ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಗೆ ಹೊರಟವರ ಪ್ರಾಣ ತೆಗೆದ ಅಪಘಾತ

ಕುಂದಾಪುರ ತಾಲ್ಲೂಕು ಕೋಟ ಮಾಣೂರು ಬಳಿ ಆಂಬುಲೆನ್ಸ್– ಲಾರಿ ಡಿಕ್ಕಿ: ಮೂವರ ಸಾವು
Last Updated 27 ಅಕ್ಟೋಬರ್ 2018, 14:36 IST
ಅಕ್ಷರ ಗಾತ್ರ

ಕಾರವಾರ: ಜಾಂಡೀಸ್‌ನಿಂದ ಬಳಲುತ್ತಿದ್ದವರಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಅವರೆಲ್ಲ ರಾತ್ರಿ ಮಣಿಪಾಲದತ್ತ ಆಂಬುಲೆನ್ಸ್‌ನಲ್ಲಿ ಪ್ರಯಾಣ ಬೆಳೆಸಿದ್ದರು. ಆದರೆ, ಬ್ರಹ್ಮಾವರ ಸಮೀಪದ ಕೋಟ ಮಾಣೂರು ಬಳಿ ರಸ್ತೆ ಅಪಘಾತದಲ್ಲಿ ಮೂವರ ಸಾವು ಎಂಬ ಸುದ್ದಿ ಸಂಬಂಧಿಕರನ್ನು ತಲ್ಲಣಗೊಳಿಸಿತು.

ತಾಲ್ಲೂಕಿನ ಅಮದಳ್ಳಿಯ ನಿವಾಸಿ ಉಲ್ಲಾಸ್ ಗಣಪತಿ ತಳೇಕರ್ (52) ಅವರು ಒಂದು ತಿಂಗಳಿನಿಂದ ಜಾಂಡೀಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸುಧಾರಿಸದ ಕಾರಣ ನಗರದ ಖಾಸಗಿ ಆಸ್ಪತ್ರೆಗೆ ಮೂರು ದಿನಗಳ ಹಿಂದೆ ದಾಖಲಾದರು. ಈ ನಡುವೆ ಅನಾರೋಗ್ಯ ಉಲ್ಬಣಿಸಿದ್ದರಿಂದ ಶುಕ್ರವಾರ ರಾತ್ರಿ 9.30ಕ್ಕೆ ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅವರ ಜತೆ ಪತ್ನಿ ಸರಿತಾ ಹಾಗೂ ಸಂಬಂಧಿಕರು ಇದ್ದರು.

ದುರಾದೃಷ್ಟಕ್ಕೆ ಮಾಣೂರು ಬಳಿ ಲಾರಿಗೆ ಆಂಬುಲೆನ್ಸ್ ಡಿಕ್ಕಿಯಾಗಿ ಉಲ್ಲಾಸ್, ಅವರ ಪತ್ನಿಯ ಸಹೋದರ ಅಶೋಕ ಬಾಡಕರ್ (50), ನೆರೆಮನೆಯ ಶೈಲೇಶ್ ಕಮಲಾಕರ ತಳೇಕರ್ (32) ಸ್ಥಳದಲ್ಲೇ ಮೃತಪಟ್ಟರು.

ಉಲ್ಲಾಸ್ ಅವರ ಪತ್ನಿ ಸರಿತಾ, ಆಂಬುಲೆನ್ಸ್ ಚಾಲಕ ರಾಘವೇಂದ್ರ ಅವರಿಗೂ ಗಂಭೀರವಾದ ಗಾಯಗಳಾಗಿದ್ದು, ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಹೋದರ ಅರವಿಂದ ಗಣಪತಿ ತಳೇಕರ್‌ ಕೈ ಮುರಿದಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೂಲಿ ಕೆಲಸವೇ ಜೀವನಾಧಾರ: ಉಲ್ಲಾಸ್ ಅವರ ಕುಟುಂಬಕ್ಕೆ ಕೂಲಿ ಕೆಲಸವೇ ಜೀವನಾಧಾರವಾಗಿತ್ತು. ಅವರ ಹಿರಿಯ ಮಗ ಚೇತನ್ ಐಟಿಐ ತರಬೇತಿ ಪಡೆದುಕೊಂಡಿದ್ದಾರೆ. ಎರಡನೇ ಪುತ್ರ ನೀಲೇಶ್ ಒಂಬತ್ತನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದಾನೆ. ಅಶೋಕಬಾಡಕರ್ಆಟೊ ರಿಕ್ಷಾ ಚಾಲನೆ ಮಾಡುತ್ತಿದ್ದರು.ಎಲ್ಲರ ಜತೆ ಉತ್ತಮ ಬಾಂಧವ್ಯ ಹೊಂದಿದ್ದ ಕುಟುಂಬ ಈಗ ಸಂಕಷ್ಟದಲ್ಲಿದೆ ಎಂದು ನೆರೆಮನೆಯ ದಿನೇಶ್ ಪಡ್ತಿ ಬೇಸರ ವ್ಯಕ್ತಪಡಿಸಿದರು.

ಆರು ತಿಂಗಳಲ್ಲಿ ಮೂರು ಸಾವು: ಉಲ್ಲಾಸ್ ಅವರ ನೆರೆಮನೆಯ ಯುವಕ ಶೈಲೇಶ್ ಅಂಗವಿಕಲ. ಅವರ ತಂದೆ ಕಮಲಾಕರ ತಳೇಕರ್ ಆರು ತಿಂಗಳ ಹಿಂದೆ ಮೃತಪಟ್ಟಿದ್ದರು. ಒಂದು ತಿಂಗಳ ಹಿಂದೆ ಚೌತಿಯ ಸಂದರ್ಭದಲ್ಲಿ ಅವರ ತಾಯಿ ಮೀರಾ ತೀರಿಹೋದರು. ಶುಕ್ರವಾರ ರಾತ್ರಿ ಅಪಘಾತದಲ್ಲಿ ಶೈಲೇಶ್ ಅಸುನೀಗಿದರು.

ಕಮಲಾಕರ ಸೀಬರ್ಡ್ ಯೋಜನೆಗೆ ಜಮೀನು ಕಳೆದುಕೊಂಡಿದ್ದರು. ಅದರ ಹೆಚ್ಚುವರಿ ಪರಿಹಾರದಲ್ಲಿ ಶೈಲೇಶ್ ತಮ್ಮ ಪಾಲಿನ ಹಣವನ್ನು ಒಂದು ವಾರದ ಹಿಂದೆಯಷ್ಟೇ ಪಡೆದುಕೊಂಡಿದ್ದರು. ಅವರು ಮನೆಯಲ್ಲಿ ಒಬ್ಬರೇ ಇದ್ದು, ಸಹೋದರರು ಪ್ರತ್ಯೇಕ ವಾಸವಿದ್ದಾರೆ ಎಂದು ಸಂಬಂಧಿಕರು ತಿಳಿಸಿದರು.

ಆರೋಗ್ಯ ಸೇವೆ ಸುಧಾರಣೆಗೆ ಆಗ್ರಹ:ಕಾರವಾರ ಸುತ್ತಮುತ್ತ ಸೂಕ್ತ ಆರೋಗ್ಯ ಸೌಕರ್ಯಗಳಿಲ್ಲದ ಕಾರಣ ಜನಸಾಮಾನ್ಯರ ಸಾವು ಹೆಚ್ಚುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೃತರ ನೆರೆಮನೆಯ ನಿವಾಸಿ ಅರುಣ್ ಶ್ರೀಕಾಂತ್ ತಳೇಕರ್ ಮಾತನಾಡಿ, ‘ತುರ್ತು ಸಂದರ್ಭಗಳಲ್ಲಿ ಇಲ್ಲಿ ಚಿಕಿತ್ಸಾ ಸೌಕರ್ಯಗಳು ಲಭಿಸುವುದಿಲ್ಲ. ದೂರದ ಮಣಿಪಾಲಕ್ಕೆ ಹೋಗುವಷ್ಟರಲ್ಲಿ ರೋಗಿಯ ಪರಿಸ್ಥಿತಿ ಬಿಗಡಾಯಿಸಿರುತ್ತದೆ. ಗೋವಾದ ಬಾಂಬೊಲಿಂನಲ್ಲಿ ಕರ್ನಾಟಕದವರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವುದೇ ಇಲ್ಲ. ಆದ್ದರಿಂದ ಈ ಭಾಗದಲ್ಲಿ ಆರೋಗ್ಯ ಸೇವೆಗಳನ್ನು ಸುಧಾರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT