ಕಾರವಾರ: ನಿರ್ವಹಣೆ ಮಾಡಿದರೂ ಕೈ ಕೊಡುವ ವಿದ್ಯುತ್

7
ತಾ.ಪಂ. ಸಾಮಾನ್ಯ ಸಭೆಯಲ್ಲಿ ಹೆಸ್ಕಾಂ ವಿರುದ್ಧ ಸದಸ್ಯರ ಅಸಮಾಧಾನ

ಕಾರವಾರ: ನಿರ್ವಹಣೆ ಮಾಡಿದರೂ ಕೈ ಕೊಡುವ ವಿದ್ಯುತ್

Published:
Updated:
Deccan Herald

ಕಾರವಾರ: ತಾಲ್ಲೂಕಿನಲ್ಲಿ ಪದೇಪದೇ ಕೈಕೊಡುತ್ತಿರುವ ವಿದ್ಯುತ್, ತಾಲ್ಲೂಕು ಪಂಚಾಯ್ತಿ ಸದಸ್ಯರ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಹೆಸ್ಕಾಂ ಅಧಿಕಾರಿಗಳನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು. 

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಮಾರುತಿ ನಾಯ್ಕ, ‘ಶಿರವಾಡ, ಕಡವಾಡ ದಿನಕ್ಕೆ 15–20 ಬಾರಿ ವಿದ್ಯುತ್ ಪೂರೈಕೆ ನಿಲ್ಲಿಸಲಾಗುತ್ತಿದೆ. ಹೆಸ್ಕಾಂ ಸಿಬ್ಬಂದಿಯನ್ನು ಕೇಳಿದರೆ ಅಲ್ಲಲ್ಲಿ ತಂತಿ ಕಡಿದು ಬಿದ್ದಿದೆ ಎಂಬ ಉತ್ತರ ಕೊಡುತ್ತಾರೆ. ಅದು ಹೇಗೆ ಸಾಧ್ಯ? ವಾರದ ನಿರ್ವಹಣೆ ಎಂದು ಬುಧವಾರವಂತೂ ಇಡೀ ದಿನ ವಿದ್ಯುತ್ ಇರುವುದಿಲ್ಲ. ಉಳಿದ ದಿನವೂ ಯಾಕೆ ಸಮಸ್ಯೆಯಾಗುತ್ತಿದೆ’ ಎಂದು ಪ್ರಶ್ನಿಸಿದರು. ಇತರ ಸದಸ್ಯರೂ ಅವರಿಗೆ ದನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಜಿ.ಬಿ.ಇಡೂರ್ಕರ್, ‘ಕೆಲವೆಡೆ ದುರ್ಬಲವಾಗಿರುವ ವಿದ್ಯುತ್ ತಂತಿಗಳು ಹೆಚ್ಚಿನ ಲೋಡ್‌ ಅನ್ನು ತಡೆಯುವುದಿಲ್ಲ. ಅಂಥವು ಕಡಿದು ಬೀಳುತ್ತಿವೆ. ಕೆಲವೆಡೆ ನಾಲ್ಕೈದು ಬಾರಿ ವಿದ್ಯುತ್ ಕಡಿತವಾಗುತ್ತಿದೆಯಷ್ಟೆ’ ಎಂದು ಸಮಜಾಯಿಷಿ ನೀಡಿದರು.

ಇದಕ್ಕೆ ಸದಸ್ಯರು ಸಮಾಧಾನಗೊಳ್ಳಲಿಲ್ಲ. ಆಗ ಮಧ್ಯಪ್ರವೇಶಿಸಿದ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಆನಂದಕುಮಾರ್, ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಹೆಸ್ಕಾಂಗೆ ಸೂಚಿಸಿದರು. 

ಉಮ್ಮಳೆಜೂಗ ದ್ವೀಪದಲ್ಲಿ ಶಿಥಿಲಾವಸ್ಥೆಗೆ ಬಂದಿರುವ ವಿದ್ಯುತ್ ಕಂಬಗಳನ್ನು ಸದ್ಯ ತೆಗೆಯಲು ಸಾಧ್ಯವಿಲ್ಲ. ಮಳೆಗಾಲ ಮುಗಿದ ನಂತರ ಹೊಸದನ್ನು ಅಳವಡಿಸಲಾಗುವುದು ಎಂದು ಇಡೂರ್ಕರ್ ತಿಳಿಸಿದರು. 

ವೈದ್ಯರು ಅಲಭ್ಯ: ‘ದೇವಳಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಎಂಟು ದಿನ ರಜೆಯ ಮೇಲೆ ತೆರಳಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಪರ್ಯಾಯ ವ್ಯವಸ್ಥೆ ಏನು ಮಾಡಿದ್ದೀರಿ’ ಎಂದು ಸದಸ್ಯ ಸುರೇಂದ್ರ ಗಾಂವಕರ ಪ್ರಶ್ನಿಸಿದರು. 

ಇದಕ್ಕೆ ಉತ್ತರಿಸಿದ ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿ ಸುದಿತಾ ಪೆಡ್ನೇಕರ, ಬೇರೆಯವರನ್ನು ಪ್ರಭಾರ ಹುದ್ದೆಗೆ ನೇಮಿಸಲಾಗಿದೆ ಎಂದು ತಿಳಿಸಿದರು. 

‘ಆರೋಗ್ಯ ಶಿಬಿರ ಮಾಡಿ’: ಮಚ್ಚಳ್ಳಿ ಗ್ರಾಮದಲ್ಲಿ ಇಂದಿಗೂ ಜನರು ಆರೋಗ್ಯ ಸೌಲಭ್ಯಕ್ಕಾಗಿ ಪರದಾಡುತ್ತಿದ್ದಾರೆ. ಅಲ್ಲಿಗೆ ಇಲಾಖೆಯಿಂದ ಯಾರೂ ಹೋಗುತ್ತಿಲ್ಲ. ಗ್ರಾಮದಲ್ಲಿ ಗರ್ಭಿಣಿಯರೂ ಇದ್ದಾರೆ. ಏನಾದರೂ ಸಮಸ್ಯೆಯಾದರೆ ಕಂಬಳಿಯಲ್ಲಿ ಹೊತ್ತುಕೊಂಡು ಬರುವಂತಹ ಸ್ಥಿತಿಯಿದೆ. ಹಾಗಾಗಿ ಅಲ್ಲಿ 15 ದಿನಗಳಿಗೊಮ್ಮೆ ಆರೋಗ್ಯ ಶಿಬಿರ ಮಾಡಬೇಕು ಎಂದು ಅಧ್ಯಕ್ಷೆ ಪ್ರಮೀಳಾ ನಾಯ್ಕ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ನೋಡಲ್ ಅಧಿಕಾರಿ ಹೊಣೆ’: ‘ಅಧಿಕಾರಿಗಳ ಗೈರು ಹಾಜರಿಯಿಂದಾಗಿ ಗ್ರಾಮ ಪಂಚಾಯ್ತಿ ಸಭೆಗಳಿಗೆ ಜನಪ್ರತಿನಿಧಿಗಳು ಬಹಿಷ್ಕಾರ ಹಾಕಿದರೆ ನೋಡಲ್ ಅಧಿಕಾರಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಈ ಬಗ್ಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗೆ ವರದಿ ನೀಡಲಾಗುವುದು’ ಎಂದು ಆನಂದಕುಮಾರ್ ಎಚ್ಚರಿಕೆ ನೀಡಿದರು.

ಜನಪರವಾದ ಸಭೆಗಳನ್ನು ಇನ್ನೂ ಗಂಭೀರವಾಗಿ ನಡೆಸಿಕೊಂಡು ಹೋಗಲು ಎಲ್ಲರ ಸಹಕಾರ ಅಗತ್ಯ ಎಂದು ಅವರು ಹೇಳಿದರು.

ಇದೇವೇಳೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ, ಉಪಾಧ್ಯಕ್ಷ ರವೀಂದ್ರ ಪವಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !