ಬುಧವಾರ, ನವೆಂಬರ್ 20, 2019
25 °C
ಶಿರಸಿ: ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾಗಿ ತಿಳಿಸಿದ ಕ್ಯಾಂಪ್ಕೊ ಅಧ್ಯಕ್ಷ ಸತೀಶ್ಚಂದ್ರ

‘ಸಹಕಾರ ಸಂಸ್ಥೆಗೆ ಟಿ.ಡಿ.ಎಸ್‌ ನಿಯಮ ಬೇಡ’

Published:
Updated:
Prajavani

ಶಿರಸಿ:‘₹ 1 ಕೋಟಿಗಿಂತ ಹೆಚ್ಚಿನ ನಗದು ವಹಿವಾಟು ನಡೆಸುವ ಸಂಸ್ಥೆಗಳ ವಹಿವಾಟಿನ ಮೇಲೆ ಶೇ 2ರಷ್ಟು ತೆರಿಗೆಯನ್ನು ಮೂಲದಲ್ಲೇ ಕಡಿತ (ಟಿ.ಡಿ.ಎಸ್) ಮಾಡಲಾಗುತ್ತಿದೆ. ಈ ನಿಯಮದಿಂದ ಸಹಕಾರ ಸಂಸ್ಥೆಗಳನ್ನು ಹೊರಗಿಡಬೇಕು ಅಥವಾ ಕನಿಷ್ಠ ಮೂರು ವರ್ಷ ವಿನಾಯ್ತಿ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ’ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದರು.

ಇಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ಕ್ಯಾಂಪ್ಕೊ ಸದಸ್ಯ ಬೆಳೆಗಾರರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾಣಿಕಟ್ಟಾ ಸಹಕಾರ ಸಂಘದ ಅಧ್ಯಕ್ಷ ಎನ್.ಬಿ.ಹೆಗಡೆ ಮತ್ತಿಹಳ್ಳಿ ವಿಷಯ ಪ್ರಸ್ತಾಪಿಸಿ, ಈ ವ್ಯವಸ್ಥೆ ಬದಲಾಗಬೇಕಿದ್ದು, ಕೇಂದ್ರದ ಗಮನ ಸೆಳೆಯುವ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು. ಮುಂಡಗನಮನೆ ಸಹಕಾರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ‘ಕೃಷಿ ಸಂಬಂಧಿ ಸಂಸ್ಥೆಗಳನ್ನು ಟಿ.ಡಿ.ಎಸ್ ವ್ಯವಸ್ಥೆಯಿಂದ ಹೊರಗಿಡಬೇಕು. ಇಲ್ಲವೇ ನಿಗದಿತ ಮೊತ್ತವನ್ನು ಕನಿಷ್ಠ ₹ 5 ಕೋಟಿಗೆ ವಿಸ್ತರಿಸಬೇಕು’ ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿ ಸತೀಶ್ಚಂದ್ರ, ‘ಈ ವಿಚಾರವಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚಿಸಲಾಗಿದೆ. ಟಿಡಿಎಸ್ ಮೊತ್ತವನ್ನು ಶೇ 1ಕ್ಕೆ ಇಳಿಸುವ ಭರವಸೆ ನೀಡಿದ್ದರು. ಸಹಕಾರ ಸಂಸ್ಥೆಗಳಿಗೆ ಈ ವ್ಯವಸ್ಥೆಯಿಂದ ಕನಿಷ್ಠ ಮೂರು ವರ್ಷಕ್ಕೆ ವಿನಾಯ್ತಿ ನೀಡಬೇಕು ಎಂದು ಮತ್ತೊಮ್ಮೆ ಒತ್ತಾಯಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು. 

ಹಿರಿಯ ಸಹಕಾರಿ ಎನ್.ಎಸ್.ಹೆಗಡೆ ಕುಂದರಗಿ ಮಾತನಾಡಿ, ‘ಅಡಕೆ ಉತ್ಪಾದಕರೇ ಬೆಲೆ ನಿರ್ಧರಿಸುವ ಜೊತೆಗೆ ಮಾರುಕಟ್ಟೆಯಲ್ಲಿ ದರ ಸ್ಥಿರಗೊಳಿಸುವ ಕಾರ್ಯವನ್ನು ಸಂಸ್ಥೆ ಮಾಡಬೇಕು. ಪಾರಂಪರಿಕ ಬೆಳೆಗಾರರ ಹೊರತಾದವರೂ ಹೆಚ್ಚಿನ ಪ್ರಮಾಣದಲ್ಲಿ ಅಡಕೆ ಬೆಳೆಯುತ್ತಿದ್ದಾರೆ. ಇದರಿಂದ ಮೂಲ ಬೆಳೆಗಾರರಿಗೆ ಸಮಸ್ಯೆಯಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಡಕೆ ವ್ಯಾಪಾರಿ ಜಿ.ಎಂ.ಹೆಗಡೆ ಮುಳಖಂಡ ಮಾತನಾಡಿ, ‘ನೇರವಾಗಿ ಕ್ಯಾಂಪ್ಕೊ ಮೂಲಕ ವಹಿವಾಟು ಮಾಡುವ ಸದಸ್ಯರಿಗಷ್ಟೇ ಇರುವ ಆರೋಗ್ಯ ಸೇವೆಯನ್ನು, ಯಾವುದೇ ಸಹಕಾರ ಸಂಘದಲ್ಲಿ ಪ್ರಾಮಾಣಿಕವಾಗಿ ವಹಿವಾಟು ನಡೆಸುವ ಎಲ್ಲ ರೈತರಿಗೂ ವಿಸ್ತರಿಸಬೇಕು’ ಎಂದು ಒತ್ತಾಯಿಸಿದರು. 

ಅಡಕೆ ಮೇಲಿನ ಜಿ.ಎಸ್‌.ಟಿ ಕಡಿಮೆ ಮಾಡುವವರೆಗೂ ಕಳ್ಳ ವಹಿವಾಟು ನಿಲ್ಲುವುದಿಲ್ಲ. ಹಾಗಾಗಿ ಕ್ಯಾಂಪ್ಕೊ ಕೇಂದ್ರ ಸರ್ಕಾರದ ಎದುರು ಈ ಬಗ್ಗೆ ದಿಟ್ಟವಾಗಿ ವಾದ ಮಂಡಿಸಬೇಕು ಎಂದರು.

‘ಹಾನಿಕಾರಕವಲ್ಲವೆಂಬ ತೀರ್ಪಿನ ವಿಶ್ವಾಸ’: ‘ಅಡಕೆ ಕ್ಯಾನ್ಸರ್ ಕಾರಕ ಎಂಬ ಆರೋಪದ ಸಂಬಂಧ ಇತ್ತೀಚೆಗೆ ಕೇಂದ್ರದ ಕಾನೂನು ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಈ ಕುರಿತು ಕೇಂದ್ರ ಸರ್ಕಾರವು ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯಿಂದ (ಸಿ.ಪಿ.ಸಿ.ಆರ್.ಐ) ವರದಿ ಕೇಳಿದೆ. ಮಾಹೆ ವಿಶ್ವವಿದ್ಯಾಲಯಕ್ಕೂ ಅಡಕೆ ಗುಣಲಕ್ಷಣಗಳ ಸಂಶೋಧನೆ ನಡೆಸುವಂತೆ ಕ್ಯಾಂಪ್ಕೊ ಹಣಕಾಸು ಸಹಾಯ ನೀಡಿದೆ’ ಎಂದು ಸತೀಶ್ಚಂದ್ರ ತಿಳಿಸಿದರು.

‘ಅಡಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂದು ತೀರ್ಪು ಬರುವ ವಿಶ್ವಾಸವಿದೆ. ನ್ಯಾಯಾಲಯದಲ್ಲಿಯೂ ಹೋರಾಟ ನಿರಂತರವಾಗಿದೆ’ ಎಂದರು.

ಸಭೆಯಲ್ಲಿ ಕ್ಯಾಂಪ್ಕೊ ನಿರ್ದೇಶಕರಾದ ಶಂಭುಲಿಂಗ ಹೆಗಡೆ, ಬಾಲಕೃಷ್ಣ ರೈ, ಎಂ.ಕೆ.ಶಂಕರನಾರಾಯಣ ಭಟ್ಟ, ಕ್ಯಾಂಪ್ಕೊ ಪ್ರಮುಖ ಮುರಳೀಧರ, ಪ್ರಮುಖರಾದ ಭರತ ಭಟ್ಟ ಇದ್ದರು.

ಪ್ರತಿಕ್ರಿಯಿಸಿ (+)