ಶಾಲೆಯ ಸಮೀಪದಲ್ಲೇ ಡಾಂಬರು ಮಿಶ್ರಣ ಕಾರ್ಖಾನೆ: ಆಕ್ಷೇಪ

7
ಅನುಮತಿ ಪಡೆಯದೇ ಪ್ರತಿಭಟನೆಗೆ ಪೊಲೀಸರಿಂದ ತರಾಟೆ: ನಗರಸಭೆ ಸದಸ್ಯೆ ಕ್ಷಮೆ ಯಾಚನೆ

ಶಾಲೆಯ ಸಮೀಪದಲ್ಲೇ ಡಾಂಬರು ಮಿಶ್ರಣ ಕಾರ್ಖಾನೆ: ಆಕ್ಷೇಪ

Published:
Updated:
Deccan Herald

ಕಾರವಾರ: ನಗರದ ಹೊರವಲಯದಲ್ಲಿರುವ ಬೈತಖೋಲ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಮೀಪದಲ್ಲೇ ಡಾಂಬರು ಮಿಶ್ರಣ ಮಾಡುವ ಕಾರ್ಖಾನೆ ಸ್ಥಾಪನೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಸ್ಥಳೀಯರು ಸೋಮವಾರ ಪ್ರತಿಭಟನೆ ನಡೆಸಿದರು.

ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸ್ಥಳೀಯ ಮುಖಂಡ ವಿಲ್ಸನ್ ಫರ್ನಾಂಡಿಸ್, ‘ಇಲ್ಲಿ ಉದ್ದೇಶಿತ ಕಾರ್ಖಾನೆ ಸ್ಥಾಪನೆಗೆ ಬಂದರು ಇಲಾಖೆಯು ಬೆಂಗಳೂರಿನ ‘ಕ್ರಷ್ ಟಾರ್’ ಸಂಸ್ಥೆಗೆ ಅನುಮತಿ ನೀಡಿದೆ. ಇದಕ್ಕಾಗಿ ಸುಮಾರು 51 ಗುಂಟೆ ಜಾಗವನ್ನು 10 ವರ್ಷಗಳ ಅವಧಿಗೆ ಭೋಗ್ಯಕ್ಕೆ ನೀಡಲಾಗಿದೆ. ಆದರೆ, ಅನುಮತಿ ನೀಡಿರುವ ಜಾಗಕ್ಕೆ ಸರ್ವೇ ಸಂಖ್ಯೆಯೇ ಇಲ್ಲ. ಇದರ ಹಿಂದೆ ಹಗರಣ ನಡೆದಿರುವ ಅನುಮಾನವಿದೆ’ ಎಂದು ದೂರಿದರು.

‘ಭೋಗ್ಯಕ್ಕೆ ನೀಡಲಾಗಿರುವ ಜಮೀನಿನಿಂದ ಕೇವಲ 10 ಮೀಟರ್ ಅಂತರದಲ್ಲೇ ಕಿರಿಯ ಪ್ರಾಥಮಿಕ ಶಾಲೆಯಿದೆ. ಅದರ ಅಕ್ಕಪಕ್ಕದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಎದುರಿಗೇ ರಾಷ್ಟ್ರೀಯ ಹೆದ್ದಾರಿ 66 ಹಾದುಹೋಗುತ್ತದೆ. ನಗರಸಭೆಯ ಬಾವಿಯೂ ಇದೇ ಜಾಗದಲ್ಲಿದೆ. ಇಲ್ಲಿ ಕಾರ್ಖಾನೆ ಆರಂಭವಾದರೆ ಸುತ್ತಮುತ್ತ ವಾಯು ಮಾಲಿನ್ಯವಾಗಲಿದೆ. ಇದರಿಂದ ಎಲ್ಲರಿಗೂ ತೊಂದರೆಯಾಗಲಿದೆ. ಆದ್ದರಿಂದ ಅನುಮತಿ ನೀಡಬಾರದು’ ಎಂದು ಒತ್ತಾಯಿಸಿದರು.

ಸ್ಥಳೀಯ ನಿವಾಸಿ ಮೈಕಲ್ ಅಲ್ವಾರಿಸ್ ಮಾತನಾಡಿ, ‘ಭೋಗ್ಯಕ್ಕೆ ನೀಡಲಾಗಿರುವ ಸರ್ವೇ ನಂಬರ್ 41/61ರ ಜಮೀನಿನ ದಾಖಲೆಗಳು 1898ರ ಭೂಸ್ವಾಧೀನ ಕಾಯ್ದೆಯಂತೆ ಇಲ್ಲ. ನಕಲಿ ಸರ್ವೇ ನಂಬರ್ ಸೃಷ್ಟಿ ಮಾಡಿ ಜಾಗವನ್ನು ನೀಡಲಾಗಿದೆ’ ಎಂದು ಆರೋಪಿಸಿದರು.

ನಗರಸಭೆ ಸದಸ್ಯೆ ಛಾಯಾ ಜಾವ್ಕರ್, ಸ್ಥಳೀಯರಾದ ಪ್ರವೀಣ ಜಾವ್ಕರ್, ಪ್ರಶಾಂತ ಹರಿಕಂತ್ರ, ಭಾವನಾ ಪಾಟೀಲ, ವಿಜಯಕುಮಾರ ಪಾಟೀಲ ಇದ್ದರು.

ಪ್ರತಿಭಟನೆಗೆ ಮಕ್ಕಳ ಬಳಕೆಗೆ ಆಕ್ಷೇಪ: ಪ್ರತಿಭಟನೆ ನಡೆಸಲು ಶಾಲೆಯ ಮಕ್ಕಳನ್ನು ಕರೆದುಕೊಳ್ಳುವ ವಿಚಾರವನ್ನು ಯಾಕೆ ತಿಳಿಸಿಲ್ಲ ಎಂದು ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರತಿಭಟನಾಕಾರರನ್ನು ತರಾಟೆಗೆ ತೆಗೆದುಕೊಂಡರು.

ಇಲಾಖೆಯ ಸಿಬ್ಬಂದಿ ಜತೆ ಪ್ರತಿಭಟನಾ ಸ್ಥಳಕ್ಕೆ ಬಂದ ಸಿಪಿಐ ಪದ್ಮಾ, ‘ಪ್ರತಿಭಟನೆ ನಡೆಸುವ ವಿಚಾರವನ್ನೇ ಪೊಲೀಸರಿಗೆ ತಿಳಿಸಿಲ್ಲ. ಮಕ್ಕಳನ್ನು ಶಾಲೆಯ ಕಾಂಪೌಂಡ್‌ನಿಂದ ಹೊರಗೆ ಕರೆದುಕೊಂಡು ಬರುವುದಾಗಿಯೂ ಹೇಳಿಲ್ಲ. ಏನಾದರೂ ಅನಾಹುತವಾದರೆ ಯಾರು ಹೊಣೆ? ಇನ್ನುಮುಂದೆ ಈ ರೀತಿ ಮಾಹಿತಿ ನೀಡದೇ ಪ್ರತಿಭಟನೆ ಮಾಡಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು. ಬಳಿಕ ನಗರಸಭೆ ಸದಸ್ಯೆ ಛಾಯಾ ಜಾವ್ಕರ್ ಪೊಲೀಸರ ಕ್ಷಮೆ ಯಾಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !