ಭಾನುವಾರ, ಅಕ್ಟೋಬರ್ 25, 2020
25 °C
ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಶಿಕ್ಷಕರಿಗೂ ಕೋವಿಡ್

ಮುಂಡಗೋಡ: ಶಾಲಾ ವಠಾರದಲ್ಲಿ ‘ವಿದ್ಯಾಗಮ’ಕ್ಕೆ ಒತ್ತಾಯ

ಶಾಂತೇಶ ಬೆನಕನಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: ಎರಡು ತಿಂಗಳಿಂದ ಸಭಾಭವನ, ದೇವಸ್ಥಾನದ ಆವರಣ, ಮನೆಯ ಕಟ್ಟೆ, ಮರದ ಕೆಳಗೆ.. ಹೀಗೆ ವಿವಿಧೆಡೆ ‘ವಿದ್ಯಾಗಮ’ ಮೂಲಕ ಮಕ್ಕಳಿಗೆ ಕಲಿಕಾಭ್ಯಾಸ ನಡೆಯುತ್ತಿದೆ. ಈ ಯೋಜನೆಯ ತಾತ್ಕಾಲಿಕ ಸ್ಥಗಿತಕ್ಕೆ ಶಿಕ್ಷಣ ಸಚಿವರು ಶನಿವಾರ ಆದೇಶ ನೀಡಿರುವುದನ್ನು ಹಲವು ಶಿಕ್ಷಕರು ಸ್ವಾಗತಿಸಿದ್ದಾರೆ. ಆದರೆ, ಶಾಲೆಗಳ ಆವರಣದಲ್ಲೇ ವಿದ್ಯಾಗಮ ಮುಂದುವರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಶಾಲೆಯಲ್ಲಿ ಪಾಠ ಮಾಡಿದರೆ ಕೊರೊನಾ ಬರುತ್ತದೆ, ಶಾಲೆ ಬಿಟ್ಟು ಹೊರಗಡೆ ಕಲಿಸಿದರೆ ಸೋಂಕು ತಗುಲುವುದಿಲ್ಲವೇ ಎಂಬ ಪಾಲಕರ ಪ್ರಶ್ನೆಗೆ ನಿರುತ್ತರರಾಗಿ ಶಿಕ್ಷಕರು, ಸಿಕ್ಕ ಜಾಗದಲ್ಲಿಯೇ ಇಲ್ಲಿಯವರೆಗೆ ಪಾಠ ಮಾಡುತ್ತಿದ್ದರು.

‘ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಜಾರಿಗೆ ತಂದಿರುವ ವಿದ್ಯಾಗಮ ಯೋಜನೆ ಒಳ್ಳೆಯದು. ಆದರೆ, ಮೊಬೈಲ್, ವಾಟ್ಸ್‌ಆ್ಯಪ್ ಇಲ್ಲದ ಮಕ್ಕಳಿಗೆ ವಾರದಲ್ಲಿ ಒಂದು ಅಥವಾ ಎರಡು ದಿನ ಮುಖಾಮುಖಿ ಭೇಟಿ ಮೂಲಕ ಪಾಠ ಮಾಡಬಹುದು. ಉಳಿದ ಮಕ್ಕಳಿಗೆ ಮೊಬೈಲ್ ಮೂಲಕ ಪಾಠ, ಮನೆಗೆಲಸ ನೀಡಿದರೂ ಮಕ್ಕಳು ಕಲಿಯುತ್ತಾರೆ’ ಎನ್ನುತ್ತಾರೆ ಶಿಕ್ಷಕರು.

ನ್ಯೂನತೆಗಳು:

ಕಡಿಮೆ ಸಂಖ್ಯೆಯ ಮಕ್ಕಳಿದ್ದರೆ ಈ ಯೋಜನೆಯಿಂದ ತೊಂದರೆ ಆಗುವುದಿಲ್ಲ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿದ್ದಾಗ, ಅವರನ್ನು ಗುಂಪುಗಳಾಗಿ ಮಾಡಿ ಕಲಿಸಬೇಕು. ಇದು ನಿರುತ್ಸಾಹ ಮೂಡಿಸುತ್ತದೆ ಎನ್ನುತ್ತಾರೆ ಶಿಕ್ಷಕರು.

ಒಂದು ಶಾಲೆಯ ಮಕ್ಕಳು ನಾಲ್ಕೈದು ಹಳ್ಳಿಗಳಲ್ಲಿ ಇರುತ್ತಾರೆ. ಆ ಎಲ್ಲ ಹಳ್ಳಿಗಳಿಗೆ ಶಿಕ್ಷಕರು ಹೋಗಬೇಕು. ಇಬ್ಬರು ಶಿಕ್ಷಕರು ಒಂದೇ ಸಲ ಊರಿನಲ್ಲಿರುವ ಸಭಾಭವನ, ದೇವಸ್ಥಾನಗಳಲ್ಲಿ ಪಾಠ ಮಾಡಲು ಸಾಧ್ಯ ಆಗುವುದಿಲ್ಲ. ಪಾಲಕರಲ್ಲಿ ವಿಶ್ವಾಸ ಮೂಡದಿರುವುದು, ಎಲ್ಲವನ್ನೂ ಶಿಕ್ಷಕರೇ ಮಾಡಬೇಕು ಎಂಬ ಅಧಿಕಾರಿಗಳ ಮನೋಭಾವ, ಮಳೆಗಾಲದಲ್ಲಿ ಕೊಠಡಿ ಒಳಗೆ ಕಲಿಸುವ ಅನಿವಾರ್ಯತೆ, ಶಿಕ್ಷಕರಿಗೆ ತರಬೇತಿ ಅಥವಾ ಅಭಿಪ್ರಾಯ ಸಂಗ್ರಹಿಸದಿರುವುದು ಯೋಜನೆಯ ಹಿನ್ನಡೆಗೆ ಕಾರಣ ಎಂದು ಶಿಕ್ಷಕರ ವಲಯದಲ್ಲಿ ಚರ್ಚಿತವಾಗುತ್ತಿದೆ.

‘ವಿದ್ಯಾಗಮ ಮಾಡುವುದಾದರೆ ಶಾಲಾ ಆವರಣದಲ್ಲೇ ನಡೆಸಲು ಅವಕಾಶ ನಡೆಸಬೇಕು. ಇಲ್ಲವಾದರೆ ಸೂಕ್ತ ಸುರಕ್ಷಾ ಕ್ರಮಗಳನ್ನು ಇಲಾಖೆ ಕೈಗೊಂಡ ನಂತರ, ಶಾಲೆಗಳನ್ನು ತೆರೆಯಬೇಕು. ಪಾಠ ಮಾಡಲು ಶಿಕ್ಷಕರು ನಿರಾಕರಿಸುವುದಿಲ್ಲ. ಆದರೆ, ಒಂದೊಂದು ಊರಿನ ಪರಿಸ್ಥಿತಿ ವಿಭಿನ್ನವಾಗಿರುತ್ತದೆ. ಅದೆಲ್ಲವನ್ನು ನೋಡಬೇಕಾಗುತ್ತದೆ. ಸಾರಿಗೆ ವ್ಯವಸ್ಥೆ ಇಲ್ಲದೆ, ಅನೇಕ ಶಿಕ್ಷಕಿಯರು ನಡೆದುಕೊಂಡು ಹೋಗಿ ಪಾಠ ಮಾಡಬೇಕಾಗಿದೆ. ವಾಸ್ತವವನ್ನು ಅರಿಯದಿದ್ದರೆ ಯೋಜನೆ ಸಫಲವಾಗುವುದಿಲ್ಲ’ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ನಾಯಕ ಹೇಳುತ್ತಾರೆ.

 

ವಿದ್ಯಾಗಮ ಯೋಜನೆಗೆ ನಿಯೋಜನೆಗೊಂಡ ಶಿಕ್ಷಕರಿಗೂ ಕೋವಿಡ್ ತಗುಲಿದೆ. ಸೋಂಕಿನಿಂದ 20 ಶಿಕ್ಷಕರು ಗುಣಮುಖರಾಗಿದ್ದು, ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ.

- ಎಚ್.ದಿವಾಕರ್ ಶೆಟ್ಟಿ, ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ

************

ಅಂಕಿ-ಅಂಶ

ಕೋವಿಡ್ ಪೀಡಿತ ಶಿಕ್ಷಕರು (ಶಿರಸಿ ಶೈಕ್ಷಣಿಕ ಜಿಲ್ಲೆ)

ತಾಲ್ಲೂಕು;ಸೋಂಕಿತರು;ಚಿಕಿತ್ಸೆ ಪಡೆಯುತ್ತಿರುವವರು

ಮುಂಡಗೋಡ;13;2

ಸಿದ್ದಾಪುರ;4;2

ಶಿರಸಿ;2;0

ಯಲ್ಲಾಪುರ;2;0

ಜೊಯಿಡಾ;2;0

ಹಳಿಯಾಳ;1;0

ಒಟ್ಟು;24;4

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು