ಬುಧವಾರ, ನವೆಂಬರ್ 20, 2019
24 °C
ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಕುಸಿತ

ಉತ್ತರ ಕನ್ನಡ ಜಿಲ್ಲೆ | ಪ್ರವಾಸೋದ್ಯಮ ಮೇಲೆ ಪ್ರವಾಹದ ಕರಿನೆರಳು

Published:
Updated:
Prajavani

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ತಿಂಗಳು ಸಂಭವಿಸಿದ ಪ್ರವಾಹವು ಪ್ರವಾಸೋದ್ಯಮದ ಮೇಲೆ ಕರಿನೆರಳು ಬೀರಿದೆ. ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದೆ.

ಜೂನ್ ಮತ್ತು ಜುಲೈ ತಿಂಗಳುಗಳಿಗೆ ಹೋಲಿಸಿದಲ್ಲಿ ಆಗಸ್ಟ್‌ನಲ್ಲಿ 50 ಸಾವಿರ ಪ್ರವಾಸಿಗರ ಸಂಖ್ಯೆ ಕಡಿಮೆಯಿದೆ. ಕಡಲ ತೀರದ ತಾಣಗಳಿಗೆ ಬರುವವರ ಸಂಖ್ಯೆಯಲ್ಲಿ ಹೆಚ್ಚು ವ್ಯತ್ಯಾಸವಾಗದಿದ್ದರೂ, ಮಲೆನಾಡಿನ ಭಾಗಕ್ಕೆ ಬರಲು ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ.

ದಾಂಡೇಲಿ ಸಮೀಪ ಗಣೇಶಗುಡಿಯಲ್ಲಿ ವಾಟರ್‌ ಗೇಮ್ಸ್‌ ಮಾಲೀಕರು, ಕೆಲಸಗಾರರು ಕೆಲಸವಿಲ್ಲದೇ ಕುಳಿತಿದ್ದಾರೆ. ‘ಮಳೆಗಾಲದಲ್ಲಿ ಪ್ರವಾಸಿಗರ ಸಂಖ್ಯೆ ಸಹಜವಾಗಿ ಕಡಿಮೆಯಿರುತ್ತದೆ. ಆದರೂ, ಏನಿಲ್ಲವೆಂದರೂ ತಿಂಗಳಿಗೆ 20ರಿಂದ 40ಸಾವಿರ ಜನರು ಭೇಟಿ ನೀಡುತ್ತಾರೆ. ಈ ಬಾರಿ ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆಯ ನಂತರ 200 ಜನರು ಸಹ ಬರಲಿಲ್ಲ. ನೂರಾರು ಜನರು ಬುಕಿಂಗ್ ರದ್ದುಗೊಳಿಸಿದರೆ, ಹೊಸದಾಗಿ ಬರುವವರು ರಸ್ತೆ, ಸೇತುವೆ ಸರಿಯಿದೆಯಾ, ಮಳೆ ಕಡಿಮೆಯಾಗಿದೆಯಾ ಎಂದು ಪ್ರಶ್ನಿಸುತ್ತಾರೆ’ ಎನ್ನುತ್ತಾರೆ ಮಾನಸಾ ಎಡ್ವೆಂಚರ್ಸ್‌ ಮಾಲೀಕ ಜಿ.ಇ.ಸೋಮಶೇಖರ.

‘9.5 ಕಿ.ಮೀ ವ್ಯಾಪ್ತಿಯಲ್ಲಿ ರಾಫ್ಟಿಂಗ್‌ ಬಂದಾಗಿರುತ್ತದೆ. ಆದರೆ, ಕಯಾಕಿಂಗ್, ಬೋಟಿಂಗ್, ಜಾಕೂಜಿ, ರಿವರ್ ಕ್ರಾಸಿಂಗ್ ಮೊದಲಾದ ನೀರಾಟಗಳು ನಿರಂತರವಾಗಿರುತ್ತವೆ. ಎಂಟು ಕಡೆಗಳಲ್ಲಿ ಇಂತಹ ಕ್ರೀಡೆಗಳನ್ನು ನಿರ್ವಹಿಸುವ ತಂಡಗಳಿವೆ. ವಾರದ ಕೊನೆಯಲ್ಲಿ ಬಿಡುವಿಲ್ಲದ ಕೆಲಸದಲ್ಲಿರುತ್ತಿದ್ದ ನಾವು ಈಗ ನಿರುದ್ಯೋಗಿಗಳಾಗಿದ್ದೇವೆ. ಇದನ್ನೇ ಅವಲಂಬಿಸಿರುವ 300ಕ್ಕೂ ಹೆಚ್ಚು ಕುಟುಂಬಗಳ ಜೀವನ ನಿರ್ವಹಣೆ ಕಷ್ಟವಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

‘ದಾಂಡೇಲಿ, ಜೊಯಿಡಾ ಸುತ್ತಲಿನ ಪ್ರವಾಸೋದ್ಯಮ ಚಟುವಟಿಕೆಗಳು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿವೆ. ಮಲೆನಾಡಿನ ಮಳೆಗಾಲ ನೋಡಲೆಂದೇ ಬರುವ ಪ್ರವಾಸಿಗರಿದ್ದಾರೆ. ಆದರೆ, ಈ ಬಾರಿ ಹೊರ ರಾಜ್ಯಗಳ ಪ್ರವಾಸಿಗರು, ಅದರಲ್ಲೂ ವಿಶೇಷವಾಗಿ ಕುಟುಂಬದ ಜೊತೆ ಬರುವವರು ಹತ್ತಾರು ಸಲ ಕರೆ ಮಾಡಿ ಮಳೆ ಇದೆಯಾ ಎಂದು ವಿಚಾರಿಸುತ್ತಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಬಂದಿದ್ದ ಪ್ರವಾಸಿಗರಿಗೆ ಹೋಲಿಸಿದರೆ ಈ ವರ್ಷ ಶೇ 2ರಷ್ಟು ಪ್ರವಾಸಿಗರು ಈ ವರ್ಷ ಬಂದಿಲ್ಲ’ ಎಂದು ಕಾಡುಮನೆ ಹೋಂ ಸ್ಟೇ ಮಾಲೀಕ ನರಸಿಂಹ ಛಾಪಖಂಡ ಹೇಳಿದರು.

‘ಪ್ರವಾಹದ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆ ಆಗಿದ್ದರಿಂದ ಮತ್ತು ಕಡಲ ತಟದಲ್ಲಿ ಕಾರ್ಯನಿರ್ವಹಿಸುವ 32 ಕೋಸ್ಟ್ ಗಾರ್ಡ್‌ಗಳನ್ನು ರಕ್ಷಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿತ್ತು. ಕೆಲದಿನಗಳ ಮಟ್ಟಿಗೆ ಪ್ರವಾಸಿಗರು ಬರದಂತೆ ನಾವು ವಿನಂತಿಸಿಕೊಂಡಿದ್ದೆವು. ಈಗ ಮತ್ತೆ ಪ್ರವಾಸಿಗರು ಬರಲಾರಂಭಿಸಿದ್ದಾರೆ’ ಎಂದು ಪ್ರವಾಸೋದ್ಯಮ ಇಲಾಖೆ ಪ್ರಭಾರಿ ಅಧಿಕಾರಿ ಎಸ್. ಪುರುಷೋತ್ತಮ ತಿಳಿಸಿದರು.

 

ಪ್ರತಿಕ್ರಿಯಿಸಿ (+)