ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಾಣಿ ವ್ಯಾಪಾರಿಯ ಕನ್ನಡ ಪ್ರೀತಿ

ಕನ್ನಡ ಅಂಕೆಯಲ್ಲೇ ಲೆಕ್ಕ ಬರೆಯುವ ಮಂಜುಗುಣಿಯ ಬಾಲಚಂದ್ರ ಖರೆ
Last Updated 31 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಶಿರಸಿ: ಐದೂವರೆ ದಶಕಗಳಿಂದ ಕನ್ನಡ ಅಂಕೆಯನ್ನೇ ಬಳಸಿ ವ್ಯವಹರಿಸುತ್ತಿರುವ ತಾಲ್ಲೂಕಿನ ಮಂಜುಗುಣಿಯ ಬಾಲಚಂದ್ರ ಖರೆ, ಅದನ್ನು ಇಂದಿನ ಪೀಳಿಗೆಗೂ ಕಲಿಸಿಕೊಡುವ ಪ್ರಯತ್ನ ಮಾಡಿದ್ದಾರೆ.

69 ವರ್ಷದ ಬಾಲಚಂದ್ರ ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ಈ ಮೊದಲು ಮಂಜುಗುಣಿಯ ಪ್ರಸಿದ್ಧ ವೆಂಕಟರಮಣ ದೇವಾಲಯದಲ್ಲಿ ಲೆಕ್ಕಪತ್ರ ವ್ಯವಹಾರವನ್ನೂ ನೋಡಿಕೊಳ್ಳುತ್ತಿದ್ದರು.

ಏಳನೇ ತರಗತಿವರೆಗೆ ಓದಿರುವ ಅವರು ಹದಿಮೂರನೇ ವಯಸ್ಸಿಗೆ ಅಂಗಡಿ ವ್ಯವಹಾರ ನೋಡಿಕೊಳ್ಳಲಾರಂಭಿಸಿದ್ದರು. ಲೆಕ್ಕಗಳನ್ನು ಬರೆಯುವಾಗ ಕನ್ನಡದ ಅಂಕೆಯನ್ನೇ ಬಳಸುವುದನ್ನು ರೂಢಿಸಿಕೊಂಡರು. ಈಗಲೂ ಅದನ್ನೇ ಮುಂದುವರಿಸಿದ್ದಾರೆ.

‘ಕನ್ನಡ ಅಂಕೆ ಬಳಕೆ ಬಗ್ಗೆ ತಂದೆ, ದೊಡ್ಡಪ್ಪನಿಂದ ಕಲಿತುಕೊಂಡೆ. ನನಗೆ ಇಂಗ್ಲಿಷ್ ಅಂಕೆ ಬರೆಯಲು ಬರುತ್ತದೆ. ಆದರೆ, ಕನ್ನಡ ಅಂಕೆಗಳ ಮೇಲೆ ಆಕರ್ಷಣೆ, ಆಸಕ್ತಿ ಹೆಚ್ಚು. ಹೀಗಾಗಿ ಮನೆ ಮತ್ತು ಅಂಗಡಿಯಲ್ಲಿ ಅದನ್ನೇ ಬಳಸುತ್ತೇನೆ’ ಎನ್ನುತ್ತಾರೆ ಬಾಲಚಂದ್ರ ಖರೆ.

‘ದೇವಸ್ಥಾನದಲ್ಲಿ ಲೆಕ್ಕಾಧಿಕಾರಿಯಾಗಿ ನಾಲ್ಕು ದಶಕ ಕೆಲಸ ಮಾಡಿದ್ದೇನೆ. ಆಯವ್ಯಯ ಮಂಡನೆ, ಲೆಕ್ಕ ಪರಿಶೋಧನೆ ವೇಳೆ ಗೊಂದಲವಾಗಬಾರದು ಎಂಬ ಕಾರಣಕ್ಕೆ ಅಲ್ಲಿ ಮಾತ್ರ ಇಂಗ್ಲಿಷ್ ಅಂಕೆ ಬಳಸುತ್ತಿದ್ದೆ. ಅಂಗಡಿಯಲ್ಲಿ ಗ್ರಾಹಕರಿಗೂ ಕನ್ನಡ ಅಂಕೆಯಲ್ಲೇ ಬರೆದು ಚೀಟಿ ಕೊಡುತ್ತೇನೆ. ಅವರಿಗೆ ಅರ್ಥವಾಗುವುದಿಲ್ಲ ಎಂದಾದರೆ ಮಾತ್ರ ಇಂಗ್ಲಿಷ್ ಅಂಕೆಯಲ್ಲಿ ಬರೆದುಕೊಡುತ್ತಿದ್ದೇನೆ’ ಎಂದು ತಿಳಿಸಿದರು.

‘ಮಂಜುಗುಣಿಗೆ ಭೇಟಿ ನೀಡಿದ ಅನೇಕ ಪ್ರವಾಸಿಗರು ನಾನು ಕನ್ನಡ ಅಂಕೆ ಬಳಸುವುದನ್ನು ಕಂಡು ಅಚ್ಚರಿಪಟ್ಟಿದ್ದರು. ಕೆಲವರಿಗೆ ಈ ಅಂಕೆಗಳನ್ನು ದೈನಂದಿನ ವ್ಯವಹಾರದಲ್ಲಿ ಬಳಸುತ್ತಾರೆ ಎಂಬುದೂ ಗೊತ್ತರಲಿಲ್ಲ. ಕೆಲವು ಆಸಕ್ತರು ಕಲಿತುಕೊಂಡು ಹೋದರು. ನನ್ನ ಮನೆಯಲ್ಲಿ ಮಕ್ಕಳು, ಮೊಮ್ಮಕ್ಕಳಿಗೆ ಕನ್ನಡ ಅಂಕೆ ಬರೆಯುವುದನ್ನು ಕಲಿಸಿಕೊಡುವ ಪ್ರಯತ್ನ ಮಾಡಿದ್ದೇನೆ’ ಎಂದು ಹೇಳಿದರು.

ಶಿರಸಿ ತಾಲ್ಲೂಕಿನ ಮಂಜುಗುಣಿಯ ಬಾಲಚಂದ್ರ ಖರೆ ಅವರು ಅಂಗಡಿಯ ಲೆಕ್ಕವನ್ನುಕನ್ನಡಅಂಕೆ ಬಳಸಿ ಬರೆದಿರುವುದು

ಇಂದಿನ ಪೀಳಿಗೆಗೆ ಕನ್ನಡ ಅಂಕೆಗಳ ಬಗ್ಗೆ ಮಾಹಿತಿ ಇಲ್ಲ. ಅವರಿಗೆ ಕಲಿಸಿಕೊಡಲು ಪಾಲಕರು, ಶಿಕ್ಷಣ ಇಲಾಖೆ ಮುಂದಾಗಬೇಕು. ಮಾತೃಭಾಷೆ ಮತ್ತು ಅದರ ಮೂಲಕ ಬರೆಯುವ ಅಂಕೆಗಳು ಪ್ರತಿಯೊಬ್ಬರಿಗೂ ಗೊತ್ತಿರಬೇಕು.

- ಬಾಲಚಂದ್ರ ಖರೆ, ಕಿರಾಣಿ ಅಂಗಡಿ ವರ್ತಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT