ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುವಿಹಾರಿಗಳಿಗೆ ತಿಮ್ಮಕ್ಕನ ಸ್ವಾಗತ !

ಮಕ್ಕಳಿಗೆ ಮುದ ನೀಡುವ ಲಂಡಕನಳ್ಳಿಯ ವೃಕ್ಷೋದ್ಯಾನ
Last Updated 18 ಫೆಬ್ರುವರಿ 2019, 7:30 IST
ಅಕ್ಷರ ಗಾತ್ರ

ಶಿರಸಿ: ನಗರದ ಹೊರವಲಯದಲ್ಲಿ ವಿಶಾಲ ಜಾಗದಲ್ಲಿ ಮೈದಳೆದಿರುವ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವು ವಾಯುವಿಹಾರಿಗಳನ್ನು ಸೆಳೆಯುತ್ತಿದೆ.

ಲಂಡಕನಳ್ಳಿಯಲ್ಲಿ 11 ಹೆಕ್ಟೇರ್ ನಿರ್ಮಿಸಿರುವ ಉದ್ಯಾನದಲ್ಲಿ ವಿವಿಧ ಜಾತಿಯ ಸಸ್ಯಗಳು, ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕಾಡು ಪ್ರಾಣಿಗಳ ಚಿತ್ರ–ಮಾಹಿತಿ ಫಲಕ, ಮಕ್ಕಳ ಆಟಿಕೆಗಳು ಗಮನ ಸೆಳೆಯುತ್ತವೆ. 2016–17ರಲ್ಲಿ ₹ 15.2 ಲಕ್ಷ ವೆಚ್ಚದಲ್ಲಿ ಆವರಣ ಗೋಡೆ, ಚೈನ್‌ ಲಿಂಕ್ ಮೆಷ್ ಹಾಕಲಾಗಿತ್ತು. ನಂತರ ₹ 33 ಲಕ್ಷ ವೆಚ್ಚದಲ್ಲಿ ಪಾರಾಗೋಲಾ, ವಾಯುವಿಹಾರಿಗಳಿಗೆ ಆಸನ ವ್ಯವಸ್ಥೆ, ಕಾಲು ದಾರಿ, ಜಿಮ್ ಉಪಕರಣಗಳು, ಮಕ್ಕಳಿಗೆ ಮುದ ನೀಡುವ ಆಟಿಕೆಗಳನ್ನು ಅಳವಡಿಸಲಾಗಿದೆ. ಅಲಂಕಾರಿಕ ಹೂವಿನ ಗಿಡಗಳು ನೋಡುಗರನ್ನು ತನ್ನತ್ತ ಆಕರ್ಷಿಸುತ್ತವೆ.

ಪ್ರಶಾಂತ ಸ್ಥಳದಲ್ಲಿರುವ ಉದ್ಯಾನಕ್ಕೆ ನಿತ್ಯ ಸುತ್ತಲಿನ ನಾಗರಿಕರು ವಾಯುವಿಹಾರಕ್ಕೆ ಬರುತ್ತಾರೆ. ಪುಟ್ಟ ಮಕ್ಕಳಿಗೆ ಇದೊಂದು ಮನರಂಜನೆಯ ಕೇಂದ್ರವಾಗಿದೆ. ಗೋಡೆಯ ಮೇಲಿರುವ ಪ್ರಾಣಿ–ಪಕ್ಷಿಗಳು ಅವರ ಖುಷಿಯನ್ನು ಇಮ್ಮಡಿಸುತ್ತಿವೆ. ‘ಸ್ಥಾನಿಕ ಸಸ್ಯಗಳ ರಕ್ಷಣೆಯ ಉದ್ದೇಶದಿಂದ ಸುಮಾರು 40 ಜಾತಿಯ ಗಿಡಗಳನ್ನು ಇಲ್ಲಿ ನಾಟಿ ಮಾಡಲಾಗಿದೆ. ಮನುಷ್ಯರು ಮತ್ತು ಕಾಡಿನ ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಜನರಲ್ಲಿ, ಅದರಲ್ಲೂ ವಿಶೇಷವಾಗಿ ಯುವಜನರಲ್ಲಿ ಅರಿವು ಮೂಡಿಸುವ ಆಶಯ ಉದ್ಯಾನ ನಿರ್ಮಾಣದ ಮೂಲಕ ಸಾಕಾರಗೊಂಡಿದೆ’ ಎನ್ನುತ್ತಾರೆ ಶಿರಸಿ ವಲಯ ಅರಣ್ಯಾಧಿಕಾರಿ ಅಮಿತ್ ಚೌವ್ಹಾಣ್.

ನಗರಕ್ಕೆ ಬರುವ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವಂತೆ ಆಕರ್ಷಕವಾಗಿ ಉದ್ಯಾನವನ್ನು ರೂಪಿಸಲಾಗಿದೆ. ಪಕ್ಷಿ ವೀಕ್ಷಣೆ, ವನ್ಯಪ್ರಾಣಿ ರಕ್ಷಣೆಯ ಮಹತ್ವದ ಕುರಿತು ಫಲಕಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

‘ಉದ್ಯಾನ ನಿರ್ಮಾಣವಾಗಿರುವುದು ಸಾರ್ವಜನಿಕರಿಗೆ ಖುಷಿ ತಂದಿದೆ. ವೃಕ್ಷ ಸಂರಕ್ಷಣೆಯ ಸಂದೇಶ ಸಾರಿರುವ ಸಾಲು ಮರದ ತಿಮ್ಮಕ್ಕನ ಬಗ್ಗೆ ಅಪಾರ ಗೌರವವಿದೆ. ರಾಜ್ಯದೆಲ್ಲೆಡೆ ತಿಮ್ಮಕ್ಕನ ಹೆಸರಿನಲ್ಲಿ ಉದ್ಯಾನ ರೂಪುಗೊಳ್ಳುತ್ತಿದೆ. ಎಲ್ಲ ಕಡೆಯೂ ತಿಮ್ಮಕ್ಕನ ಹೆಸರನ್ನೇ ಇಡುವ ಬದಲಾಗಿ, ನಮ್ಮ ನೆಲದ ಪರಿಸರ ಹೋರಾಟಗಾರರು, ಪರಿಸರಕ್ಕಾಗಿ ಜೀವನ ಮುಡಿಪಾಗಿಟ್ಟವರ ಹೆಸರನ್ನು ಇಡುವ ಬಗ್ಗೆ ಅರಣ್ಯ ಇಲಾಖೆ ಯೋಚಿಸಬೇಕು. ಇದರಿಂದ ಮಕ್ಕಳಿಗೆ ಅನೇಕ ಪರಿಸರ ಹೋರಾಟಗಾರರ ಪರಿಚಯವಾದಂತಾಗುತ್ತದೆ’ ಎಂದು ಸ್ಥಳೀಯ ನಿವಾಸಿ ಸತೀಶ ನಾಯ್ಕ ಮಧುರವಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT