ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊರ್ಕೆ ಗ್ರಾಮ ಪಂಚಾಯಿತಿ: ವ್ಯಾಪ್ತಿ ಹಿರಿದು, ಆದಾಯ ಕಿರಿದು

Last Updated 2 ಆಗಸ್ಟ್ 2022, 15:46 IST
ಅಕ್ಷರ ಗಾತ್ರ

ಗೋಕರ್ಣ: ಸ್ಪಷ್ಟ ಪರಿಕಲ್ಪನೆ ಮತ್ತು ಪ್ರಾಮಾಣಿಕ ಪ್ರಯತ್ನದೊಂದಿಗೆ ತೊರ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ಜಲ ಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ಪೂರೈಕೆ ಪ್ರಾರಂಭಿಸಿದ ಜಿಲ್ಲೆಯ ಮೊದಲ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಈ ಗ್ರಾಮದ್ದಾಗಿದೆ.

ನವೆಂಬರ್ ತಿಂಗಳಿನಲ್ಲಿ ₹ 50 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಭವ್ಯವಾದ ಆಡಳಿತ ಕಚೇರಿಯನ್ನು ನಿರ್ಮಿಸಲಾಗಿದೆ. ಹೊಸ ಕಟ್ಟಡದ ತಳಭಾಗದಲ್ಲಿ ಅಧ್ಯಕ್ಷರ, ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಗೆ ಪ್ರತ್ಯೇಕ ಕೊಠಡಿಗಳಿವೆ. ಇದರ ಹೊರತಾಗಿ ಇನ್ನಿತರ ಸಿಬ್ಬಂದಿಗೆ, ಕಂಪ್ಯೂಟರ್‌ಗಳಿಗೆ ವಿಶಾಲವಾದ ಸ್ಥಳ ಒದಗಿಸಲಾಗಿದೆ.

ಮೇಲಂತಸ್ತಿನಲ್ಲಿ ಸರ್ವ ಸದಸ್ಯರ ಸಭೆ ನಡೆಸಲು ಅನುಕೂಲವಾಗುವ ಸಭಾ ಭವನವಿದೆ. ಇದರ ಹಿಂದೆ ಗ್ರಾಮ ಪಂಚಾಯಿತಿಯ ಮೊಟ್ಟ ಮೊದಲ ತ್ಯಾಜ್ಯ ನಿರ್ವಹಣಾ ಘಟಕ ಕಟ್ಟಲಾಗಿದೆ. ಗ್ರಾಮ ಪಂಚಾಯಿತಿ ಕಟ್ಟಡದ ಮೇಲಿರುವ ಎತ್ತರದ ಗುಡ್ಡ ಪ್ರದೇಶದಲ್ಲಿ ನೀರು ಪೂರೈಕೆಗೆ ಬೃಹತ್ ಟ್ಯಾಂಕ್ ನಿರ್ಮಿಸಲಾಗಿದೆ. ಇಷ್ಟೆಲ್ಲಾ ಅಭಿವೃದ್ಧಿ ಆಗಿದ್ದು ಒಂದು ವರ್ಷದ ಅವಧಿಯಲ್ಲಿ ಎಂಬುದು ಗಮನಾರ್ಹ.

ತೊರ್ಕೆ ಗ್ರಾ.ಪಂ.ನಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಾಗಿವೆ. ಅದಕ್ಕೆ ಕಾರಣವಾಗಿರುವ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಅಭಿನಂದನೆಗೆ ಅರ್ಹರಾಗಿದ್ದಾರೆ ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಜಲ ಜೀವನ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ 756 ಮನೆಗಳಿಗೆ ನೀರು ಪೂರೈಕೆ ಪ್ರಾರಂಭಿಸಲಾಗಿದೆ. ಇದಕ್ಕಾಗಿ ಗ್ರಾಮಸ್ಥರು ₹ 7 ಲಕ್ಷಕ್ಕೂ ಅಧಿಕ ವಂತಿಗೆಯನ್ನು ಪಾವತಿಸಿದ್ದಾರೆ.

ಈ ಗ್ರಾಮ ಪಂಚಾಯಿತಿ ಹೊಸ್ಕಟ್ಟ– ತೊರೆ ಗಜನಿಯಿಂದ ಪ್ರಾರಂಭವಾಗಿ ರಾಷ್ಟ್ರೀಯ ಹೆದ್ದಾರಿ ಬಳಿಯ ಮಾದನಗೇರಿವರಗೆ ಎಂಟು ಕಿಲೋಮೀಟರ್ ವ್ಯಾಪ್ತಿಯಲ್ಲಿದೆ. ವಿಸ್ತೀರ್ಣಕ್ಕೆ ಸರಿಯಾಗಿ ಆದಾಯ ಮಾತ್ರ ಈ ಗ್ರಾಮ ಪಂಚಾಯಿತಿಗೆ ಇಲ್ಲ.

ಮಾದನಗೇರಿ ಭಾಗದಲ್ಲಿನ ಕೆಲವೇ ಅಂಗಡಿಗಳು, ಹೋಟೆಲ್‌ಗಳನ್ನು ಹೊರತಾಗಿ ಬೇರೆ ಯಾವುದೇ ವಾಣಿಜ್ಯ ವ್ಯವಹಾರಗಳಿಲ್ಲ. ಮನೆ ತೆರಿಗೆಯಿಂದ ವರ್ಷಕ್ಕೆ ಸುಮಾರು ₹ 3.50 ಲಕ್ಷ ಮಾತ್ರ ಈ ಪಂಚಾಯಿತಿಯ ಮೂಲ ಆದಾಯವಾಗಿದೆ. ಅದರಲ್ಲಿ ಶೇ 24ರಷ್ಟು ಸರ್ಕಾರಕ್ಕೆ ಕರ ರೂಪದಲ್ಲಿ ಸಂದಾಯವಾಗುತ್ತದೆ. ಶೇ 25ರಷ್ಟು ಹಿಂದುಳಿದ ವರ್ಗಗಳ ಕಾಮಗಾರಿಗಳಿಗೆ ಮೀಸಲಾಗುತ್ತದೆ. ಅಂದಾಜು 8 ಕಿಲೋಮೀಟರ್ ರಸ್ತೆಯ ದಾರಿ ದೀಪ ನಿರ್ವಹಣೆಗೆ ಆದಾಯಕ್ಕಿಂತ ಹೆಚ್ಚಿನ ಹಣ ಖರ್ಚಾಗುತ್ತದೆ.

ಅಭಿವೃದ್ಧಿಗೆ ತೊಡಕಾದ ಗಜನಿ:

ಗ್ರಾಮ ಪಂಚಾಯಿತಿಯ ಬಹುತೇಕ ಕೃಷಿ ಭೂಮಿ ಗಜನಿ ಹಿನ್ನೀರಿಗೆ ತಾಗಿಕೊಂಡಿದೆ. ಹಿನ್ನೀರು ವರ್ಷದಿಂದ ವರ್ಷಕ್ಕೆ ಕೃಷಿ ಭೂಮಿಗೆ ಆವರಿಸುವ ಪ್ರಮಾಣ ಜಾಸ್ತಿಯಾಗುತ್ತಿದೆ. ಇಂತಲ್ಲಿ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗದೇ ರೈತರು ಪರಿತಪಿಸುವಂತಾಗಿದೆ. ಕುಡಿಯುವ ನೀರೂ ಉಪ್ಪಾಗುತ್ತಿದ್ದು, ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ಖಾರ್ಲೆಂಡ್ ಸಮರ್ಪಕವಾಗಿ ನಿರ್ವಹಣೆಯಿಲ್ಲ. ಉಪ್ಪು ನೀರು ಬರದಂತೆ ಅಡ್ಡವಾಗಿ ಕಟ್ಟಿದ ಗೇಟು ತುಕ್ಕು ಹಿಡಿಯುತ್ತಿದ್ದು ಹೊಸದಾಗಿ ನಿರ್ಮಾಣವಾಗಬೇಕಿದೆ ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.

----

* ಜನಪರವಾಗ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ದಿನಕರ ಶೆಟ್ಟಿ, ಜಿ.ಪಂ ಸಿ.ಇ.ಒ ಪ್ರಿಯಾಂಗಾ ಮತ್ತು ಅಧಿಕಾರಿಗಳ ಸಲಹೆ, ಸಹಕಾರವೇ ಕಾರಣವಾಗಿದೆ.

- ಆನಂದ ಕವರಿ, ತೊರ್ಕೆ ಗ್ರಾ.ಪಂ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT