ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಬದಿಯಲ್ಲಿ ಕಸ ಚೆಲ್ಲಿದರೆ ಹುಷಾರ್ !

ಬೆನ್ನಟ್ಟಿ ಬರುತ್ತದೆ ಕಾರ್ಯಪಡೆ ತಂಡ
Last Updated 8 ಜೂನ್ 2019, 14:08 IST
ಅಕ್ಷರ ಗಾತ್ರ

ಶಿರಸಿ: ನಗರದ ರಸ್ತೆ ಬದಿಗಳಲ್ಲಿ ಕಸ ಚೆಲ್ಲಿ ಹೋಗುವವರನ್ನು ಬೆನ್ನಟ್ಟುತ್ತಿದೆ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ನೇತೃತ್ವದ ತಂಡ. ಕಸ ಚೆಲ್ಲಿದವರನ್ನು ಸ್ಥಳಕ್ಕೆ ಕರೆಯಿಸಿಸುವ ತಂಡ, ಅವರಿಂದಲೇ ಕಸವನ್ನು ತೆರವುಗೊಳಿಸುತ್ತದೆ.

ಇಂತಹುದೊಂದು ಅಭಿಯಾನ ನಗರದಲ್ಲಿ ಆರಂಭವಾಗಿದೆ. ಶ್ರೀನಿವಾಸ ಹೆಬ್ಬಾರ್ ಅವರು ಚಿಪಗಿ ರಸ್ತೆ, ಬನವಾಸಿ ರಸ್ತೆಯ ಬದಿಯಲ್ಲಿ ರಾಶಿ ಬಿದ್ದಿದ್ದ ತ್ಯಾಜ್ಯವನ್ನು ಹಿಟಾಚಿ ಬಳಸಿ, ಸ್ವಂತ ವೆಚ್ಚದಲ್ಲಿ ಇತ್ತೀಚೆಗಷ್ಟೇ ಸ್ವಚ್ಛಗೊಳಿಸಿದ್ದರು. ಆದರೆ, ಪುನಃ ರಾತ್ರಿ ಬೆಳಗಾಗುವಷ್ಟರಲ್ಲಿ ರಸ್ತೆ ಬದಿಯಲ್ಲಿ ಕಸ ಬಂದು ಬೀಳುತ್ತಿತ್ತು. ಇದನ್ನು ಗಮನಿಸಿದ ಹೆಬ್ಬಾರರು, ಕಸ ಹಾಕುವವರನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ.

ಕಸದಲ್ಲಿ ಸಿಕ್ಕ ಸಣ್ಣ ಆಧಾರವನ್ನು ಗುರುತಿಸಿ, ಅಕ್ರಮವಾಗಿ ಇದನ್ನು ಎಸೆದು ಹೋದವರ ಪತ್ತೆ ಹಚ್ಚಿದ ಅವರು, ಆ ವ್ಯಕ್ತಿಯನ್ನು ಸ್ಥಳಕ್ಕೆ ಕರೆಯಿಸಿ, ಅದನ್ನು ಸಂಗ್ರಹಿಸಿ, ನಗರಸಭೆ ಘನತ್ಯಾಜ್ಯ ಘಟಕಕ್ಕೆ ನೀಡುವಂತೆ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಸ ಎಸೆಯುವುದು ಸುಸಂಸ್ಕೃತ ಸಮಾಜದ ಲಕ್ಷಣವಲ್ಲ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಸ್ವಚ್ಛಗೊಳಿಸಿದ ಪ್ರದೇಶವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳುವುದು ಸಾರ್ವಜನಿಕರ ಕರ್ತವ್ಯ. ಕಸ ಹಾಕುವುದು ಕಂಡು ಬಂದಲ್ಲಿ ತಕ್ಷಣ ಮಾಹಿತಿ ನೀಡಿದರೆ, ಅವರಿಂದಲೇ ಕಸ ಎತ್ತಿಸಲಾಗುವುದು’ ಎಂದರು. ಕಾರ್ಯಪಡೆಯ ಶ್ರೀಕಾಂತ ಹೆಗಡೆ, ಎಂ.ಎಂ.ಭಟ್ಟ, ಮಂಜು ಮೊಗೇರ, ಅಶೋಕ ಭಟ್ಟ ಇದ್ದರು.

ಜನಜಾಗೃತಿ:ಇದೇ ರೀತಿ ಸ್ವಚ್ಛವಾಗಿದ್ದ ಬನವಾಸಿ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ಬಂದಿದ್ದ ಸಾಮಗ್ರಿಗಳ ಪ್ಯಾಕಿಂಗ್ ಕವರ್‌ ಅನ್ನು ಎಸೆದಿದ್ದರು. ಅದರಲ್ಲಿದ್ದ ವಿಳಾಸದ ಮೂಲಕ ಪತ್ತೆ ಹಚ್ಚಿದ ಕಾರ್ಯಪಡೆಯ ಸದಸ್ಯರಾದ ವಿನಯ್ ಜೋಶಿ, ಶ್ರೀಕಾಂತ ಹೆಗಡೆ, ಡಾ.ಶಿವರಾಮ ಅವರು, ಆ ವ್ಯಕ್ತಿ ಉದ್ಯೋಗ ಮಾಡುವ ಕಂಪನಿಯ ಮಾಲೀಕರಿಗೆ ಮಾಹಿತಿ ನೀಡಿ, ಅದನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾದರು.

ಕಾರ್ಯಪಡೆಯ ಈ ಕಾರ್ಯ ನಗರದ ಎಲ್ಲೆಡೆ ವ್ಯಾಪಿಸಿದೆ. ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಈ ವಿಷಯ ಚರ್ಚೆಯಾಗುತ್ತಿದೆ. ಕಂಡಕಂಡಲ್ಲಿ ಕಸ ಎಸೆಯುವ ಬದಲು ನಗರಸಭೆ ವಾಹನಕ್ಕೆ ಕಸ ನೀಡುವುದು ಒಳಿತು ಎಂಬ ಸಂದೇಶ ರವಾನೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT