ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗರ ಆತ್ಮಭಿಮಾನಕ್ಕೆ ಇಂಬುಕೊಟ್ಟವ ಟಿಪ್ಪು: ಕೆ.ರಾಜು ಮೊಗವೀರ ಅಭಿಮತ

Last Updated 10 ನವೆಂಬರ್ 2018, 12:51 IST
ಅಕ್ಷರ ಗಾತ್ರ

ಶಿರಸಿ: ಕನ್ನಡಿಗರ ಆತ್ಮಾಭಿಮಾನಕ್ಕೆ ಇಂಬುಕೊಟ್ಟ, ಸ್ವಪ್ರಜ್ಞೆಯಿಂದ ಬಾಳುವ ಘನತೆ ತೋರಿಸಿಕೊಟ್ಟ ವ್ಯಕ್ತಿ ಟಿಪ್ಪು ಸುಲ್ತಾನ್ ಎಂದು ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ ಹೇಳಿದರು.

ತಾಲ್ಲೂಕು ಆಡಳಿತ, ನಗರಸಭೆ, ತಾಲ್ಲೂಕು ಪಂಚಾಯ್ತಿ ಜಂಟಿಯಾಗಿ ಶನಿವಾರ ಇಲ್ಲಿ ಆಯೋಜಿಸಿದ್ದ ಹಜರತ್ ಅಲಿ ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಅವರು ಮಾತನಾಡಿದರು. ಇಂದಿನ ಚಿಂತನೆ ಇಟ್ಟುಕೊಂಡು ಅಂದಿನ ಪರಿಸ್ಥಿತಿ ಅವಲೋಕಿಸುವುದು ಅಷ್ಟು ಸರಿಯಲ್ಲ. ಟಿಪ್ಪು ಸಾಧನೆಯನ್ನು ವಿಶ್ಲೇಷಿಸುವಾಗ, ಅಂದಿನ ದೇಶದ ರಾಜಕೀಯ ಪರಿಸ್ಥಿತಿ ಏನಿತ್ತು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ದೇಶದಲ್ಲಿ ಆಳಿ ಹೋಗಿರುವ ದೂರದೃಷ್ಟಿಯ ನಾಯಕರಲ್ಲಿ ಟಿಪ್ಪು ಕೂಡ ಒಬ್ಬರಾಗಿದ್ದರು ಎಂದರು.

ಬ್ರಿಟಿಷರು ದೇಶದಲ್ಲಿ ಪ್ರಭುತ್ವ ಸಾಧಿಸಬಹುದೆಂಬ ದೂರಾಲೋಚನೆ ಹೊಂದಿದ್ದ ಟಿಪ್ಪು, ಮರಾಠರು, ನಿಜಾಮರು, ಮೈಸೂರು ರಾಜರು ಹೀಗೆ ಎಲ್ಲರನ್ನು ಒಟ್ಟಿಗೆ ಸೇರಿಸಿ, ಬ್ರಿಟಿಷರ ವಿರುದ್ಧ ಹೋರಾಡಲು 18ನೇ ಶತಮಾನದಲ್ಲಿಯೇ ಯೋಜನೆ ರೂಪಿಸಿದ್ದರು. ಆದರೆ, ಈ ಯೋಜನೆ ಕೈಗೂಡಲಿಲ್ಲ. ಬೇರೆ ಬೇರೆ ದೇಶಗಳ ಸಹಾಯ ಪಡೆದು ಬ್ರಿಟಿಷರನ್ನು ಭಾರತದಿಂದ ಓಡಿಸಲು ತಂತ್ರಗಾರಿಕೆ ಬಳಸಿದ್ದ ಟಿಪ್ಪು, ಜಗತ್ತಿನ ಎಲ್ಲ ಮಹಾನ್ ಕ್ರಾಂತಿಗಳ ಬಗ್ಗೆ ಅಧ್ಯಯನ ಮಾಡಿದ್ದರು. ವಿದೇಶಗಳಿಂದ ಹಡಗಿನಲ್ಲಿ ಪುಸ್ತಕಗಳನ್ನು ತರಿಸಿಕೊಂಡು ಓದುತ್ತಿದ್ದರು. ಭಾರತಕ್ಕೆ ರೇಷ್ಮೆ ಬೆಳೆ, ರಾಕೆಟ್ ತಂತ್ರಜ್ಞಾನ ಪರಿಚಯಿಸಿದವರು ಅವರು ಎಂದು ಬಣ್ಣಿಸಿದರು.

ಸದೃಢ ರಾಜ್ಯ ಕಟ್ಟಲು ಉತ್ತಮ‌ ಆರ್ಥಿಕ ವ್ಯವಸ್ಥೆ, ನೀರಾವರಿ, ಉತ್ತಮ ವ್ಯಾಪಾರ ವಹಿವಾಟು, ರಸ್ತೆ ಹೀಗೆ ಅಭಿವೃದ್ಧಿ ವಿಚಾರಗಳು ಬೇಕು ಎಂದು ನಂಬಿದ್ದ ರಾಜ ಟಿಪ್ಪು. ಅವರು ನಡೆಸಿರುವ ಅನೇಕ ರಚನಾತ್ಮಕ ಕಾರ್ಯಗಳ ಬಗ್ಗೆ ವಸ್ತುನಿಷ್ಠವಾಗಿ ಬರೆದಿರುವ ಅನೇಕ ಪುಸ್ತಕಗಳು ಲಭ್ಯ ಇವೆ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ದೊಡ್ಮನಿ ಮಾತನಾಡಿ, ‘ಸಮಾಜಕ್ಕಾಗಿ ಹಲವು ಆದರ್ಶಗಳನ್ನು ಬಿಟ್ಟುಹೋಗಿರುವ ವ್ಯಕ್ತಿಗಳನ್ನು ಸ್ಮರಿಸಿಕೊಳ್ಳಬೇಕು, ಆ ಮೂಲಕ ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳಬೇಕು’ ಎಂದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ದಿನೇಶ ನೇತ್ರೇಕರ ಉಪನ್ಯಾಸ ನೀಡಿದರು.

ತಾಲ್ಲೂಕು ಪಂಚಾಯ್ತಿ ಸದಸ್ಯ ವಿನಾಯಕ ಭಟ್ಟ, ಮುಸ್ಲಿಂ ಸಮುದಾಯದ ಪ್ರಮುಖರಾದ ಮಹಮದ್ ಇಕ್ಬಾಲ್ ಬಿಳಗಿ, ನಿಸಾರ್ ಅಹಮ್ಮದ್ ಆನವಟ್ಟಿ ಇದ್ದರು. ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಸ್ವಾಗತಿಸಿದರು. ಶಿಕ್ಷಕ ಅಶೋಕ ಭಜಂತ್ರಿ ನಿರೂಪಿಸಿದರು. ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆ ಮಾಡಿದ ನಾಲ್ವರು ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಬಿಗಿ ಪೊಲೀಸ್ ಬಂದೋಬಸ್ತ್

ಬಿಗಿ ಪೊಲೀಸ್ ಬಂದೋಬಸ್ತಿನ ನಡುವೆ ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಟಿಪ್ಪು ಜಯಂತಿ ಶನಿವಾರ ನಡೆಯಿತು.

ಯಲ್ಲಾಪುರದಲ್ಲಿ ಟಿಪ್ಪು ಜಯಂತಿ ವಿರುದ್ಧ ಪಟ್ಟಣ ಪಂಚಾಯ್ತಿ ಸದಸ್ಯ ಸೋಮೇಶ್ವರ ನಾಯ್ಕ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ, ಎಂಟಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಶಿರಸಿಯಲ್ಲಿ ಟಿಪ್ಪು ಪರ ಘೋಷಣೆ ಕೂಗುತ್ತ, ಬಾವುಟ ಹಿಡಿದು ಬೈಕ್‌ನಲ್ಲಿ ಬಂದಿದ್ದ ಯುವಕರನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದರು. ಇನ್ನು ಕೆಲವು ಯುವಕರು ಬೈಕ್‌ ಅನ್ನು ವಾಪಸ್‌ ತಿರುಗಿಸಿಕೊಂಡು ಹೋಗಿ, ತಪ್ಪಿಸಿಕೊಂಡರು.

ಮೆರವಣಿಗೆ ಇನ್ನಿತರ ಕಟ್ಟುಪಾಡುಗಳನ್ನು ವಿಧಿಸಿರುವ ಟಿಪ್ಪು ಜಯಂತಿಗೆ ಬರುವುದಿಲ್ಲವೆಂದು ಘೋಷಿಸಿದ್ದ ಮುಂಡಗೋಡಿನ ಮುಸ್ಲಿಂ ಸಮುದಾಯದವರು, ಸರ್ಕಾರಿ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಐದು ಮಸೀದಿಗಳ ಅಧ್ಯಕ್ಷರ ನೇತೃತ್ವದಲ್ಲಿ ರಝಾಕ್ ಷಾ ವಲ್ಲಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಸಿಹಿ ವಿತರಣೆ ಮಾಡಿದರು. ಹಳಿಯಾಳದಲ್ಲಿ ಬಿಜೆಪಿ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ, ಪ್ರತಿಭಟಿಸಿದರು.

ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ನ. 10, 11ರಂದು ಜಿಲ್ಲೆಯಲ್ಲಿ ಯಾವುದೇ ಮೆರವಣಿಗೆ, ಬಹಿರಂಗ ಘೋಷಣೆ ಕೂಗುವುದನ್ನು ನಿರ್ಬಂಧಿಸಿ (ಕಲಂ 34(3), ಕರ್ನಾಟಕ ಪೊಲೀಸ್ ಆ್ಯಕ್ಟ್ 1963), ಜಿಲ್ಲಾಧಿಕಾರಿ ಎಸ್‌.ಎಸ್.ನಕುಲ್ ಅವರು ಶುಕ್ರವಾರ ಆದೇಶ ಹೊರಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT