸಂಸ್ಮರಣೆಗೆ ಅರ್ಪಿಸುವ ಸ್ಮತಿ ಗೌರವ ಈ ತಾಳಮದ್ದಲೆ ಸಪ್ತಾಹ ಇದಾಗಿದೆ. ಈ ಸಂದರ್ಭದಲ್ಲಿ ಚಂದುಬಾಬು ಪ್ರಶಸ್ತಿ ಸಿಕ್ಕಿದ್ದು ಧನ್ಯತೆ ತಂದಿದೆ’ ಎಂದರು. ಯಕ್ಷರಂಗ ಪತ್ರಿಕೆ ಸಂಪಾದಕ ಗೋಪಾಲಕೃಷ್ಣ ಭಾಗವತ, ಸೀತಾರಾಮ ಚಂದು ಇದ್ದರು. ಎಂ.ವಿ.ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಅನಂತ ಹೆಗಡೆ ದಂತಳಿಗೆ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ರುಕ್ಮಾಂಗದ ಚರಿತ್ರೆ’ ತಾಳಮದ್ದಲೆ ನಡೆಯಿತು.

ಪ್ರತಿಕ್ರಿಯಿಸಿ (+)