ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದ ಪ್ರಯಾಣಿಕರ ಮೇಲೆ ನಿಗಾ ಇಡಿ; ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಸೂಚನೆ

ತಾ.ಪಂ ಸಾಮಾನ್ಯ ಸಭೆಯಲ್ಲಿ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಸೂಚನೆ
Last Updated 26 ಮಾರ್ಚ್ 2021, 15:12 IST
ಅಕ್ಷರ ಗಾತ್ರ

ಕಾರವಾರ: ‘ಮಹಾರಾಷ್ಟ್ರದಿಂದ ಕಾರವಾರಕ್ಕೆ ಬಸ್‌ಗಳಲ್ಲಿ ಬರುವ ಪ್ರಯಾಣಿಕರು ಕಡ್ಡಾಯವಾಗಿ 72 ಗಂಟೆಗಳ ಮೊದಲು ಪಡೆದ ಆರ್.ಟಿ.ಪಿ.ಆರ್. ನೆಗೆಟಿವ್ ವರದಿ ಹೊಂದಿರಲೇಬೇಕು. ಒಂದುವೇಳೆ ಇಲ್ಲದವರಿಗೆ ಗಡಿ ಪ್ರವೇಶಿಸಲು ಅವಕಾಶ ಕೊಡಬೇಡಿ’ ಎಂದು ತಹಶೀಲ್ದಾರ್ ಆರ್.ವಿ.ಕಟ್ಟಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ಕಾರವಾರದಿಂದ ಮಹಾರಾಷ್ಟ್ರದ ವಿವಿಧೆಡೆ ಸಂಚರಿಸುತ್ತಿವೆ. ನಗರದ ಬಸ್ ನಿಲ್ದಾಣದಲ್ಲೂ ಪರಿಶೀಲನೆಗಾಗಿ ಕಂದಾಯ ಇಲಾಖೆಯ ಸಿಬ್ಬಂದಿಯನ್ನು ನೇಮಿಸಲಾಗಿದೆ’ ಎಂದು ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ರವೀಂದ್ರ ಪಾತ್ರಪೇಕರ್, ಈ ನಿಟ್ಟಿನಲ್ಲಿ ಮತ್ತಷ್ಟು ಗಮನ ಹರಿಸುವುದಾಗಿ ತಿಳಿಸಿದರು.

ಸಭೆಯ ಆರಂಭದಲ್ಲಿ ಮಾಹಿತಿ ನೀಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸೂರಜಾ ನಾಯ್ಕ, ‘ತಾಲ್ಲೂಕಿನಲ್ಲಿ ಕೋವಿಡ್ ಲಸಿಕೆ ನೀಡಲು 60 ವರ್ಷಕ್ಕಿಂತ ಮೇಲಿನ 13 ಸಾವಿರ ಜನರನ್ನು ಗುರುತಿಸಲಾಗಿದೆ. ಈವರೆಗೆ 5,671 ಮಂದಿ ಮಾತ್ರ ಪಡೆದುಕೊಂಡಿದ್ದಾರೆ. ಲಸಿಕೆಯ ಬಗ್ಗೆ ಯಾವುದೇ ವದಂತಿಗಳಿಗೂ ಕಿವಿ ಕೊಡಬಾರದು’ ಎಂದು ಮನವಿ ಮಾಡಿದರು.

ಶಿಕ್ಷಣ ಇಲಾಖೆಯ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ನಾಯಕ ಮಾತನಾಡಿ, ‘ನಾಗಪೋಂಡಾ ಸರ್ಕಾರಿ ಶಾಲೆಯ ಪ್ರದೇಶವು ಮೂರು ನಾಲ್ಕು ಜನರ ಹೆಸರಿನಲ್ಲಿದೆ. ಶಾಲೆಯ ಕಟ್ಟಡವಿರುವ ಜಾಗದ ಜಮೀನು ಯಾರ ಹೆಸರಿನಲ್ಲಿದೆ ಎಂದು ಪತ್ತೆ ಹಚ್ಚಲಾಗುವುದು’ ಎಂದರು.

‘ಈ ಬಾರಿ ಎಸ್ಸೆಸ್ಸೆಲ್ಸಿ ಪ‍ರೀಕ್ಷೆಗೆ ತಾಲ್ಲೂಕಿನಿಂದ 2,035 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. 100 ದಿನಗಳ ಕ್ರಿಯಾಯೋಜನೆ ಹಮ್ಮಿಕೊಂಡಿದ್ದು, ಪ್ರತಿ ವಿದ್ಯಾರ್ಥಿಯೂ ಉತ್ತೀರ್ಣವಾಗುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ’ ಎಂದು ತಿಳಿಸಿದರು.

ಸದಸ್ಯೆ ನಂದಿನಿ ಗುನಗಿ ಮಾತನಾಡಿ, ‘2020ರಲ್ಲಿ ತಯಾರಾದ ಹಾಲಿನ ಪುಡಿಯನ್ನು ಕೆಲವು ಅಂಗನವಾಡಿಗಳಲ್ಲಿ ಕೊಡಲಾಗುತ್ತಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಹಿಂಬದಿಯಿಂದ ನನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದಾರೆ. ನಾನು ಆ ಶಾಲೆಯ ಹೆಸರು ಹೇಳುವುದಿಲ್ಲ. ನೀವೇ ಕಂಡುಹಿಡಿಯಿರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಧ್ಯಕ್ಷೆ ಪ್ರಮೀಳಾ ನಾಯ್ಕ ಕೂಡ ಧ್ವನಿಗೂಡಿಸಿ, ಬರ್ಗೆಯಲ್ಲೂ ಇದೇ ಸಮಸ್ಯೆಯಿದೆ ಎಂದರು.

ಅಕಾಲಿಕ ಮಳೆಯಿಂದ ಹಾನಿ:

ತಾಲ್ಲೂಕಿನಲ್ಲಿ ಬುಧವಾರ ಸುರಿದ ಅಕಾಲಿಕ ಮಳೆಯಿಂದ ಹಲವೆಡೆ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಹಶೀಲ್ದಾರ್ ಆರ್.ವಿ.ಕಟ್ಟಿ ಮಾತನಾಡಿ, ‘ಗಾಳಿ ಮತ್ತು ಮಳೆಯಿಂದ ವಿವಿಧ ಕಡೆಗಳಲ್ಲಿ ಮೂರು ಮನೆಗಳಿಗೆ ಹಾನಿಯಾಗಿದೆ. ಈ ಬಗ್ಗೆ ಎಂಜಿನಿಯರ್ ವರದಿ ತರಿಸಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎನ್.ಗುಡಿಗಾರ್ ಮಾತನಾಡಿ, ‘ಘಾಡಸಾಯಿಯಲ್ಲಿ ಒಂದು ಎಕರೆ ಮೆಕ್ಕೆಜೋಳಕ್ಕೆ ಹಾನಿಯಾಗಿದೆ’ ಎಂದು ತಿಳಿಸಿದರು.

ಹೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶೇಬಣ್ಣನವರ್, ‘ಗಾಳಿಯಿಂದಾಗಿ ಹಲವೆಡೆ ವಿದ್ಯುತ್ ಕಂಬಗಳು ಮತ್ತು ತಂತಿಗಳಿಗೆ ಹಾನಿಯಾಗಿತ್ತು. ನಮ್ಮ ಸಿಬ್ಬಂದಿ ರಾತ್ರಿ 12.30ಕ್ಕೆ ಸುಮಾರಿಗೆ ಸರಿ ಪಡಿಸಿದ್ದಾರೆ’ ಎಂದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸೇರಿದಂತೆ ಸದಸ್ಯರು ಮೆಚ್ಚುಗೆ ಸೂಚಿಸಿದರು.

ಉಪ ಚುನಾವಣೆ 29ಕ್ಕೆ:

‘ವೈಲವಾಡ ಗ್ರಾಮ ಪಂಚಾಯಿತಿಯ ಒಂದು ವಾರ್ಡ್‌ಗೆ ಉಪ ಚುನಾವಣೆಯು ಮಾರ್ಚ್ 29ಕ್ಕೆ ನಡೆಯಲಿದೆ. ಚುನಾವಣೆಗೆ ಎರಡು ನಾಮಪತ್ರಗಳು ಸಲ್ಲಿಕೆಯಾಗಿವೆ. ಕಿನ್ನರ ಗ್ರಾಮ‍ ಪಂಚಾಯಿತಿಯ ಒಂದು ಕ್ಷೇತ್ರಕ್ಕೆ ಅವಿರೋಧ ಆಯ್ಕೆಯಾಗಿದೆ’ ಎಂದು ತಹಶೀಲ್ದಾರ್ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಶಿಶು ಅಭಿವೃದ್ಧಿ ಅಧಿಕಾರಿ, ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಉಪಾಧ್ಯಕ್ಷ ರವೀಂದ್ರ ಪವಾರ್, ತಾಲ್ಲೂಕು ಪಂಚಾಯಿತಿಯ ಇ.ಒ ಡಾ.ಆನಂದಕುಮಾರ ಬಾಲಪ್ಪನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT