ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ| ಸರ್ಕಾರಿ ಶಾಲೆಗಳಲ್ಲಿ ಬೋಧಕರ ಕೊರತೆ

ದಸರಾ ರಜೆ ಮುಗಿದರೂ ಪೂರ್ಣ ಪ್ರಮಾಣದಲ್ಲಿ ಆಗದ ಅತಿಥಿ ಶಿಕ್ಷಕರ ನೇಮಕ
Last Updated 8 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಶಿರಸಿ: ಶಾಲಾ ಮಕ್ಕಳ ದಸರಾ ರಜೆ ಮುಗಿದು, ಎರಡನೇ ಸೆಮೆಸ್ಟರ್‌ನ ಶೈಕ್ಷಣಿಕ ಚಟುವಟಿಕೆಗಳು ಭರದಿಂದ ಸಾಗುತ್ತಿವೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಲು ಪೂರ್ಣ ಪ್ರಮಾಣದ ಶಿಕ್ಷಕರೇ ಇಲ್ಲ. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಇನ್ನೂ 215 ಶಿಕ್ಷಕರ ಕೊರತೆಯಿದೆ.

ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ ಹಾಗೂ ಜೊಯಿಡಾ ತಾಲ್ಲೂಕುಗಳನ್ನೊಳಗೊಂಡ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 3973 ಶಿಕ್ಷಕರ ಹುದ್ದೆಗಳು ಮಂಜೂರು ಇವೆ. ಕೌನ್ಸೆಲಿಂಗ್ ಮೂಲಕ ನಡೆಸುವ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡ ಮೇಲೆ ಸಹ ಅನೇಕ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಉಳಿದುಕೊಂಡಿವೆ. ಇರುವ ಶಿಕ್ಷಕರೇ ಹೊಂದಾಣಿಕೆ ಮಾಡಿಕೊಂಡು ತರಗತಿಗಳನ್ನು ನಡೆಸುತ್ತಿದ್ದಾರೆ.

ಮೊದಲ ಸೆಮೆಸ್ಟರ್‌ನಲ್ಲಿ ಶೈಕ್ಷಣಿಕ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ಒಟ್ಟು 429 ಅತಿಥಿ ಶಿಕ್ಷಕರು ನೇಮಕಗೊಂಡಿದ್ದಾರೆ. ಹಳಿಯಾಳ ತಾಲ್ಲೂಕಿನಲ್ಲಿ ಗರಿಷ್ಠ 124 ಅತಿಥಿ ಶಿಕ್ಷಕರ ನೇಮಕವಾಗಿದೆ.

‘ಕಳೆದ ವರ್ಷ ಜುಲೈನಲ್ಲಿ ಅತಿಥಿ ಶಿಕ್ಷಕರ ನೇಮಕವಾಗಿತ್ತು. ಈ ಬಾರಿ ಒಂದು ತಿಂಗಳು ತಡವಾಗಿ, ಆಗಸ್ಟ್‌ನಲ್ಲಿ ಅತಿಥಿ ಶಿಕ್ಷಕರ ನೇಮಕವಾಗಿದೆ. ಅಷ್ಟರಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆದಿದ್ದರಿಂದ ಇರುವ ಶಿಕ್ಷಕರು ವರ್ಗಾವಣೆಯಾಗಿ ಹೋಗಿದ್ದಾರೆ. ಇಂಗ್ಲಿಷ್, ಗಣಿತ, ವಿಜ್ಞಾನದಂತಹ ವಿಷಯಗಳಿಗೆ ತಜ್ಞ ಶಿಕ್ಷಕರಿದ್ದರೆ ಪರಿಣಾಮಕಾರಿ ಬೋಧನೆ ಸಾಧ್ಯವಾಗುತ್ತದೆ. ಈಗ ಇರುವ ಶಿಕ್ಷಕರೇ ಎಲ್ಲ ವಿಷಯಗಳನ್ನು ಬೋಧಿಸುತ್ತಾರೆ’ ಎಂದು ಆರೋಪಿಸಿದರು ಹುಲೇಕಲ್‌ನ ಪ್ರಕಾಶ ಶೇಟ್.

‘ಶೈಕ್ಷಣಿಕ ವರ್ಷದ ಆರಂಭದಲ್ಲಿ ಸಲ್ಲಿಸಿದ್ದ ಬೇಡಿಕೆ ಪಟ್ಟಿಯನ್ವಯ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿತ್ತು. ಆದರೆ, ನಂತರ ನಡೆದ ವರ್ಗಾವಣೆಯಲ್ಲಿ ಅನೇಕರು ಹೊರ ಜಿಲ್ಲೆಗೆ ಹೋದರೆ, ಕೆಲವರು ಬಡ್ತಿ ಪಡೆದರು. ಹೀಗಾಗಿ ಮತ್ತೆ ಶಿಕ್ಷಕರ ಕೊರತೆ ಎದುರಾಗಿದೆ. ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಅಷ್ಟಾಗಿ ಇಲ್ಲ. ಹಿರಿಯ ಪ್ರಾಥಮಿಕ ಶಾಲೆಗಳಲ್ಲಿರುವ ತೊಂದರೆ ನಿವಾರಿಸಲು, ಕಡಿಮೆ ಮಕ್ಕಳಿರುವ ಕಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರನ್ನು ತಾತ್ಕಾಲಿಕವಾಗಿ ಅಗತ್ಯವಿರುವ ಕಡೆ ವರ್ಗಾಯಿಸಲಾಗಿದೆ’ ಎಂಬುದು ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡುವ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT