ಸೋಮವಾರ, ಸೆಪ್ಟೆಂಬರ್ 16, 2019
27 °C
ವಿಆರ್‌ಎಸ್ ಪತ್ರ ನೀಡಿದರು ಕೆಲವರು

ಕೌನ್ಸೆಲಿಂಗ್: ಶಿಕ್ಷಕರ ಅಸಮಾಧಾನ

Published:
Updated:
Prajavani

ಶಿರಸಿ: ಶನಿವಾರ ಇಲ್ಲಿ ನಡೆದ ಶಿಕ್ಷಕರ ಕಡ್ಡಾಯ ವರ್ಗಾವಣೆ ಕೌನ್ಸೆಲಿಂಗ್‌ನಲ್ಲಿ ಶಿಕ್ಷಕರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು. ಕೆಲವರು ಕೌನ್ಸೆಲಿಂಗ್‌ಗೆ ಗೈರಾದರೆ, ಇನ್ನು ಕೆಲವರು ಸ್ವಯಂ ನಿವೃತ್ತಿ ಪತ್ರ ನೀಡಿ, ಅಸಮಾಧಾನ ಹೊರಹಾಕಿದರು.

‘ಕಾನೂನು ಪ್ರಕಾರ ವರ್ಗಾವಣೆ ಮಾಡುವುದಾಗಿ ಒಪ್ಪಿಕೊಂಡಿದ್ದ ಅಧಿಕಾರಿಗಳು ನಿಯಮವನ್ನು ಗಾಳಿಗೆ ತೂರಿ, ಮನಸ್ಸಿಗೆ ಬಂದಂತೆ ವರ್ಗಾವಣೆ ಮಾಡುತ್ತಿದ್ದಾರೆ. ಹೀಗಾಗಿ ನಾವು ಕೌನ್ಸೆಲಿಂಗ್‌ಗೆ ಹಾಜರಾಗಲಿಲ್ಲ’ ಎಂದು ಕೆಲವು ಶಿಕ್ಷಕರು ದೂರಿದರು.

‘ಆಯಾ ತಾಲ್ಲೂಕಿನ ಶಿಕ್ಷಕರನ್ನು ಅದೇ ತಾಲ್ಲೂಕಿನ ಶಾಲೆಗಳಿಗೆ ವರ್ಗಾವಣೆ ಮಾಡಬೇಕು. ಕಡ್ಡಾಯ ವರ್ಗಾವಣೆ ನೀತಿ ಸರಿಯಾಗಿದೆ. ಆದರೆ, ಅಧಿಕಾರಿಗಳು ವರ್ಗಾವಣೆಗೊಳಿಸುವ ಪ್ರಕ್ರಿಯೆ ಸರಿಯಾಗಿಲ್ಲ. ನಿಯಮ ಮೀರಿ ವರ್ಗಾವಣೆ ನಡೆಸುತ್ತಿರುವುದನ್ನು ಖಂಡಿಸಿ ಶಿರಸಿ ಹಾಗೂ ಸಿದ್ದಾಪುರ ತಾಲ್ಲೂಕುಗಳ 24 ಶಿಕ್ಷಕರು ಕೆಇಟಿ ಮೊರೆ ಹೋಗಿದ್ದು, ಬಹುತೇಕರು ಶನಿವಾರ ಸ್ಥಳಕ್ಕೆ ಬಂದಿದ್ದರೂ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ. ಇನ್ನು ಕೆಲವರು ಅಧಿಕಾರಿಗಳ ಬೆದರಿಕೆ ತಂತ್ರಗಳಿಗೆ ಮಣಿದು ಒಪ್ಪಿಕೊಂಡಿದ್ದಾರೆ’ ಎಂದು ಶಿಕ್ಷಕರೊಬ್ಬರು ಹೇಳಿದರು.

‘ನಿಮಗೆ ಸೂಚಿಸಿದ ಶಾಲೆಗೆ ಹೋಗದಿದ್ದರೆ, ಬೇರೆಯವರು ಬಂದು ಕರ್ತವ್ಯಕ್ಕೆ ಹಾಜರಾಗುತ್ತಾರೆ. ಇದರಿಂದ ನಿಮಗೇ ತೊಂದರೆಯಾಗುತ್ತದೆ. ಇಷ್ಟು ವರ್ಷ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ಈಗ ಕೌನ್ಸೆಲಿಂಗ್ ನಿರಾಕರಿಸುವುದು, ವಿಆರ್‌ಎಸ್‌ ತೆಗೆದುಕೊಳ್ಳುವುದು ಸರಿಯಲ್ಲ. ಆತುರದ ನಿರ್ಧಾರ ಮಾಡಬೇಡಿ’ ಎಂದು ಡಿಡಿಪಿಐ ದಿವಾಕರ ಶೆಟ್ಟಿ ಹೇಳಿದರು.

 

Post Comments (+)