ಅಂತರ್ಜಲ ಹೆಚ್ಚಿಸಲು ಗ್ರಾಮಗಳಲ್ಲಿ ಅಭಿಯಾನ

7
ಯಲ್ಲಾಪುರ ತಾಲ್ಲೂಕು ಪಂಚಾಯ್ತಿಯಿಂದ ಪರಿಸರಕ್ಕೆ ಪೂರಕ ಕಾರ್ಯ; ಸರ್ಕಾರದಿಂದ ಸಹಾಯಧನ

ಅಂತರ್ಜಲ ಹೆಚ್ಚಿಸಲು ಗ್ರಾಮಗಳಲ್ಲಿ ಅಭಿಯಾನ

Published:
Updated:
Deccan Herald

ಯಲ್ಲಾಪುರ:  ಮೂರು– ನಾಲ್ಕು ವರ್ಷಗಳಿಂದ ಮಳೆಯ ಪ್ರಮಾಣ ಕಮ್ಮಿಯಾಗಿ ಅಂತರ್ಜಲಮಟ್ಟ ಪಾತಾಳಕ್ಕೆ ತಲುಪಿತ್ತು. ಮಳೆಗಾಲದಲ್ಲಿ ಕಟ್ಟಡಗಳ ಚಾವಣಿಗಳ ಮೇಲೆ ಬಿದ್ದ ನೀರು ಹಾಗೆಯೇ ಹರಿದು ಹೋಗಿ ಪೋಲಾಗುತ್ತಿರುವುದನ್ನು ತಪ್ಪಿಸಿ, ಪುನರ್ ಬಳಕೆ ಮಾಡಲು ಇಲ್ಲಿನ ತಾಲ್ಲೂಕು ಪಂಚಾಯ್ತಿ ಎಲ್ಲ ಗ್ರಾಮ ಪಂಚಾಯ್ತಿಗಳಲ್ಲೂ ‘ಮಳೆ ನೀರು ಸಂಗ್ರಹ’ ಅಭಿಯಾನ ಆರಂಭಿಸಿದೆ.

ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ನೀರಿನ ಬಳಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ, ಇತ್ತೀಚೆಗಿನ ವರ್ಷಗಳಲ್ಲಿ ಮಳೆಯ ಪ್ರಮಾಣ ಕಡಿಯಾಗಿ, ಕೊಳವೆಬಾವಿಗಳ ಸಂಖ್ಯೆ ಹೆಚ್ಚಾಗಿವೆ. ಇದರಿಂದ ಅಂತರ್ಜಲದ ಪ್ರಮಾಣ ತಗ್ಗಿದೆ. ಪಟ್ಟಣ ಪ್ರದೇಶದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನೀರಿನ ಸಮರ್ಪಕ ಪೂರೈಕೆಯೇ ಸವಾಲಾಗಿದೆ. ಈ ಸಮಸ್ಯೆಯನ್ನು ನಿಭಾಯಿಸುವ ಉದ್ದೇಶದೊಂದಿಗೆ ತಾಲ್ಲೂಕು ಪಂಚಾಯ್ತಿಯು ಪ್ರತಿ ಗ್ರಾಮದಲ್ಲಿ ಜಾಗೃತಿ ಮೂಡಿಸುತ್ತಿದೆ.

ಮನೆಯ ತಾರಸಿಯಿಂದ ಡ್ರಮ್‌ಗೆ ಅಥವಾ ಸಿಮೆಂಟ್ ತೊಟ್ಟಿಗೆ ಪೈಪ್ ಜೋಡಿಸಬೇಕು. ನೀರಿನೊಂದಿಗೆ ಬರುವ ಕಸ ಕಡ್ಡಿ ಬೇರ್ಪಡಿಸಲು ಜಾಳಿಗೆ ಅಳವಡಿಸಬೇಕು. ಐದು ಅಡಿ ಅಗಲ ಮತ್ತು ಆಳದ ಹೊಂಡ ತೆಗೆದು ಅದರೊಳಗೆ ಐದು ರಿಂಗ್ ಅಳವಡಿಸಿ ಜಲ್ಲಿಕಲ್ಲು ಮತ್ತು ಮರಳನ್ನು ತುಂಬಬೇಕು. ಇದರಿಂದ ಮಳೆಯ ನೀರು ಸೋಸಿ ಭೂಮಿಯೊಳಗೆ ಇಂಗುತ್ತದೆ ಎನ್ನುತ್ತಾರೆ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ಎಂಜಿನಿಯರ್ ಕಾರ್ತಿಕ್ ಹಬ್ಬು.

ಸಹಾಯಧನ: ಮಳೆ ನೀರು ಸಂಗ್ರಹವನ್ನು ಉದ್ಯೋಗ ಖಾತ್ರಿ ಯೋಜನೆಯಡಿಯೂ ಮಾಡಬಹುದು. ಫಲಾನುಭವಿಗಳಿಗೆ ಒಟ್ಟೂ ₹ 20 ಸಾವಿರ ಸಹಾಯಧನ ನೀಡಲಾಗುತ್ತದೆ. ಖಾಸಗಿ ಹಾಗೂ ಸಾರ್ವಜನಿಕ ಕಟ್ಟಡಗಳಲ್ಲಿ ಇದನ್ನು ಅಳವಡಿಸಬಹುದು. ಅದಕ್ಕೆ ಬೇಕಾಗುವ ವೆಚ್ಚಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಿ ಹಣ ನೀಡಲಾಗುತ್ತದೆ. ಜಾಗದ ಅಳತೆಯನ್ನು ನೋಡಿ ಹಣ ಮಂಜೂರು ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಡ್ಡಾಯಗೊಳಿಸಲು ಮನವಿ: ‘ಸರ್ಕಾರದಿಂದ ವಸತಿ ಯೋಜನೆಯಲ್ಲಿ ನೀಡುವ ಆಶ್ರಯ ಮನೆಗಳ ಅನುದಾನವನ್ನು ಹೆಚ್ಚಿಸಿ, ಕಡ್ಡಾಯವಾಗಿ ಮಳೆ ನೀರು ಸಂಗ್ರಹ ಮಾಡುವಂತೆ ಆದೇಶಿಸಬೇಕು ಎಂದು ವಸತಿ ಸಚಿವ ಯು.ಟಿ.ಖಾದರ್ ಅವರಿಗೂ ಮನವಿ ಸಲ್ಲಿಸಿದ್ದೇನೆ. ಪ್ರಾರಂಭಿಕವಾಗಿ ಉಮ್ಮಚಗಿ, ಕಂಪ್ಲಿ, ಹಾಸಣಗಿ ಪಂಚಾಯ್ತಿಗಳಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ’ ಎನ್ನುತ್ತಾರೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಭವ್ಯಾ ಶೆಟ್ಟಿ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !