ಆಧುನಿಕ ಶ್ರವಣಕುಮಾರ ಈ ‘ಕೃಷ್ಣಕುಮಾರ’

7
ದ್ವಿಚಕ್ರ ವಾಹನ ಮೇಲೆ ತಾಯಿಯನ್ನು ಪ್ರವಾಸಕ್ಕೆ ಕರೆದೊಯ್ಯುವ ಪುತ್ರ

ಆಧುನಿಕ ಶ್ರವಣಕುಮಾರ ಈ ‘ಕೃಷ್ಣಕುಮಾರ’

Published:
Updated:
Deccan Herald

ಶಿರಸಿ: ಒಂದು ಹಳೆಯ ಬಜಾಜ್ ಚೇತಕ್ ಸ್ಕೂಟರ್, ಒಂದೆರಡು ಬಟ್ಟೆಯ ಗಂಟು ಇವಿಷ್ಟು ಸಾಮಗ್ರಿಗಳೊಂದಿಗೆ ತೀರ್ಥಕ್ಷೇತ್ರ ಸುತ್ತುತ್ತಿದ್ದಾರೆ ಈ ಅಮ್ಮ–ಮಗ. ಅಲ್ಲಲ್ಲಿ ತುಕ್ಕು ಹಿಡಿದಿರುವ, ಮಾಸಲು ಬಣ್ಣದ ಈ ಸ್ಕೂಟರ್ ಅಮ್ಮ–ಮಗನಿಗೆ ಓಡುವ ರಥವಿದ್ದಂತೆ. ಇವರಿಬ್ಬರೂ ರಥವೇರಿ ಹೊರಟರೆಂದರೆ ಮತ್ತೆ ನಿಲ್ಲುವುದು ದೇವಾಲಯ ಕಂಡ ಮೇಲೆಯೇ.

ಮೈಸೂರಿನ ಡಿ. ಕೃಷ್ಣಕುಮಾರ ಅವರು ಅಮ್ಮ ಚೂಡಾರತ್ನ (70) ಅವರ ಮೇಲಿನ ಮಮಕಾರದಿಂದ ತೀರ್ಥಕ್ಷೇತ್ರ ದರ್ಶನ ಮಾಡಿಸುತ್ತಿದ್ದಾರೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಕರ್ನಾಟಕ ಸೇರಿ ಸುಮಾರು 24ಸಾವಿರ ಕಿ.ಮೀ ಪ್ರವಾಸವನ್ನು ದ್ವಿಚಕ್ರ ವಾಹನದ ಮೇಲೆ ಮಾಡಿದ್ದಾರೆ.

ಜ.6ರಿಂದ ಪ್ರವಾಸ ಆರಂಭಿಸಿರುವ ಅವರು, ಶನಿವಾರ ಶಿರಸಿಯ ಮಾರಿಕಾಂಬಾ ದೇವಾಲಯ, ಸ್ವರ್ಣವಲ್ಲಿ ಮಠಕ್ಕೆ ಭೇಟಿ ನೀಡಿದರು. ‘ಕೂಡು ಕುಟುಂಬದ ವ್ಯವಸ್ಥೆಯಲ್ಲಿ ಅಡುಗೆಮನೆಗೆ ಸೀಮಿತವಾಗಿದ್ದ ಅಮ್ಮ, ತಮ್ಮೆಲ್ಲ ಆಸೆಗಳನ್ನು ಗಂಟುಕಟ್ಟಿ ಇಟ್ಟಿದ್ದರು. ವೃದ್ಧಾಪ್ಯದಲ್ಲಾದರೂ ಅವರು ಖುಷಿಯಿಂದ ಇರಬೇಕು ಎಂಬ ಕಾರಣಕ್ಕೆ ಮಗನಾಗಿ ನನ್ನ ಕರ್ತವ್ಯ ಮಾಡುತ್ತಿದ್ದೇನೆ’ ಎನ್ನುತ್ತಾರೆ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ಕೃಷ್ಣಕುಮಾರ.

‘ನಾಲ್ಕು ವರ್ಷಗಳ ಹಿಂದೆ ಯಜಮಾನರು ಮೃತರಾದರು. ಮನೆಯ ಜವಾಬ್ದಾರಿ ಹೊತ್ತ ಮಗ, ಮಾತೃಋಣ ತೀರಿಸುವ ಹಟತೊಟ್ಟು ಯಾತ್ರೆ ಮಾಡಿಸುತ್ತಿದ್ದಾನೆ. ಬೇರೆ ಬೇರೆ ರಾಜ್ಯಗಳ ದೇವಾಲಯಗಳಿಗೆ ಭೇಟಿ ನೀಡಿದೆವು. ಬಾಲ್ಯದ ಕೆಲವು ಗೆಳತಿಯರು ಭೇಟಿಯಾದರು. ಇಷ್ಟೆಲ್ಲ ಸಂಚಾರ ಮಾಡಿದರೂ, ಆರೋಗ್ಯ ಕೈಕೊಟ್ಟಿಲ್ಲ. ಅವಲಕ್ಕಿ, ಹಣ್ಣು ನಮ್ಮ ಮುಖ್ಯ ಆಹಾರ. ರಾತ್ರಿಯನ್ನು ಹೆಚ್ಚಾಗಿ ಧಾರ್ಮಿಕ ಕ್ಷೇತ್ರದಲ್ಲಿ ಕಳೆಯುತ್ತೇವೆ’ ಎಂದು ಚೂಡಾರತ್ನ ಹೇಳಿದರು.

**

ಒಮ್ಮೆ ಗಾಡಿ ಹಾಳಾಗಿದ್ದು ಬಿಟ್ಟರ ಬೇರೆನೂ ತೊಂದರೆಯಾಗಿಲ್ಲ. ಅಪ್ಪ ಕೊಡಿಸಿರುವ ಈ ವಾಹನ ನಮ್ಮ ಪಾಲಿಗೆ ಅವರ ಸ್ಥಾನವನ್ನು ತುಂಬಿದೆ
–ಡಿ.ಕೃಷ್ಣಕುಮಾರ, ಯಾತ್ರಾರ್ಥಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !