ಭಾನುವಾರ, ಸೆಪ್ಟೆಂಬರ್ 26, 2021
21 °C
ಕುಮಟಾದಲ್ಲಿ ‘ನಗರ ಹಸಿರೀಕರಣ’ ಯೋಜನೆಯಡಿ ಬೆಳೆಸಿದ ಸಾಲದೂಪ, ಸಂಪಿಗೆ, ಮಹಾಗನಿ ಗಿಡಗಳು

ಕುಮಟಾದ ‘ಆಮ್ಲಜನಕದ ಬ್ಯಾಂಕ್’ ಮಾದರಿ ಅರಣ್ಯ!

ಎಂ.ಜಿ.ನಾಯ್ಕ Updated:

ಅಕ್ಷರ ಗಾತ್ರ : | |

Prajavani

ಕುಮಟಾ: ಸುತ್ತಲೂ ಪಟ್ಟಣದ ಕಟ್ಟಡಗಳು. ಅದರ ನಡುವೆ 12 ಎಕರೆ ಪ್ರದೇಶದಲ್ಲಿ ವಿವಿಧ ಜಾತಿಯ ಗಿಡಮರಗಳು. ಪಟ್ಟಣದಲ್ಲಿ ಅರಣ್ಯ ಇಲಾಖೆ ತನ್ನ ಜಾಗದಲ್ಲಿ ಬೆಳೆಸುತ್ತಿರುವ ಒಂದೂವರೆ ಸಾವಿರಕ್ಕೂ ಅಧಿಕ ಗಿಡಗಳು ಈಗ ಸುತ್ತಮುಮತ್ತಲಿನ ಜನರ ಆರೋಗ್ಯ ಹಾಗೂ ಪ್ರಕೃತಿ ಸೌಂದರ್ಯ ಹೆಚ್ಚಿಸುತ್ತಿದೆ.

ಸರ್ವೆ ನಂಬರ್ 440/ಅ ಜಾಗದಲ್ಲಿ 2018ರಲ್ಲಿ ಅರಣ್ಯ ಇಲಾಖೆಯ ‘ನಗರ ಹಸಿರೀಕರಣ ಯೋಜನೆ’ಯಡಿ ಇಲ್ಲಿ ಸಸಿಗಳನ್ನು ನೆಡಲಾಯಿತು. ಸಾಲದೂಪ, ಸಂಪಿಗೆ, ಮಹಾಗನಿ, ಮಾವು, ಹಲಸು, ನೇರಳೆ, ಹುಣಸೆ, ಶಿವಲಿಂಗ ಹಾಗೂ ಹೊಳೆ ದಾಸವಾಳ ಜಾತಿಯ ಸುಮಾರು 1,650 ಗಿಡಗಳನ್ನು ನಾಟಿ ಮಾಡಲಾಯಿತು. ಅವೆಲ್ಲ ಈಗ ಎತ್ತರಕ್ಕೆ ಬೆಳೆದಿವೆ.

ಜಾಗದ ಅರ್ಧ ಭಾಗಕ್ಕೆ ಕಾಂಪೌಂಡ್ ಇದೆ. ಇನ್ನರ್ಧ ಭಾಗಕ್ಕೆ ಅರಣ್ಯ ಸಿಬ್ಬಂದಿ ತಂತಿ ಬೇಲಿ ಹಾಕಿ ರಕ್ಷಿಸಿದ್ದಾರೆ. ಸುತ್ತಲೂ ಜನವಸತಿ, ಡಾ. ಎ.ವಿ. ಬಾಳಿಗಾ ಕಾಲೇಜು ಹಾಗೂ ತೋಟಗಾರಿಕಾ ಇಲಾಖೆ ಕಚೇರಿ ಇದೆ. ಈ ಕಾರಣದಿಂದಲೂ ಈ ವನಕ್ಕೆ ಸಹಜ ರಕ್ಷಣೆ ದೊರಕಿದೆ.

‘ಹಣ್ಣು, ನೆರಳು ಹಾಗೂ ಹೆಚ್ಚು ಆಮ್ಲಜನಕ ನೀಡುವಂಥ ಗಿಡಗಳನ್ನೇ ನೆಟ್ಟು ಅವುಗಳಿಗೆ ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ನೀಡಲಾಗಿದೆ. ಹಾಗಾಗಿ ಶೇ 99ರಷ್ಟು ಗಿಡಗಳು ಬದುಕಿವೆ. ಬೇಸಿಗೆಯಲ್ಲಿ ಬೆಂಕಿ ತಗುಲದಂತೆ ಸಿಬ್ಬಂದಿ ಹಗಲು ರಾತ್ರಿ ಕಾವಲು ಕಾದಿದ್ದಾರೆ. ಈ ಜಾಗ ಹಾಗೇ ಇದ್ದಿದ್ದರೆ ಅತಿಕ್ರಮಣ, ಕಸ ಎಸೆಯುವುದು, ಅನೈತಿಕ ಚಟುವಟಿಕೆ ನಡೆಯುುತ್ತಿತ್ತು. ಪಟ್ಟಣದಲ್ಲಿ ಒಂದು ಮಾದರಿ ಹಸಿರು ವನ ನಿರ್ಮಿಸುವ ಕನಸಿನೊಂದಿಗೆ ಇದನ್ನು ರೂಪಿಸಲಾಗುತ್ತಿದೆ’ ಎಂದು ಕುಮಟಾ ಆರ್.ಎಫ್.ಒ ಪ್ರವೀಣ ನಾಯಕ ತಿಳಿಸಿದರು.

‘ನಾವು ಚಿಕ್ಕವರಿದ್ದಾಗ ಕಾಡಿನಂತಿದ್ದ ಈ ಜಾಗಕ್ಕೆ ನವಿಲುಗಳು ಬರುತ್ತಿದ್ದವು. 2018–19ರಲ್ಲಿ ಕುಮಟಾದ ಹಿಂದಿನ ವಲಯ ಅರಣ್ಯಾಧಿಕಾರಿ ವರದ ರಂಗನಾಥ ಅವರು ಸ್ವತಃ ನಿಂತು ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಇಲ್ಲಿ ಗಿಡ ನೆಡಿಸಿದ್ದಾರೆ. ಈ ವನದ ನಡುವೆ ಇರುವ ದೊಡ್ಡ ಕಲ್ಲು ಹೊಂಡದಲ್ಲಿ ಜಾನುವಾರು ಬೀಳದಂತೆ ಇದನ್ನು ಇಂಗು ಗುಂಡಿಯಾಗಿ ಬಳಸಿಕೊಳ್ಳಬೇಕು. ಇಲ್ಲಿ ಮತ್ತೆ ನವಿಲುಗಳು ಬರುತ್ತಿರುವುದು ಅಚ್ಚರಿ ಹಾಗೂ ಖುಷಿಯ ಸಂಗತಿ’ ಎಂದು ಸ್ಥಳೀಯರಾದ ಅತುಲ್ ಕಾಮತ್ ಸಂತಸ ವ್ಯಕ್ತಪಡಿಸುತ್ತಾರೆ.

ಈ ಯೋಜನೆ ಆರಂಭಿಸಿದ ವರದ ರಂಗನಾಥ ಅವರು ಈಗ ಮಂಕಿ ವಲಯ ಅರಣ್ಯಾಧಿಕಾರಿಯಾಗಿ ವರ್ಗವಾಗಿದ್ದಾರೆ. ಅವರು ಪ್ರತಿಕ್ರಿಯಿಸಿ, ‘ಈ ಮೊದಲು ಸ್ಥಳೀಯರು ಇಲ್ಲಿಗೆ ಸಂಜೆ, ಬೆಳಿಗ್ಗೆ ವಾಯು ವಿಹಾರಕ್ಕೆ ಬರುತ್ತಿದ್ದರು. ಕೆಲವು ಕುರುಚಲು ಹಿಂಡು ಬಿಟ್ಟರೆ ಗಿಡಗಳು ಇರಲಿಲ್ಲ. ಇಲ್ಲಿ ನೆಟ್ಟ ಗಿಡಗಳ ಹೊಣೆಯನ್ನು ಸಾರ್ವಜನಿಕರೂ ವಹಿಸಿಕೊಂಡರೆ ನಗರ ಹಸಿರೀಕರಣದಂಥ ಯೋಜನೆಗಳು ಯಶಸ್ವಿಯಾಗುತ್ತವೆ’ ಎಂದರು.

‘ರಕ್ಷಣೆಗೆ ಕ್ರಮ’: ‘ಈಗ ಗಿಡ ಬೆಳೆಸಿದ ಜಾಗದ ಹೆಚ್ಚಿನ ಭಾಗ ಚಿರೆ ಕಲ್ಲಿನಿಂದ ಕೂಡಿದೆ. ಅಲ್ಲಿ ಮಣ್ಣಿನ ತೇವಾಂಶ ಹೆಚ್ಚು ಕಾಲ ಇರುವಂತೆ ಕ್ರಮ ವಹಿಸಲಾಗುವುದು. ಡಿಸೆಂಬರ್ ತಿಂಗಳಲ್ಲಿ ಈ ಪ್ರದೇಶದಲ್ಲಿ ಬೆಳೆದ ಹುಲ್ಲನ್ನು ಸುಟ್ಟು ಬೇಸಿಗೆಯಲ್ಲಿ ಬೆಂಕಿ ಅನಾಹುತ ಉಂಟಾಗದಂತೆ ಕ್ರಮ ಕೈಗೊಂಡರೆ ಗಿಡಗಳು ಇನ್ನೂ ಚೆನ್ನಾಗಿ ಬೆಳೆಯುತ್ತವೆ’ ಎಂದು ಕುಮಟಾ ಸಹಾಯಕ ಅರಣ್ಯ ಸಂರಕ್ಷಾಣಧಿಕಾರಿ ಪ್ರವೀಣಕುಮಾರ ಬಸ್ರೂರ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು