ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾ.ಪಂ. ಸಭೆ ಬಹಿಷ್ಕರಿಸಿದ ಸದಸ್ಯರು

ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಆಕ್ರೋಶ, ಪಿಡಿಒ ವರ್ಗಾವಣೆಗೆ ಖಂಡನೆ
Last Updated 5 ಜನವರಿ 2019, 13:27 IST
ಅಕ್ಷರ ಗಾತ್ರ

ಶಿರಸಿ: ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ವರ್ಗಾವಣೆ ಹಾಗೂ ಸದಸ್ಯರ ಗಮನಕ್ಕೆ ತರದೇ ಕ್ರಿಯಾ ಯೋಜನೆ ತಿದ್ದುಪಡಿ ಮಾಡಿರುವ ಕ್ರಮವನ್ನು ಖಂಡಿಸಿ, ಅಧ್ಯಕ್ಷ– ಉಪಾಧ್ಯಕ್ಷರ ಸಹಿತ ಎಲ್ಲ ಸದಸ್ಯರು, ತಾಲ್ಲೂಕು ಪಂಚಾಯ್ತಿ ಕೆಡಿಪಿ ಸಭೆಯನ್ನು ಬಹಿಷ್ಕರಿಸಿದರು.

ಶನಿವಾರ ಇಲ್ಲಿ ಕರೆದಿದ್ದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ನರಸಿಂಹ ಹೆಗಡೆ ಅವರು, ‘ಪಿಡಿಒಗಳನ್ನು ಮೂಲ ಸ್ಥಾನಕ್ಕೆ ವರ್ಗಾವಣೆ ಮಾಡುವಂತೆ ಆದೇಶವಾಗಿದೆ. ಸೋಂದಾ ಗ್ರಾಮ ಪಂಚಾಯ್ತಿಯಲ್ಲಿ ಕಂಪ್ಯೂಟರ್ ಆಪರೇಟರ್ ಹೊರತುಪಡಿಸಿ, ಪಿಡಿಒ, ಕಾರ್ಯದರ್ಶಿ, ಎಸ್‌ಡಿಎ ಹುದ್ದೆಗಳು ಖಾಲಿ ಇವೆ. ಪಿಡಿಒ ಇಲ್ಲದೇ 10 ದಿನಗಳಾಗಿದ್ದು, ಜನರು ಜನಪ್ರತಿನಿಧಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಸ್ಥಳೀಯ ಸಮಸ್ಯೆ ಗಮನಿಸದೇ, ಹಿರಿಯ ಅಧಿಕಾರಿಗಳ ಸೂಚನೆಯಂತೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ವರ್ತಿಸುತ್ತಿರುವುದು ಖಂಡನೀಯ. ತಕ್ಷಣ ಪಿಡಿಒ ಸ್ಥಾನ ತುಂಬದಿದ್ದರೆ ಗ್ರಾಮ ಪಂಚಾಯ್ತಿಗೆ ಬೀಗ ಹಾಕಿ ತಾಲ್ಲೂಕು ಪಂಚಾಯ್ತಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

‘ಕ್ರಿಯಾ ಯೋಜನೆ ಮಾಡುವವರು ಸದಸ್ಯರಾಗಿದ್ದರು, ಅದನ್ನು ತಾಲ್ಲೂಕು ಪಂಚಾಯ್ತಿಯಲ್ಲಿ ಬದಲಾಯಿಸಲಾಗುತ್ತಿದೆ. ಹೀಗಾದರೆ ಸದಸ್ಯರ ನಿರ್ಣಯಕ್ಕೆ ಬೆಲೆ ಎಲ್ಲಿದೆ’ ಎಂದು ಸದಸ್ಯೆ ರತ್ನಾ ಶೆಟ್ಟಿ ಪ್ರಶ್ನಿಸಿದರು.

ಕಾರ್ಯನಿರ್ವಹಣಾಧಿಕಾರಿ ಎಫ್.ಜಿ.ಚಿನ್ನಣ್ಣನವರ್ ಅವರು, ವರ್ಗಾವಣೆ ಕ್ರಮವನ್ನು ಸಮರ್ಥಿಸಿಕೊಂಡು, ಸದ್ಯದಲ್ಲಿ ಹುಲೇಕಲ್ ಪಂಚಾಯ್ತಿ ಪಿಡಿಒ ಸ್ಥಾನ ತುಂಬಲಾಗುವುದು, ಅವರಿಗೆ ಸೋಂದಾ ಪಂಚಾಯ್ತಿಯ ಹೆಚ್ಚುವರಿ ಹೊಣೆ ನೀಡಲಾಗುವುದು ಎಂದರು.

ಪಂಚಾಯ್ತಿ ಪಿಡಿಒ, ಅಧ್ಯಕ್ಷರ ಸಭೆಗೆ ತಾಲ್ಲೂಕು ಪಂಚಾಯ್ತಿಯ ಎಲ್ಲ ಸದಸ್ಯರನ್ನು ಕರೆಯುವಂತೆ ತಿಳಿಸಿದ್ದರೂ, ಕಾರ್ಯನಿರ್ವಹಣಾಧಿಕಾರಿ ಸೂಚನೆ ಮೇರೆಗೆ ಅವರನ್ನು ಆಹ್ವಾನಿಸಿಲ್ಲ ಎಂದು ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ದೂರಿದರು. ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ, ಸದಸ್ಯರಾದ ನರಸಿಂಹ ಹೆಗಡೆ, ನಾಗರಾಜ ಶೆಟ್ಟಿ, ವಿನಾಯಕ ಭಟ್ಟ, ರತ್ನಾ ಶೆಟ್ಟಿ, ಪ್ರೇಮಾ ಬೇಡರ್ ಸಭೆ ಬಹಿಷ್ಕರಿಸಿ ಹೊರನಡೆದರು. ನಂತರ ಅಧ್ಯಕ್ಷ– ಉಪಾಧ್ಯಕ್ಷರು ಸಹ ಸಭೆ ಮೊಟಕುಗೊಳಿಸಿ, ಹೊರ ಹೋದರು.

ಸಭೆಯ ಆರಂಭದಲ್ಲಿ ಶ್ರೀಲತಾ ಕಾಳೇರಮನೆ ಮಾತನಾಡಿ, ‘ಜಿಲ್ಲೆಯಲ್ಲಿ ಮರಳು ಸಮಸ್ಯೆ ಹೆಚ್ಚುತ್ತಿದೆ. ಆಶ್ರಯ ಮನೆ ನಿರ್ಮಾಣ ಮತ್ತೆ ಸ್ಥಗಿತಗೊಂಡಿದೆ. ಮರಳು ಪೂರೈಕೆ ಮಾಡುವಂತೆ ಸರ್ಕಾರ, ಜಿಲ್ಲಾಡಳಿತಕ್ಕೆ ಪತ್ರ ಬರೆಯುವಂತೆ ನಿರ್ಣಯ ಸ್ವೀಕರಿಸಲಾಗುವುದು’ ಎಂದರು. ಉಪಾಧ್ಯಕ್ಷ ಚಂದ್ರು ದೇವಾಡಿಗ ಮಾತನಾಡಿ, ‘ಮರಳು ದಾಸ್ತಾನು ಕೇಂದ್ರದಲ್ಲಿ ಮರಳು ಖಾಲಿಯಾಗಿದೆ. ಸರ್ಕಾರ ಜನವಿರೋಧಿ ನಡೆ ಪ್ರದರ್ಶಿಸುತ್ತಿದೆ. ಆರ್ಥಿಕ ವರ್ಷದ ಅಂತ್ಯದಲ್ಲಿದ್ದರೂ ಪಿಡಿಒಗಳನ್ನು ಮೂಲ ಸ್ಥಾನಕ್ಕೆ ಕಳುಹಿಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT