ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಾಖೆಗಳ ವರದಿ ರೈತರಿಗೆ ಅನ್ಯಾಯವಾಗದಿರಲಿ

ನೊಂದ ರೈತರ ಪರ ತಾಲ್ಲೂಕು ಪಂಚಾಯ್ತಿ ಸಭೆಯಲ್ಲಿ ಸದಸ್ಯರ ಆಗ್ರಹ
Last Updated 5 ಅಕ್ಟೋಬರ್ 2019, 10:55 IST
ಅಕ್ಷರ ಗಾತ್ರ

ಶಿರಸಿ: ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದ ಅತಿವೃಷ್ಟಿಯಿಂದ ತೊಂದರೆಗೊಳಗಾದ ರೈತರಿಗೆ ಅನ್ಯಾಯವಾಗಬಾರದು ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶನಿವಾರ ಇಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿ ವಿ.ಎಸ್.ಬೆಳಗಾಂವಕರ ಮಾಹಿತಿ ನೀಡಿ, ‘ತಾಲ್ಲೂಕಿನಲ್ಲಿ ಈ ವರ್ಷ 3564 ಮಿ.ಮೀ ಮಳೆಯಾಗಿದೆ. 1400 ಮಿ.ಮೀ ಹೆಚ್ಚುವರಿ ಮಳೆಯಾಗಿದೆ. ಅತಿವೃಷ್ಟಿಯಿಂದ 437 ಹೆಕ್ಟೇರ್ ಕೃಷಿ ಹಾಗೂ 45 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿಯಾಗಿರುವುದು ‘ಪರಿಹಾರ’ದಲ್ಲಿ ದಾಖಲಾಗಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಉಪಾಧ್ಯಕ್ಷ ಚಂದ್ರು ದೇವಾಡಿಗ ಅವರು, ‘ತಾಲ್ಲೂಕಿನ ಇನ್ನೂ ಹೆಚ್ಚಿನ ತೋಟಗಾರಿಕಾ ಬೆಳೆ ಹಾನಿಯಾಗಿದೆ. ಇಷ್ಟು ಕಡಿಮೆ ತೋರಿಸಿದ್ದು ಹೇಗೆ’ ಎಂದು ಪ್ರಶ್ನಿಸಿದರು. ತೋಟಗಾರಿಕಾ ಇಲಾಖೆ ಅಧಿಕಾರಿ ಮಾಹಿತಿ ನೀಡಿ, ‘ಇಲಾಖೆ ಸಮೀಕ್ಷೆ ಪ್ರಕಾರ 136 ಹೆಕ್ಟೇರ್ ಹಾನಿ ವರದಿ ಸಿದ್ಧಪಡಿಸಲಾಗಿದೆ’ ಎಂದರು.

‘ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ವರದಿ ನೀಡಬೇಕು. ಸರ್ಕಾರಕ್ಕೆ ಸರಿಯಾದ ಹಾನಿ ವರದಿ ಸಲ್ಲಿಸಬೇಕು’ ಎಂದು ಚಂದ್ರು ದೇವಾಡಿಗ ಹೇಳಿದರು. ಕಳೆದ ವರ್ಷ ಅನೇಕ ರೈತರಿಗೆ ಕೊಳೆರೋಗದ ಪರಿಹಾರ ಹಣ ಬಂದಿಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ ದೂರಿದರು. ಕಳೆದ ವರ್ಷದ ಪರಿಹಾರ ಹಣ ಎಲ್ಲರಿಗೂ ದೊರೆಯುವಂತಾಗಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಲು ಠರಾವು ಸ್ವೀಕರಿಸಲಾಯಿತು.

ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಷಿನ್ ಇದ್ದರೂ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಬಡರೋಗಿಗಳು ದುಬಾರಿ ವೆಚ್ಚದಲ್ಲಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳಬೇಕಾಗಿದೆ. ಆಸ್ಪತ್ರೆಯಲ್ಲೇ ಈ ವ್ಯವಸ್ಥೆ ಲಭ್ಯವಾಗಬೇಕು ಎಂದು ಸದಸ್ಯರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್ಟ ಅವರು, ತಜ್ಞ ವೈದ್ಯರು ಇಲ್ಲದ ಕಾರಣ ಸ್ಕ್ಯಾನಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

ತಾಲ್ಲೂಕಿನ ಹಲವೆಡೆ ಕಾಲುಸಂಕ ನಿರ್ಮಾಣವಾಗಿಲ್ಲ. ಕಳೆದ ವರ್ಷ ಮಂಜೂರು ಆಗಿರುವ ಕಾಮಗಾರಿಯೇ ಇನ್ನೂ ಆರಂಭವಾಗಿಲ್ಲ. ಇನ್ನು ಕೆಲದಿನಗಳು ಕಳೆದರೆ ಉಪಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತದೆ ಎಂದು ರವಿ ಹಳದೋಟ ಅವರು, ಲೋಕೋಪಯೋಗಿ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT