ಅಮಾಯಕರಿಗೆ ಮೋಸ: ಕ್ರಮಕ್ಕೆ ಸೂಚನೆ

7
ಕಾರ್ಮಿಕರಿಗೆ ಗುರುತಿನ ಚೀಟಿ ಮಾಡಿಸುವುದಾಗಿ ಹಣ ವಸೂಲಿ: ತಾ.ಪಂ ಕೆಡಿಪಿ ಸಭೆಯಲ್ಲಿ ಚರ್ಚೆ

ಅಮಾಯಕರಿಗೆ ಮೋಸ: ಕ್ರಮಕ್ಕೆ ಸೂಚನೆ

Published:
Updated:
Prajavani

ಕಾರವಾರ: ಅಸಂಘಟಿತ ವಲಯದ ಕಾರ್ಮಿಕರಿಗೆ ‘ಅಂಬೇಡ್ಕರ್ ಸಹಾಯಹಸ್ತ’ ಯೋಜನೆಯಡಿ ಗುರುತಿನ ಚೀಟಿಗಳನ್ನು ಮಾಡಿಸಿಕೊಡುವ ನೆಪದಲ್ಲಿ ಕೆಲವು ಸಂಘಟನೆಗಳು ಮೋಸ ಮಾಡುತ್ತಿವೆ. ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಮಂಗಳವಾರ ನಡೆದ ತಾಲ್ಲೂಕು ಪಂಚಾಯ್ತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೇಳಿಬಂತು.

ಈ ವಿಚಾರವನ್ನು ಪ್ರಸ್ತಾಪಿಸಿದ ಅಧ್ಯಕ್ಷೆ ಪ್ರಮೀಳಾ ನಾಯ್ಕ, ‘ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನ ಮೂಲಕ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹೆಚ್ಚುವರಿ ಹಣ ಸಂಗ್ರಹಿಸಲಾಗುತ್ತಿದೆ. ಈ ಬಗ್ಗೆ ಮಾಹಿತಿಯಿಲ್ಲದವರು ಹಣ ಪಾವತಿಸುತ್ತಿದ್ದಾರೆ. ಇದನ್ನು ತಡೆಯಬೇಕು’ ಎಂದು ಒತ್ತಾಯಿಸಿದರು. ಉಪಾಧ್ಯಕ್ಷ ರವೀಂದ್ರ ಪವಾರ್ ಕೂಡ ಧ್ವನಿಗೂಡಿಸಿದರು.

ಕಾರ್ಮಿಕ ಇಲಾಖೆ ಅಧಿಕಾರಿ ಬಿ.ಎಸ್.ಬೆಟಗೇರಿ ಮಾತನಾಡಿ, ‘ಮುಂದಿನ ಸಭೆಗೂ ಮೊದಲು ಖಂಡಿತ ಕ್ರಮ ಕೈಗೊಳ್ಳಲಾಗುವುದು. ಫೆಡರೇಷನ್‌ನವರನ್ನು ಕರೆಸಿ ವಿಚಾರಿಸುತ್ತೇನೆ’ ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸೂರಜಾ ನಾಯಕ ಮಾತನಾಡಿ, ‘ತಾಲ್ಲೂಕಿನಲ್ಲಿ ಎಲ್ಲೇ ಮಂಗ ಸತ್ತಿದ್ದರೂ ಕೂಡಲೇ ಮಾಹಿತಿ ನೀಡಬೇಕು. ನಮ್ಮ ಇಲಾಖೆಯೊಂದಿಗೆ ಪಶು ಸಂಗೋಪನೆ ಹಾಗೂ ಅರಣ್ಯ ಇಲಾಖೆಯವರು ತಕ್ಷಣ ಜಾಗಕ್ಕೆ ಭೇಟಿ ಕೊಟ್ಟು ಪರಿಶೀಲಿಸುವುದು ಅಗತ್ಯ. ಇದರಿಂದ ಮಂಗನಕಾಯಿಲೆ ತಡೆಯಬಹುದು’ ಎಂದು ಹೇಳಿದರು. 

ಇದೇವೇಳೆ ಮಾತನಾಡಿದ ತಾಲ್ಲೂಕು ಪಶು ವೈದ್ಯಾಧಿಕಾರಿ ಶಂಕರ ಗುಳೇದಗುಡ್ಡ, ‘ನಮಗೆ ಅರಣ್ಯ ಇಲಾಖೆಯಿಂದ ಪತ್ರ ಕಳುಹಿಸಬೇಕು. ನಂತರ ಭೇಟಿ ನೀಡುತ್ತೇವೆ’ ಎಂದು ಹೇಳಿದರು.

ಇದಕ್ಕೆ ಪ್ರಮೀಳಾ ನಾಯ್ಕ ಹಾಗೂ ಪುರುಷೋತ್ತಮ ಗೌಡ ಅಸಮಾಧಾನ ವ್ಯಕ್ತಪಡಿಸಿದರು. ‘ತಕ್ಷಣ ಭೇಟಿ ನೀಡಬೇಕಾದ ಸಂದರ್ಭದಲ್ಲಿ ಪತ್ರಕ್ಕೆ ಕಾಯುವ ಅಗತ್ಯವೇನಿದೆ? ಜನರ ಅಗತ್ಯಕ್ಕೆ ಸ್ಪಂದಿಸಬೇಕು’ ಎಂದರು. ಆದರೆ, ಶಂಕರ ಒಪ್ಪಲಿಲ್ಲ. ಇದಕ್ಕೆ ಮತ್ತಷ್ಟು ಅಸಮಾಧಾನ ವ್ಯಕ್ತಪಡಿಸಿದ ಪುರುಷೋತ್ತಮ ಗೌಡ, ಲಿಖಿತವಾಗಿ ತಿಳಿಸುವಂತೆ ತಾಕೀತು ಮಾಡಿದರು. ಆಗ ಮಧ್ಯಪ್ರವೇಶಿಸಿದ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಆನಂದಕುಮಾರ, ತುರ್ತು ಸಂದರ್ಭಗಳಲ್ಲಿ ಭೇಟಿ ನೀಡುವಂತೆ ಸೂಚಿಸಿದರು.

ವೈದ್ಯರಿಲ್ಲದ ಹಣಕೋಣ ಮತ್ತು ದೇವಳಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ದೇವಳಮಕ್ಕಿಗೆ ಸಿದ್ದರದಿಂದ ಹಾಗೂ ಹಣಕೋಣಕ್ಕೆ ಹಳಗಾದಿಂದ ವಾರದಲ್ಲಿ ಎರಡು ದಿನ ಭೇಟಿ ನೀಡುತ್ತಿದ್ದಾರೆ. ಕಾಯಂ ವೈದ್ಯರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಡಾ.ಸೂರಜಾ ನಾಯಕ ಸಭೆಗೆ ತಿಳಿಸಿದರು. 

ಹಿಂದುಳಿದ ವರ್ಗದ ಇಲಾಖೆ ಅಧಿಕಾರಿ ಮಾತನಾಡಿ, ‘ಇಲಾಖೆಯ ಹಾಸ್ಟೆಲ್‌ಗಳಲ್ಲಿ ಅಗ್ನಿ ಅವಘಡಗಳಂತಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಫೆ.8ರಂದು ತರಬೇತಿ ಆಯೋಜಿಸಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಕುರಿತು ಫೆ.16 ಹಾಗೂ 17ರಂದು ಕಾರ್ಯಾಗಾರ ಆಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.

14 ಗ್ರಾಮಗಳಿಗೆ ಟ್ಯಾಂಕರ್ ನೀರು: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್ ಆರ್.ಎನ್.ತಾಂಡೇಲ್ ಮಾತನಾಡಿ, ‘ತಾಲ್ಲೂಕಿನಲ್ಲಿ ಈವರೆಗೆ ಉಪ್ಪು ನೀರಿನ ಸಮಸ್ಯೆ ಕಂಡುಬಂದಿಲ್ಲ. ಹಲವು ಗ್ರಾಮಗಳಲ್ಲಿ ನೀರಿನ ಗುಣಮಟ್ಟ ಪರಿಶೀಲನೆ ಮಾಡಲಾಗಿದೆ. ಅಗತ್ಯವಿರುವ 14 ಗ್ರಾಮಗಳಿಗೆ ಜನವರಿ ಆರಂಭದಿಂದಲೇ ಟ್ಯಾಂಕರ್ ಮುಖಾಂತರ ನೀರು ಪೂರೈಕೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !