ಮೊಸಳೆ ಹಿಂಡಿಗೆ ಪ್ರವಾಸಿಗರ ಕಲ್ಲೇಟು

7
ದಾಂಡೇಲಿಯ ಕಾಳಿ ನದಿಯಲ್ಲಿರುವ ದಿಬ್ಬ: ವಿಕೃತಿಗೆ ಕಡಿವಾಣ ಹಾಕಲು ವನ್ಯಜೀವಿ ಪ್ರಿಯರ ಆಗ್ರಹ

ಮೊಸಳೆ ಹಿಂಡಿಗೆ ಪ್ರವಾಸಿಗರ ಕಲ್ಲೇಟು

Published:
Updated:
Prajavani

ಕಾರವಾರ: ದಾಂಡೇಲಿಯ ದಾಂಡೇಲಪ್ಪ ದೇವಸ್ಥಾನದ ಸಮೀಪ ಕಾಳಿ ನದಿಯು ಹತ್ತಾರು ಮೊಸಳೆಗಳ ಆವಾಸ ಸ್ಥಾನ. ಅವುಗಳನ್ನು ನೋಡಲು ಬರುವ ಕೆಲವು ಪ್ರವಾಸಿಗರು ಅವುಗಳತ್ತ ಕಲ್ಲೆಸೆದು ಬೆದರಿಸಿ ವಿಕೃತಿ ಮೆರೆಯುತ್ತಿದ್ದಾರೆ. ಇದು ವನ್ಯಜೀವಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

ನದಿಯ ಮಧ್ಯೆ ಇರುವ ದಿಬ್ಬದ ಮೇಲೆ ಮೊಸಳೆಗಳು ಕದಲದೇ ಮಲಗಿರುತ್ತವೆ. ನದಿಯ ತಿಳಿ ನೀರಿನಲ್ಲಿ ಸಂಚರಿಸುವ ಮೀನು ಬೇಟೆಯಾಡಲು ಹೊಂಚು ಹಾಕಿರುತ್ತವೆ. ಮತ್ತೊಂದಷ್ಟು ಎಳೆ ಬಿಸಿಲಿಗೆ ಮೈಯೊಡ್ಡಿರುತ್ತವೆ. ಅವುಗಳನ್ನು ಹತ್ತಿರದಿಂದ ಹಾಗೂ ನದಿಗೆ ಧುಮುಕುವುದನ್ನು ನೋಡುವ ಸಲುವಾಗಿ ಕಲ್ಲೆಸೆಯುವ ದುಷ್ಕೃತ್ಯ ಮಾಡುತ್ತಿದ್ದಾರೆ.

ದಾಂಡೇಲಪ್ಪ ದೇವಸ್ಥಾನದ ಸಮೀಪದಲ್ಲಿರುವ ಖಾಸಗಿ ಜಮೀನಿನಲ್ಲಿ ನಿಂತರೆ ಮೊಸಳೆಗಳು ಕಾಣಿಸುತ್ತವೆ. ಆದರೆ, ಅಲ್ಲಿರುವ ಬೇಲಿಯಿಂದ ಆಚೆ ಗಿಡಗಳು ಬೆಳೆದಿದ್ದು, ದಿಬ್ಬಕ್ಕೆ ಅಡ್ಡವಾಗುತ್ತವೆ. ಹೀಗಾಗಿ ಕೆಲವೊಮ್ಮೆ ಪ್ರವಾಸಿಗರಿಗೆ ಮೊಸಳೆಗಳು ಸರಿಯಾಗಿ ಕಾಣಿಸುವುದಿಲ್ಲ. ಇದರಿಂದ ನಿರಾಸೆಗೊಳ್ಳುವ ಕೆಲವರು ಕಲ್ಲು, ಕೋಲು ಎಸೆಯುತ್ತಾರೆ.

‘ಕಲ್ಲೆಸೆಯುವುದು ಸರಿಯಲ್ಲ’: ‘ವನ್ಯಜೀವಿಗಳ ಸಂರಕ್ಷಣೆ ನಮ್ಮ ಕರ್ತವ್ಯವಾಗಬೇಕು. ಆದರೆ, ಅವುಗಳನ್ನು ನೋಡಬೇಕು ಎಂಬ ಉತ್ಕಟ ಬಯಕೆಯಿಂದ ಅವುಗಳನ್ನು ಭಯಗೊಳಿಸುವುದು, ಕಲ್ಲೆಸೆದು ಗಾಯಗೊಳಿಸುವುದು ಸರಿಯಲ್ಲ. ಗಾಯಗೊಂಡ ಮೊಸಳೆಗಳು ಬೇಟೆಯಾಡುವ ಸಾಮರ್ಥ್ಯ ಕಳೆದುಕೊಂಡು ಸೊರಗಿ ಸಾಯುವ ಸಾಧ್ಯತೆಯಿರುತ್ತದೆ. ಕೆಲವೊಮ್ಮೆ ಅವು ತಮ್ಮ ಸುರಕ್ಷತೆಯ ದೃಷ್ಟಿಯಿಂದ ಸ್ಥಳ ಬದಲಾಯಿಸಬಹುದು. ಅವು ಹೋದ ಜಾಗದಲ್ಲಿ ವಿವಿಧ ರೀತಿಯ ಸಮಸ್ಯೆಗಳು ಶುರುವಾಗಬಹುದು’ ಎನ್ನುವುದು ಮೈಸೂರಿನ ಪ್ರವಾಸಿ, ವನ್ಯಜೀವಿ ಪ್ರಿಯ ರಾಮಚಂದ್ರ ಅವರ ಅಭಿಪ್ರಾಯ. 

‘ವನ್ಯಜೀವಿಗಳು ಮತ್ತು ಮಾನವ ಸಂಘರ್ಷ ಶುರುವಾಗುವುದೇ ಇಂತಹ ಕ್ರಿಯೆಗಳಿಂದ. ನಾವು ಅವುಗಳ ಆವಾಸ ಸ್ಥಾನದ ಮೇಲೆ ದಾಳಿ ಆರಂಭಿಸಿದ ದಿನದಿಂದ ಅವು ಕೂಡ ನಮ್ಮ ಮೇಲೆ ಪ್ರತಿದಾಳಿ ಆರಂಭಿಸಿದವು. ಯಾವುದೇ ವನ್ಯಜೀವಿಗಳನ್ನು ಅವುಗಳಿಗೆ ತೊಂದರೆಯಾಗದಂತೆ ಕಣ್ತುಂಬಿಕೊಳ್ಳಬೇಕು. ಈ ಬಗ್ಗೆ ಪ್ರವಾಸಿಗರಲ್ಲಿ ಅರಿವು, ಜಾಗೃತಿ ಮೂಡಬೇಕು’ ಎನ್ನುವುದು ಅವರ ಸಲಹೆಯಾಗಿದೆ.

‘ಎಚ್ಚರಿಕೆ ನೀಡಲಾಗುವುದು’: ವನ್ಯಜೀವಿ ಕಾಯ್ದೆಯ ಪ್ರಕಾರ ಪ್ರಾಣಿಗಳಿಗೆ ಹಿಂಸೆ ಕೊಡುವುದು ನಿಷಿದ್ಧ. ಅದರಲ್ಲೂ ಈ ರೀತಿ ಕಲ್ಲೆಸೆಯುವುದು ಖಂಡಿತಾ ಸರಿಯಲ್ಲ. ಅವುಗಳಿಗೆ ತೊಂದರೆ ಕೊಡುವವರಿಗೆ ಎಚ್ಚರಿಕೆ ನೀಡಲಾಗುವುದು  ಎಂದು ದಾಂಡೇಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಿ.ಕೆ.ಗಾರ್ವಾಡ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !