ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ ಸಿಬ್ಬಂದಿಗೆ ಮೂಲಸೌಕರ್ಯದ ಭರವಸೆ: ಪ್ರಮೀಳಾ ನಾಯ್ಕ

ಸಿಬ್ಬಂದಿಯ ಸಮಸ್ಯೆಯ ಬಗ್ಗೆ ತಾ.ಪಂ. ಸಾಮಾನ್ಯ ಸಭೆಯಲ್ಲಿ ಗಮನ ಸೆಳೆದ ಅಧಿಕಾರಿ
Last Updated 25 ನವೆಂಬರ್ 2020, 17:31 IST
ಅಕ್ಷರ ಗಾತ್ರ

ಕಾರವಾರ: ‘ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ರಾತ್ರಿ ನಿಲುಗಡೆ ಹೊಂದಿರುವ ಬಸ್ ಮಾರ್ಗಗಳ ಪಟ್ಟಿ ಕೊಡಿ. ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಮೂಲಸೌಕರ್ಯಗಳನ್ನು ಒದಗಿಸಲಾಗುವುದು’‌ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರಮೀಳಾ ನಾಯ್ಕ ತಿಳಿಸಿದರು.

ನಗರದಲ್ಲಿ ಬುಧವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗೆ ಅವರು ಈ ಸೂಚನೆ ನೀಡಿದರು. ಸಾರಿಗೆ ಇಲಾಖೆಯ ಕಾರ್ಯಗಳ ಮಾಹಿತಿ ನೀಡಿದ ಅಧಿಕಾರಿ, ‘ಗ್ರಾಮೀಣ ಭಾಗದ ವಿವಿಧೆಡೆ ಸಿಬ್ಬಂದಿಗೆ ಶೌಚಾಲಯ ಸೇರಿದಂತೆ ಕೆಲವು ಮೂಲಸೌಕರ್ಯಗಳು ಸಿಗುತ್ತಿಲ್ಲ. ಇದರಿಂದ ಸಮಸ್ಯೆಯಾಗುತ್ತಿದೆ’ ಎಂದು ಸಭೆಯ ಗಮನ ಸೆಳೆದರು.

‘ಹಳಗೆಜೂಗದ ಕಾಕೆವಾಡದಲ್ಲಿ ಅಂಗನವಾಡಿ ಸ್ಥಳೀಯರೊಬ್ಬರ ಮನೆಯ ಜಗುಲಿಯಲ್ಲಿ ನಡೆಯುತ್ತಿದೆ. ಅಲ್ಲಿ ನಿರ್ಮಿಸಲಾದ ಹೊಸ ಕಟ್ಟಡದ ಕಾಮಗಾರಿಯು ಕಳಪೆಯಾಗಿದೆ. ಅದರ ಬಾಗಿಲು ಈಗಲೇ ದುರಸ್ತಿಗೆ ಬಂದಿದೆ. ಕಿಟಕಿಯ ಸರಳುಗಳು ಮುರಿದಿವೆ. ಕಟ್ಟಡದ ಉದ್ಘಾಟನೆ ಮಾಡುವ ಮೊದಲು ಸಂಪೂರ್ಣವಾಗಿ ಸರಿಪಡಿಸಬೇಕು’ ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೋನಲ್ ಎಸ್.ಐಗಳ, ‘ಆ ಕಟ್ಟಡವಿನ್ನೂ ಇಲಾಖೆಗೆ ಹಸ್ತಾಂತರವಾಗಿಲ್ಲ’ ಎಂದರು. ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದಕುಮಾರ ಬಾಲಪ್ಪನವರ ಮಾತನಾಡಿ, ತಾಲ್ಲೂಕಿನಲ್ಲಿ ದುರಸ್ತಿ ಆಗಬೇಕಿರುವ ಅಂಗನವಾಡಿಗಳ ಮಾಹಿತಿ ಕೊಡುವಂತೆ ಸೂಚಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸೂರಜಾ ನಾಯ್ಕ ಮಾತನಾಡಿ, ‘ತಾಲ್ಲೂಕಿನಾದ್ಯಂತ ಪ್ರತಿ ಶುಕ್ರವಾರ ಸೊಳ್ಳೆ ಲಾರ್ವ ಸಮೀಕ್ಷೆ ಮಾಡಲಾಗುತ್ತಿದೆ. ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ’ ಎಂದರು.

ಸದಸ್ಯೆ ನಂದಿನಿ ಮಾತನಾಡಿ, ‘ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಶುರು ಮಾಡಿಲ್ಲ’ ಎಂದು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಇ.ಒ, ‘ಹೊಸದಾಗಿ ಫಾಗಿಂಗ್ ಯಂತ್ರಗಳನ್ನು ಗ್ರಾಮ ಪಂಚಾಯ್ತಿಗಳಿಗೆ ಖರೀದಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ’ ಎಂದು ತಿಳಿಸಿದರು.

ವಿದ್ಯುತ್ ಮಾಪಕ ಬದಲಾವಣೆ: ‘ಕಾರವಾರ ನಗರ ವ್ಯಾಪ್ತಿಯಲ್ಲಿ ನೂತನ ಸ್ಟ್ಯಾಟಿಕ್ ವಿದ್ಯುತ್ ಮಾಪಕವನ್ನು ಅಳವಡಿಸಲಾಗುತ್ತಿದೆ. ಇದಕ್ಕೆ ಯಾರೂ ಹಣ ಪಾವತಿಸಬೇಕಿಲ್ಲ’ ಎಂದು ಹೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶೇಬಣ್ಣನವರ್ ತಿಳಿಸಿದರು.

‘ದಾವಣಗೆರೆಯ ಗುತ್ತಿಗೆದಾರರು ಗುತ್ತಿಗೆ ಪಡೆದಿದ್ದು, ಮುಂದಿನ ವರ್ಷ ಮಾರ್ಚ್‌ ಒಳಗೆ ಪೂರ್ಣಗೊಳಿಸಲಿದ್ದಾರೆ. ಒಟ್ಟು 15 ಸಾವಿರ ಮಾಪಕಗಳನ್ನು ಅಳವಡಿಸಲಾಗುವುದು. ಮನೆಯೊಳಗೆ ಇರುವ ಮಾಪಕಗಳನ್ನು ಹೊರಗೆ, ಅವುಗಳ ರಕ್ಷಣಾ ಕವಚಗಳ ಅಳವಡಿಕೆಯನ್ನು ಸಂಪೂರ್ಣ ಉಚಿತವಾಗಿ ಮಾಡಲಾಗುತ್ತಿದೆ. ಯಾರಾದರೂ ಹಣಕ್ಕೆ ಬೇಡಿಕೆಯಿಟ್ಟರೆ ಸಾರ್ವಜನಿಕರು ಗಮನಕ್ಕೆ ತರಬೇಕು’ ಎಂದು ಮನವಿ ಮಾಡಿದರು.

ಉಪಾಧ್ಯಕ್ಷ ರವೀಂದ್ರ ಪವಾರ್, ತಹಶೀಲ್ದಾರ್ ಆರ್.ವಿ.ಕಟ್ಟಿ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT