ತಣ್ಣೀರುಕುಳಿ ತರಕಾರಿಗೆ ಬೆವರೇ ಬಂಡವಾಳ!

ಸೋಮವಾರ, ಜೂಲೈ 22, 2019
27 °C
ಮುಂಗಾರು ಆರಂಭವಾಗುತ್ತಿದ್ದಂತೆ ಹಾಲಕ್ಕಿ ಸಮಾಜದ ರೈತರ ಕೃಷಿ ಕಾಯಕ

ತಣ್ಣೀರುಕುಳಿ ತರಕಾರಿಗೆ ಬೆವರೇ ಬಂಡವಾಳ!

Published:
Updated:
Prajavani

ಕುಮಟಾ: ಪಟ್ಟಣದ ಸುತ್ತಮುತ್ತಲ ಜನರಿಗೆ ಬೆಳ್ಳಂಬೆಳಗ್ಗೆ ತಾಜಾ ಸ್ಥಳೀಯ ತರಕಾರಿ ನೀಡುವ ಹೆಗಡೆ ಗ್ರಾಮದ ತಣ್ಣೀರುಕುಳಿ ರೈತರ ಕೃಷಿಕಾಯಕ, ಮಳೆಯ ಬೆನ್ನಲ್ಲೇ ಆರಂಭಗೊಂಡಿದೆ.

ತಣ್ಣೀರುಕುಳಿ ಗ್ರಾಮವು ಕುಮಟಾ ಪಟ್ಟಣದಿಂದ ಕೇವಲ ಐದು ಕಿ.ಮೀ. ದೂರದಲ್ಲಿದೆ. ಇನ್ನೊಂದು ತಿಂಗಳಲ್ಲಿ ಕೆಲವು ಗಂಟೆಗಳ ಹಿಂದೆಯಷ್ಟೇ ತೋಟದಿಂದ ಕೊಯ್ದು ತಂದ ಹೀರೆ, ಬೆಂಡೆ, ಸೌತೆ, ಮೊಗೆ, ಹಾಗಲ, ಹಾಲಗುಂಬಳ, ಪಡವಲಕಾಯಿ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಸಿಗುತ್ತವೆ. ಅದಕ್ಕಾಗಿ ಈಗ ಸ್ಥಳೀಯ ಹಾಲಕ್ಕಿ ಸಮಾಜದ ರೈತರು ತಮ್ಮ ಕುಟುಂಬ ಸದಸ್ಯರೊಂದಿಗೆ ಬೆವರನ್ನೇ ಬಂಡವಾಳವಾಗಿಸಿ ತೋಟದಲ್ಲಿ ದುಡಿಯುತ್ತಿದ್ದಾರೆ.

ಎಲ್ಲ ತರಕಾರಿ ಗಿಡಗಳ ಬುಡದಲ್ಲಿ ಸೆಗಣಿ ಗೊಬ್ಬರ, ಮಣ್ಣು ಹಾಕುವ ಕೆಲಸದಲ್ಲಿ ಸುಮಾರು 70 ಕುಟುಂಬಗಳ ನೂರಾರು ರೈತರು ನಿರತರಾಗಿದ್ದಾರೆ. ಹೀಗೆ ತರಕಾರಿ ಬೆಳೆಯುವ ಸುಮಾರು 20 ಎಕರೆಗಳಷ್ಟು ಜಾಗ ಈ ರೈತರದ್ದಲ್ಲ. ಅವುಗಳನ್ನು ಭೂ ಮಾಲೀಕರಿಂದ ಬಾಡಿಗೆ ಪಡೆಯಲಾಗಿದೆ.

‘ತರಕಾರಿ ಬೆಳೆಯುವ ಒಂದು ಗುಂಟೆ ಜಾಗಕ್ಕೆ ₹ 250 ಬಾಡಿಗೆ ಕೊಡಬೇಕು. ಪ್ರತಿ ವರ್ಷ ಬಾಡಿಗೆ ಹೆಚ್ಚಿಸುತ್ತಾರೆ. ನಾನು ಸುಮಾರು 20 ಗುಂಟೆ ಜಾಗದಲ್ಲಿ ಎಲ್ಲ ತರಕಾರಿ ಬೆಳೆಯುತ್ತೇನೆ. ಜಾಗದ ಬಾಡಿಗೆ, ಕೂಲಿ ಖರ್ಚು, ಗೊಬ್ಬರ ಎಲ್ಲ ಸೇರಿ ₹ 20 ಸಾವಿರಕ್ಕೂ ಹೆಚ್ಚು ಖರ್ಚಾಗುತ್ತದೆ. ನಮ್ಮ ತಾಯಂದಿರು ತರಕಾರಿಯನ್ನು ಪೇಟೆಗೆ ತೆಗೆದುಕೊಂಡು ಮಾರಾಟ ಮಾಡುತ್ತಾರೆ. ಅದರಿಂದ ಸುಮಾರು ₹ 50 ಸಾವಿರ ಸಿಗಬಹುದು’ ಎಂಬುದು ರೈತ ನಾಗರಾಜ ನಾಗು ಗೌಡ ಅವರ ಲೆಕ್ಕಾಚಾರವಾಗಿದೆ.

‘10 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇನೆ. ಈ ಸಲ ಮಳೆ ತಡವಾಗಿದ್ದರಿಂದ ಬೆಳೆ ಕೂಡ ತಡವಾಗಬಹುದು. ಚೌತಿ ಹಬ್ಬದ ಸಂದರ್ಭದಲ್ಲಿ ಬೆಳೆ ಕೈಗೆ ಬಂದರೆ ಸ್ವಲ್ಪ ಹೆಚ್ಚು ಲಾಭವಾಗುತ್ತದೆ’ ಎಂದು ತಿಳಿಸಿದರು.

ಸ್ವಂತ ಗಿಡಗಳಿಂದಲೇ ಬಿತ್ತನೆ ಬೀಜ: ತೋಟಗಾರಿಕೆ ಇಲಾಖೆಯವರು ನೀಡುವ ಬೀಜ, ಗೊಬ್ಬರ, ಔಷಧಿ ಯಾವುದನ್ನೂ ಈ ರೈತರು ಬಳಸುವುದಿಲ್ಲ. ತಮ್ಮ ಜಮೀನಿನಲ್ಲೇ ಸಿದ್ಧಪಡಿಸಿದ ಬಿತ್ತನೆ ಬೀಜ, ಗೊಬ್ಬರ ಬಳಸುವುದು ಇನ್ನೊಂದು ವಿಶೇಷ.

‘ಸರ್ಕಾರಿ ಬೀಜ (ಇಲಾಖೆಯಿಂದ ವಿತರಣೆ ಮಾಡಿದವು) ಹುಟ್ಟಿದರೆ ಹುಟ್ಟಿತು, ಇಲ್ಲಾಂದ್ರೆ ಇಲ್ಲ. ಕೊನೆಯಲ್ಲಿ ಬಿಡುವ ತರಕಾರಿ ಹಾಗೇ ಗಿಡದಲ್ಲಿಯೇ ಬಿಟ್ಟು ಅದರಿಂದ ನಾವೇ ಬೀಜ ತಯಾರಿಸುತ್ತೇವೆ. ಸೆಗಣಿ ಗೊಬ್ಬರ ಗುಂಡಿಯನ್ನು ತರಕಾರಿ ಗದ್ದೆಯಲ್ಲೇ ಮಾಡಲಾಗಿದೆ. ಔಷಧಿ ಹೊಡೆಯುವ ಪದ್ಧತಿ ಇಲ್ಲ’ ಎಂದು ರೈತ ನಾಗರಾಜ ಗೌಡ ತಿಳಿಸಿದರು.

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !