‘ಸಿಆರ್‌ಝೆಡ್ ವಿನಾಯಿತಿ: ಮತ್ತಷ್ಟು ಅವಕಾಶ’

ಸೋಮವಾರ, ಜೂನ್ 17, 2019
28 °C
ಕಾಟೇಜ್‍, ಬೋಟ್ ಹೌಸ್‍, ಮೈಕ್ರೋಲೈಟ್, ಹ್ಯಾಂಡ್‍ಗ್ಲೈಡಿಂಗ್‍ಗೂ ಚಿಂತನೆ

‘ಸಿಆರ್‌ಝೆಡ್ ವಿನಾಯಿತಿ: ಮತ್ತಷ್ಟು ಅವಕಾಶ’

Published:
Updated:
Prajavani

ಕಾರವಾರ: ಕರಾವಳಿ ನಿಯಂತ್ರಣ ವಲಯದ (ಸಿಆರ್‌ಝೆಡ್) ಹೊಸ ನಿಯಮಾವಳಿಗಳಲ್ಲಿ ಕರ್ನಾಟಕಕ್ಕೂ ಗೋವಾ ಮಾದರಿಯಲ್ಲಿ ಸ್ವಲ್ಪಮಟ್ಟಿನ ವಿನಾಯಿತಿಗಳು ಸಿಗಲಿವೆ. ಇದರಿಂದ ಜಿಲ್ಲೆಯ ಕಡಲತೀರಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಆಯಾಮ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ಪ್ರವಾಸಿ ಸ್ಥಳಗಳ ಅಭಿವೃದ್ಧಿ ಹಾಗೂ ಸಂರಕ್ಷಣಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

‘ಕಡಲತೀರದಲ್ಲಿ ಪ್ರವಾಸೋದ್ಯಮಕ್ಕೆ ಅಡ್ಡಿಯಾಗಿದ್ದ ಸಿಆರ್‌ಝೆಡ್ ತನ್ನ ಹೊಸ ನಿಯಮಾವಳಿಗಳಲ್ಲಿ ಸ್ವಲ್ಪಮಟ್ಟಿನ ವಿನಾಯಿತು ನೀಡಿದೆ. ಹಾಗಾಗಿ ಗೋವಾ ಮಾದರಿಯಲ್ಲಿ ಕಾಟೇಜ್‍ಗಳನ್ನು ನಿರ್ಮಿಸಲು ಹಾಗೂ ಇನ್ನಿತರ ಪ್ರವಾಸೋದ್ಯಮ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗಲಿದೆ’ ಎಂದರು.

ಈಗಾಗಲೇ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕಿದೆ. ಜಿಲ್ಲೆಯ ವಿವಿಧ ಉಪ ವಿಭಾಗಗಳಿಂದ ಸಹಾಯಕ ಆಯುಕ್ತರು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಹೊಸ ಪ್ರಸ್ತಾವಗಳನ್ನು ನೀಡುವಂತೆ ಅವರು ಸೂಚಿಸಿದರು.

ಮುರ್ಡೇಶ್ವರದ ನೇತ್ರಾಣಿಯಲ್ಲಿ ಸಮೀಪದ ಮತ್ತೊಂದು ಭಾಗದಲ್ಲೂ ಸ್ಕೂಬಾ ಡೈವಿಂಗ್ ನಡೆಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಸಂಬಂಧಿಸಿದ ಸಂಸ್ಥೆಗಳಿಗೆ ಸೂಚಿಸಿದರು. ಅಲ್ಲದೇ ಕಾರವಾರದ ಲೈಟ್‍ಹೌಸ್‍ನಲ್ಲಿ ಸ್ಕೂಬಾ ಡೈವಿಂಗ್ ಅನುಮತಿ ಪಡೆದ ಸಂಸ್ಥೆ ಇಲ್ಲಿಯೂ ನಿರಂತರ ಚಟುವಟಿಕೆ ನಡೆಸಬೇಕು ಎಂದು ಸೂಚಿಸಿದರು.

ನೇತ್ರಾಣಿ ಗುಡ್ಡದಲ್ಲಿ ಮುನ್ಸೂಚನೆ ಇಲ್ಲದೆ ನೌಕಾಪಡೆಯಿಂದ ತರಬೇತಿ ಚಟುವಟಿಕೆಗಳು ನಡೆಯುತ್ತಿವೆ. ಇದರಿಂದ ಪ್ರವಾಸಿಗರಿಗೆ ಆತಂಕ ಉಂಟಾಗುತ್ತಿದೆ ಎಂಬ ವಿಷಯ ಪ್ರಸ್ತಾಪವಾಯಿತು. ಈ ಬಗ್ಗೆ ನೌಕಾಪಡೆಯ ಅಧಿಕಾರಿಗಳ ಜತೆ ಚರ್ಚಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಅಘನಾಶಿನಿ ನದಿಯಲ್ಲಿ ಬೋಟ್ ಹೌಸ್‍ ಸಂಚಾರಕ್ಕೆ ಕಾರ್ಯಯೋಜನೆ ರೂಪಿಸಬೇಕು. ಈ ಚಟುವಟಿಕೆಗೆ ಆಸಕ್ತ ಸಂಸ್ಥೆಗಳಿಂದ ಟೆಂಡರ್ ಆಹ್ವಾನಿಸುವಂತೆ ಸೂಚಿಸಿದರು.

ಪ್ಯಾರಾ ಮೋಟಾರ್ ಗ್ಲೈಡಿಂಗ್ ಮಾದರಿಯಲ್ಲಿಯೇ ಮೈಕ್ರೋಲೈಟ್ಸ್, ಹ್ಯಾಂಡ್‍ ಗ್ಲೈಡಿಂಗ್‍ಗೆ ವಿದೇಶಿ ಪ್ರವಾಸಿಗರು ಹಾಗೂ ಸಾಹಸಿಗರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಕಾರವಾರದಲ್ಲಿ ಈ ಚಟುವಟಿಕೆಗೆ ಉತ್ತಮ ಅವಕಾಶವಿದೆ. ಈ ಕುರಿತು ಪ್ರಸ್ತುತ ಕಾರವಾರದಲ್ಲಿ ಪ್ಯಾರಾ ಮೋಟಾರ್ ಗ್ಲೈಡಿಂಗ್ ಮಾಡುತ್ತಿರುವ ಡಾ.ವೈದ್ಯ ಅವರಿಂದಲೇ ಪ್ರಸ್ತಾವ ಪಡೆಯುವಂತೆ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮೊಹಮ್ಮದ್ ರೋಶನ್, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ್ ಸಿಂಗ್ರೇರ್, ಉಪ ವಿಭಾಗಾಧಿಕಾರಿಗಳಾದ ಸಾಜಿದ್ ಮುಲ್ಲಾ, ಪ್ರೀತಿ ಗೆಹ್ಲೋಟ್, ಸಿಆರ್‌ಝೆಡ್ ಅಧಿಕಾರಿ ಪ್ರಸನ್ನ ಪಟಗಾರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಹಾಗೂ ವಿವಿಧ ಅಧಿಕಾರಿಗಳಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !