ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ವಸತಿ ಮನೆ ಅನುದಾನ ವಿಳಂಬ; ಸಾಮಾನ್ಯ ಸಭೆಯಲ್ಲಿ ಸದಸ್ಯರ ಅಸಮಾಧ

Last Updated 25 ಡಿಸೆಂಬರ್ 2019, 11:05 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನಲ್ಲಿ ವಸತಿ ಯೋಜನೆಯಡಿ ನಿರ್ಮಿಸಿರುವ ಮನೆಗಳು ಪೂರ್ಣಗೊಂಡರೂ, ಫಲಾನುಭವಿಗಳಿಗೆ ಸಹಾಯಧನ ದೊರೆತಿಲ್ಲ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯರು ಆರೋಪಿಸಿದರು.

ಮಂಗಳವಾರ ಇಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ವಿಷಯ ಪ್ರಸ್ತಾಪಿಸಿದರು. ವಿವಿಧ ವಸತಿ ಯೋಜನೆಗಳಡಿಯಲ್ಲಿ ಮನೆ ಕಟ್ಟಿಕೊಂಡಿರುವ ಬಡವರಿಗೆ ಪೂರ್ಣ ಪ್ರಮಾಣದಲ್ಲಿ ಸಹಾಯಧನ ಬಿಡುಗಡೆಯಾಗಿಲ್ಲ. ಇದರಿಂದ ಫಲಾನುಭವಿಗಳು ತೊಂದರೆ ಅನುಭವಿಸುವಂತಾಗಿದೆ ಎಂದರು. ‘ಮನೆ ನಿರ್ಮಾಣದಲ್ಲಿ ಅವ್ಯವಹಾರ ನಡೆದಿರುವ ಶಂಕೆಯ ಮೇಲೆ, ಅರ್ಹ ಫಲಾನುಭವಿಗಳನ್ನು ಗುರುತಿಸಲು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಇದರ ಸರ್ವೆ ನಡೆಯುತ್ತಿದೆ’ ಎಂದು ಕಾರ್ಯನಿರ್ವಹಣಾಧಿಕಾರಿ ಎಫ್.ಜಿ.ಚಿನ್ನಣ್ಣನವರ್ ಸಮಜಾಯಿಷಿ ನೀಡಿದರು.

ಆಯುಷ್ಮಾನ್ ಭಾರತ– ಆರೋಗ್ಯ ಕರ್ನಾಟಕ ಯೋಜನೆಯಡಿ ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಗಂಭೀರ ಸಮಸ್ಯೆಯಿದ್ದರೂ, ಸರ್ಕಾರಿ ಆಸ್ಪತ್ರೆಯಿಂದ ಪತ್ರ ತರುವಂತೆ ಖಾಸಗಿ ಆಸ್ಪತ್ರೆಯವರು ಹೇಳುತ್ತಾರೆ ಎಂದು ಉಪಾಧ್ಯಕ್ಷ ಚಂದ್ರು ದೇವಾಡಿಗ ಆರೋಪಿಸಿದರು. ಪ್ರಾಥಮಿಕ ಸಮಸ್ಯೆಯಿದ್ದರೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಬಹುದು. ಗಂಭೀರ ಸಮಸ್ಯೆಯಿದ್ದರೆ (ಐಸಿಯು) ರೋಗಿಯನ್ನು ಆಸ್ಪತ್ರೆಗೆ ಸೇರಿಸಲು ಪತ್ರದ ಅವಶ್ಯಕತೆ ಇರುವುದಿಲ್ಲ. ಅಂತಹ ಪ್ರಕರಣ ಇದ್ದರೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ದೂರು ನೀಡಬಹುದು ಎಂದು ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಗಜಾನನ ಭಟ್ಟ ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಿನಾಯಕ ಭಟ್ಟ ಮಾಹಿತಿ ನೀಡಿ, ‘ಸುಗಾವಿ, ರೇವಣಕಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೂರ್ಣಾವಧಿ ವೈದ್ಯರ ಹುದ್ದೆ ಖಾಲಿಯಿದೆ. ಮೂರು ಉಪಕೇಂದ್ರಗಳಲ್ಲೂ ಹುದ್ದೆ ಖಾಲಿಯಿದೆ’ ಎಂದರು. ಹೆಗಡೆಕಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ವರ್ತನೆ ಬಗ್ಗೆ ಸದಸ್ಯ ವಿನಾಯಕ ಭಟ್ಟ ಆಕ್ಷೇಪಿಸಿದರು.

ಸೋಂದಾ, ಇಸಳೂರು, ವಾನಳ್ಳಿ ಈ ಮೂರು ಪಂಚಾಯ್ತಿ ಹೊರತುಪಡಿಸಿ, ಇನ್ನುಳಿದ ಪಂಚಾಯ್ತಿಗಳ ರೈತರಿಗೆ ತೋಟಗಾರಿಕಾ ಬೆಳೆ ವಿಮೆ ಬಂದಿದೆ ಎಂದು ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT