ಸೋಮವಾರ, ನವೆಂಬರ್ 18, 2019
20 °C
ರಾಜ್ಯದ ಏಕೈಕ ಕರಿಮರಳಿನ ಕಡಲತೀರಕ್ಕೆ ಸಂಪರ್ಕ: ಅಂತಿಮ ಹಂತ ತಲುಪಿದ ಟೆಂಡರ್ ಪ್ರಕ್ರಿಯೆ

ತೀಳ್‌ಮಾತಿಗೆ ಮಾಜಾಳಿ ಜೊತೆ ‘ಸೇತುಬಂಧ’

Published:
Updated:
Prajavani

ಕಾರವಾರ: ರಾಜ್ಯದ ಏಕೈಕ ಕಪ್ಪು ಮರಳಿನ ಕಡಲತೀರ ತೀಳ್‌ಮಾತಿಗೆ ಕೊನೆಗೂ ಸೇತುವೆ ನಿರ್ಮಾಣವಾಗಲಿದೆ. ಒಟ್ಟು ₹ 3.23 ಕೋಟಿ ಮೌಲ್ಯದ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. 

‘ಈ ಮೊತ್ತದಲ್ಲಿ ₹ 2.23 ಕೋಟಿಯಲ್ಲಿ ಸೇತುವೆ ಹಾಗೂ ₹ 1 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯಲಿದೆ. ಕಡಲ ಕಿನಾರೆಯಿಂದಲೇ ಬೆಟ್ಟಕ್ಕೆ ಸೇತುವೆಯನ್ನು ನಿರ್ಮಿಸಲಾಗುವುದು. ಅದರ ಸಮೀಪದಿಂದ ತೀಳ್‌ಮಾತಿ ಕಡಲತೀರಕ್ಕೆ ಹೋಗಲು ಅರ್ಧ ಕಿಲೋಮೀಟರ್ ಉದ್ದದ ಚಿರೆಕಲ್ಲಿನ ರಸ್ತೆಯೂ ನಿರ್ಮಾಣವಾಗಲಿದೆ’ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಲ್ಪನಾ ವಾಗ್ಮೋರೆ ಮಾಹಿತಿ ನೀಡಿದ್ದಾರೆ.

‘ಇದರಲ್ಲಿ ನಡೆದುಕೊಂಡು ಹೋಗಲು ಮಾತ್ರ ಅವಕಾಶವಿದೆ. ಪ್ರವಾಸಿಗರ ಸುರಕ್ಷತೆಗಾಗಿ ದಾರಿಯ ಒಂದು ಭಾಗದಲ್ಲಿ ರೇಲಿಂಗ್ ಅಳವಡಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ತಾಲ್ಲೂಕಿನ ಮಾಜಾಳಿ ಗ್ರಾಮದಲ್ಲಿರುವ ಈ ಕಡಲತೀರ ನೈಸರ್ಗಿಕ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುವ ತಾಣ. ಇಲ್ಲಿಗೆ ಹೋಗಲು ಸಮುದ್ರದ ಹಿನ್ನೀರನ್ನು ದಾಟಿಕೊಂಡು ಬೆಟ್ಟ ಹತ್ತಿ ಸುಮಾರು ಎರಡು ಕಿಲೋಮೀಟರ್ ನಡೆಯಬೇಕು. ಅಲೆಗಳ ಅಬ್ಬರ ಜಾಸ್ತಿಯಿದ್ದಾಗ ಬೆಟ್ಟದ ಬುಡದಲ್ಲಿ ನೀರು ಜಾಸ್ತಿಯಿರುತ್ತದೆ. ಹಾಗಾಗಿ ಪ್ರವಾಸಿಗರಿಗೆ ದಾಟಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅಲ್ಲಿ ಸೇತುವೆ ನಿರ್ಮಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು.

ಪ್ರವಾಸಿಗರ ಆಕರ್ಷಣೆ: ಬೆಟ್ಟದ ಅರ್ಧ ಭಾಗದಲ್ಲಿ ಇರುವ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುವಾಗ ಕಾಣುವ ಸಮುದ್ರದ ನೋಟ ವಿಶಿಷ್ಟ ಅನುಭವ ನೀಡುತ್ತದೆ. ಮೂಲ ಸೌಕರ್ಯಗಳ ಕೊರತೆಯ ನಡುವೆಯೂ ಇಲ್ಲಿಗೆ ಸಾವಿರಾರು ಪ್ರವಾಸಿಗರು ವರ್ಷಂಪ್ರತಿ ಭೇಟಿ ನೀಡುತ್ತಾರೆ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಚಮಕ್’ ಚಲನಚಿತ್ರ, ಹಲವು ಧಾರಾವಾಹಿಗಳಿಗೂ ಈ ತಾಣದಲ್ಲಿ ಚಿತ್ರೀಕರಣವಾಗಿವೆ. ಇದೇರೀತಿ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲು ಕನಿಷ್ಠ ಸೌಲಭ್ಯದ ಅಗತ್ಯವಿದೆ ಎಂದು ಪ್ರವಾಸೋದ್ಯಮ ಇಲಾಖೆಗೆ ಹತ್ತಾರು ಮನವಿಗಳು ಸಲ್ಲಿಕೆಯಾಗಿದ್ದವು. 

ಸುಮಾರು ಐದು ವರ್ಷಗಳ ಹಿಂದೆ ಸೇತುವೆ ನಿರ್ಮಿಸಲು ಪ್ರವಾಸೋದ್ಯಮ ಇಲಾಖೆಯಿಂದ ₹ 1 ಕೋಟಿ ಮಂಜೂರಾಗಿತ್ತು. ಆಗಿನ ಶಾಸಕ ಸತೀಶ ಸೈಲ್ ಈ ಮೊತ್ತ ಕಾಮಗಾರಿಗೆ ಸಾಕಾಗದು ಎಂದು ಹೆಚ್ಚಿನ ಅನುದಾನಕ್ಕೆ ಮನವಿ ಮಾಡಿದ್ದರು. ಈಗ ಅನುದಾನ ಬಿಡುಗಡೆಯಾಗಿ ಕಾಮಗಾರಿಗೆ ಸಿದ್ಧತೆ ನಡೆದಿದೆ.

ದಾರಿ ಆವರಿಸಿದ ಪೊದೆ: ಮಳೆಗಾಲದ ಬಳಿಕ ತೀಳ್‌ಮಾತಿಗೆ ಪ್ರವಾಸಿಗರ ಭೇಟಿ ನೀಡಲು ಆರಂಭಿಸಿದ್ದಾರೆ. ಆದರೆ, ಮುಳ್ಳಿನ ಗಿಡಗಳು, ತುರಿಕೆಯ ಹುಲ್ಲಿನ ಪೊದೆಗಳು ಕಾಲುದಾರಿಯನ್ನು ಮುಚ್ಚಿವೆ. ಇದರಿಂದ ಪ್ರವಾಸಿಗರಿಗೆ ಮುಂದೆ ಸಾಗಲು ಅಡಚಣೆಯಾಗುತ್ತಿದೆ. ಇದನ್ನು ತೆರವು ಮಾಡಿ ಅನುಕೂಲ ಮಾಡಿಕೊಡಬೇಕು. ಅಲ್ಲದೇ ಮಾಜಾಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಿಂದ ಈ ಕಡಲ ತೀರಕ್ಕೆ ಹೋಗುವ ದಾರಿಯ ಬಗ್ಗೆ ಗಮನ ಸೆಳೆಯುವ ರೀತಿಯಲ್ಲಿ ಫಲಕ ಅಳವಡಿಸಬೇಕು ಎಂಬುದು ಮಂಗಳೂರಿನ ಪ್ರವಾಸಿ ಸುಬ್ರಹ್ಮಣ್ಯ ಭಟ್ ಅವರ ಒತ್ತಾಯವಾಗಿದೆ.

ಪ್ರತಿಕ್ರಿಯಿಸಿ (+)