ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ: ಆರೇ ತಿಂಗಳಿಗೆ ಸೀಮಿತವಾದ ಬಸ್!

ಎಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ್ದ ತಣ್ಣೀರುಕುಳಿ ಗ್ರಾಮ
Last Updated 7 ಜೂನ್ 2022, 15:14 IST
ಅಕ್ಷರ ಗಾತ್ರ

ಕುಮಟಾ: ಕೃಷಿ ಹಾಗೂ ಕೂಲಿಯನ್ನು ನಂಬಿಕೊಂಡಿರುವ ತಾಲ್ಲೂಕಿನ ಹೆಗಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಣ್ಣೀರುಕುಳಿ ಗ್ರಾಮದಲ್ಲಿ ಸರ್ಕಾರದ ಸೌಲಭ್ಯಗಳಿವೆ. ಆದರೆ, ಅದನ್ನು ಸರಿಯಾಗಿ ಬಳಸಿಕೊಳ್ಳದ ಕಾರಣ ಜನರ ಜೀವನಮಟ್ಟ ಇನ್ನೂ ಸುಧಾರಿಸಬೇಕಿದೆ.

ಸುಮಾರು 100 ಹಾಲಕ್ಕಿ ಕುಟುಂಬಗಳಿರುವ ಗ್ರಾಮದಲ್ಲಿ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ್ದರು.

‘ಕುಮಾರಸ್ವಾಮಿ ಅವರು ನಮ್ಮ ಊರಿಗೆ ಬಂದು ವಾಸ್ತವ್ಯ ಮಾಡಿ ಹೋದ ಆರು ತಿಂಗಳು ಮಾತ್ರ ಸರ್ಕಾರಿ ಬಸ್ ಸಂಚರಿಸಿತ್ತು. ನಂತರ ರದ್ದಾಗದ್ದು ಮತ್ತೆ ಶುರುವಾಗಲೇ ಇಲ್ಲ. ಸ್ವಂತ ವಾಹನ ಇಲ್ಲದವರು ಹೆಗಡೆಯಿಂದ ತಣ್ಣೀರುಕುಳಿಗೆ ಎರಡು ಕಿಲೋಮೀಟರ್ ನಡೆದು ಬರಬೇಕು’ ಎಂದು ಗ್ರಾಮದ ಮಹಿಳೆ ನಾಗಿ ಗೌಡ ಮಾಹಿತಿ ನೀಡಿದರು.

‘ಗ್ರಾಮದ ಹೆಚ್ಚಿನ ಮಕ್ಕಳು ಎರಡು ವರ್ಷ ಪಿ.ಯು ವಿದ್ಯಾಭ್ಯಾಸದ ನಂತರ ಓದು ನಿಲ್ಲಿಸುತ್ತಿದ್ದಾರೆ. ಗೇರು ಸಂಸ್ಕರಣಾ ಘಟಕ, ಗಾರ್ಮೆಂಟ್ ಉದ್ಯಮಗಳಿಗೆ ಕೆಲಸಕ್ಕೆ ಹೋಗುತ್ತಾರೆ. ಹಠ ಹೊತ್ತು ಓದಿ ಮುಂದೆ ಬಂದ ಕೆಲವು ಯುವತಿಯರು ಬೆಂಗಳೂರಿನ ಕಂಪನಿಯಲ್ಲಿ ಕೆಲಸ ಗಿಟ್ಟಿಸಿ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ’ ಎಂದರು.

‘ಮಳೆಗಾಲದಲ್ಲಿ ಬಳಕೆಗೆ ಸಾಕಾಗುವಷ್ಟು ಭತ್ತ ಬೆಳೆಯುವ ಗದ್ದೆಗಳಿವೆ. ಬೇಸಿಗೆಯಲ್ಲಿ ಅಲ್ಲಿ ಉದ್ದು, ಶೇಂಗಾ, ಎಳ್ಳು ಬೆಳೆಯುತ್ತಿದ್ದೆವು. ಈಗ ಉಪ್ಪು ನೀರಿನ ಪಸೆ ಗದ್ದೆಯನ್ನು ಆವರಿಸುವುದರಿಂದ ಬೇಸಿಗೆ ಕೃಷಿ ನಿಂತು ಹೋಗಿದೆ’ ಎಂದು ರೈತ ಮಂಜುನಾಥ ಗೌಡ ತಿಳಿಸಿದರು.

ಎರಡು, ಮೂರು ವರ್ಷಗಳಲ್ಲಿ ಗ್ರಾಮದಲ್ಲಿ ಸಿಮೆಂಟ್ ರಸ್ತೆಯಾಗಿದೆ. ಹೈಟೆಕ್ ಅಂಗನವಾಡಿ ನಿರ್ಮಿಸಲಾಗಿದೆ. ಎಲ್ಲರ ಮನೆಗಳಿಗೆ ವಿದ್ಯುತ್ ಸಂಪರ್ಕವಿದೆ. ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರಿನ ವ್ಯವಸ್ಥೆಯಿದೆ. ಮನೆಗಳಲ್ಲಿ ತೆರೆದ ಬಾವಿ ಸೌಲಭ್ಯವೂ ಇದೆ.

ತರಕಾರಿಗೆ ಪ್ರಸಿದ್ಧ:

ಮಳೆಗಾಲದ ಕೃಷಿ ಕಾರ್ಯ ಮುಗಿದ ನಂತರ ಗ್ರಾಮದ ಪುರುಷರು ಕೂಲಿ ಕೆಲಸಕ್ಕೆ ಹೋದರೆ, ಮಹಿಳೆಯರು ತಮ್ಮ ಮನೆಯ ಹಾಗೂ ಬಾಡಿಗೆ ಜಾಗದಲ್ಲಿ ಹಿರೇಕಾಯಿ, ಬೆಂಡೆಕಾಯಿ, ಸೌತೆ, ಮೊಗೆ, ಹಾಗಲ, ಪಡವಲ ಮುಂತಾದ ತರಕಾರಿ ಬೆಳೆದು ಪಟ್ಟಣಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಜೀವನಕ್ಕೆ ಆಧಾರವಾಗುತ್ತಾರೆ. ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಸದೆ ಸಗಣಿ ಗೊಬ್ಬರ ಹಾಕಿ ಬೆಳೆಯುತ್ತಾರೆ. ಈ ತರಕಾರಿ ಇಡೀ ತಾಲ್ಲೂಕಿನಲ್ಲೇ ಪ್ರಸಿದ್ಧವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT