ಶನಿವಾರ, ಜನವರಿ 28, 2023
15 °C
ಕೋವಿಡ್ ಕಾರಣ: ಅಭಿವದ್ಧಿಗೆ ಆದಾಯ ಸಂಗ್ರಹವೇ ಸವಾಲು

ತೆರಿಗೆ ಸಂಗ್ರಹ: ಶಿರಸಿ ನಗರಸಭೆ ಹಿಂದೆ

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಆಸ್ತಿ ತೆರಿಗೆ, ನೀರಿನ ಕರ ಸಂಗ್ರಹಣೆ ವಿಷಯದಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಗರಸಭೆ ಹಿಂದೆಬಿದ್ದಿದೆ. ಇದಕ್ಕೆ ಕೋವಿಡ್ ಪ್ರಮುಖ ಕಾರಣ ಎಂಬುದು ಅಧಿಕಾರಿಗಳ ವಾದ.

ಕಳೆದ ಆರ್ಥಿಕ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷದಲ್ಲಿ ಈವರೆಗೆ ಆಸ್ತಿ ತೆರಿಗೆ ಸಂಗ್ರಹ ಶೇ 55ರಷ್ಟಾಗಿದೆ. ನೀರಿನ ಕರ ನಿಗದಿತ ಗುರಿಯಲ್ಲಿ ಕೇವಲ ಶೇ 18ರಷ್ಟು ವಸೂಲಾಗಿದೆ. ಪ್ರತಿ ಬಾರಿ ಆರ್ಥಿಕ ವರ್ಷ ಆರಂಭದ ಒಂದೆರಡು ತಿಂಗಳಲ್ಲಿ ತೆರಿಗೆ ಸಂಗ್ರಹಣೆ ಚುರುಕಾಗಿ ನಡೆಯುತ್ತಿತ್ತು.

ಪ್ರತಿ ವರ್ಷ ನಗರಸಭೆಗೆ ಆಸ್ತಿ ತೆರಿಗೆ, ನೀರಿನ ಕರ, ವ್ಯಾಪಾರ ಪರವಾನಗಿ ನವೀಕರಣ ಮತ್ತಿತರ ಮೂಲಗಳಿಂದ ಆದಾಯ ಸಂಗ್ರಹವಾಗಬೇಕಿದೆ. ಹೀಗೆ ಸಂಗ್ರಹವಾದ ಆದಾಯವನ್ನು ಮೂಲಸೌಕರ್ಯ ಒದಗಿಸಲು ಬಳಸಿಕೊಳ್ಳಲಾಗುತ್ತದೆ.

2020–21ನೇ ಸಾಲಿನಲ್ಲಿ ₹ 2 ಕೋಟಿ 94 ಲಕ್ಷದ 50 ಸಾವಿರ ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ. ಐದು ತಿಂಗಳಲ್ಲಿ ₹ 1.44 ಕೋಟಿ ಸಂಗ್ರಹವಾಗಿದೆ. 2019–20ನೇ ಸಾಲಿಗೆ ₹ 96 ಲಕ್ಷ ನೀರಿನ ಕರ ಬಾಕಿ ಸಹಿತ, ಪ್ರಸಕ್ತ ವರ್ಷಕ್ಕೆ ₹ 2.42 ಕೋಟಿ ಸಂಗ್ರಹವಾಗಬೇಕಿದೆ. ಅದರಲ್ಲಿ ಕೇವಲ ₹ 52.34 ಲಕ್ಷ ವಸೂಲಾಗಿದೆ’ ಎಂದು ಪೌರಾಯುಕ್ತ ರಮೇಶ ನಾಯಕ ಮಾಹಿತಿ ನೀಡಿದರು.

‘ಕೋವಿಡ್ ಕಾರಣಕ್ಕೆ ತೆರಿಗೆ ಸಂಗ್ರಹ ನಿಧಾನವಾಗಿದೆ. ಏಪ್ರಿಲ್, ಮೇ ಹೊತ್ತಿನಲ್ಲೇ ಹೆಚ್ಚು ಆದಾಯ ಸಂಗ್ರಹವಾಗುತ್ತಿತ್ತು. ಆದರೆ, ಲಾಕ್‌ಡೌನ್ ಕಾರಣದಿಂದ ತೆರಿಗೆ ವಸೂಲಾತಿ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ’ ಎಂದು ಅವರು ಹೇಳಿದರು.

‘ಜನರ ಮನೆ ಬಾಗಿಲಿಗೆ ತೆರಳಿ ಕರ ಪಾವತಿಸುವಂತೆ ಒತ್ತಡ ಹೇರಲಾಗದು. ಲಾಕ್‌ಡೌನ್‌ನಿಂದ ಜನರಿಗೂ ಸಮಸ್ಯೆ ಇರುವುದು ಅರಿವಿದೆ. ಇದಲ್ಲದೆ ಕೆಲವು ಆಸ್ತಿ ಮಾಲೀಕರು ಹೊರ ಜಿಲ್ಲೆಗಳಲ್ಲಿದ್ದು, ಅಂತಹವರಿಗೆ ತೆರಿಗೆ ಪಾವತಿಸಲು ಸ್ವಲ್ಪ ಸಮಯಾವಕಾಶ ಬೇಕಾಗಬಹುದು. ಹೀಗಾಗಿ ಕೂಡಲೇ ತೆರಿಗೆ ಪಾವತಿಸುವಂತೆ ಒತ್ತಾಯಿಸುತ್ತಿಲ್ಲ’ ಎಂದರು.

‘ಪ್ರಸಕ್ತ ವರ್ಷದ ಬೇಡಿಕೆಯಷ್ಟು ತೆರಿಗೆ ಸಂಗ್ರಹವನ್ನು ಡಿಸೆಂಬರ್ ಹೊತ್ತಿಗೆ ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಬಾಕಿ ಉಳಿದುಕೊಂಡಿರುವ ತೆರಿಗೆ ಸಂಗ್ರಹಿಸಲು ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.

ಶಿರಸಿನ ನಗರಸಭೆ: ಅಂಕಿ–ಅಂಶ

16,968 - ಮನೆಗಳ ಸಂಖ್ಯೆ

18,934 - ಆಸ್ತಿಗಳ ಸಂಖ್ಯೆ

₹ 2.94 ಕೋಟಿ - ಆಸ್ತಿ ತೆರಿಗೆ ಗುರಿ

₹ 1.44 ಕೋಟಿ - ಈವರೆಗೆ ಸಂಗ್ರಹವಾದ ಆಸ್ತಿ ತೆರಿಗೆ

₹ 2.42 ಕೋಟಿ - ನೀರಿನ ಕರ ಸಂಗ್ರಹ ಬೇಡಿಕೆ

₹ 52.34 ಲಕ್ಷ - ಈವರೆಗೆ ಸಂಗ್ರಹಗೊಂಡ ನೀರಿನ ಕರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು