ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರರ ಮೇಲೂ ಲಾಕ್‌ಡೌನ್ ಪರಿಣಾಮ: ದುಡಿಮೆಯಿಲ್ಲದೇ ಹೊತ್ತಿನ ಊಟಕ್ಕೂ ಕಷ್ಟ

ದೈನಂದಿನ ಆದಾಯವನ್ನೇ ನೆಚ್ಚಿಕೊಂಡಿರುವ ಸಾಂಪ್ರದಾಯಿಕ ಮೀನುಗಾರರ ಅಳಲು
Last Updated 3 ಏಪ್ರಿಲ್ 2020, 12:12 IST
ಅಕ್ಷರ ಗಾತ್ರ

ಕಾರವಾರ:ಕೊರೊನಾ ವೈರಸ್ ಹರಡುವುದನ್ನು ತಡೆಯಲು ಲಾಕ್‌ಡೌನ್ ಘೋಷಿಸಿದ್ದರ ಪರಿಣಾಮ ಸಾಂಪ್ರದಾಯಿಕ ಮೀನುಗಾರರ ಮೇಲೂ ಆಗಿದೆ. ದಿನದ ದುಡಿಮೆಯನ್ನೇ ನೆಚ್ಚಿಕೊಂಡಿರುವ ನೂರಾರು ಕುಟುಂಬಗಳು ಒಂಬತ್ತು ದಿನಗಳಿಂದ ನಯಾಪೈಸೆ ಆದಾಯವಿಲ್ಲದೇ ಚಿಂತೆಗೀಡಾಗಿವೆ.

‘ಆರಂಭದ ದಿನಗಳನ್ನು ಹೇಗೋ ಕಳೆದಾಯ್ತು. ಆದರೆ, ಈಗ ದುಡಿಮೆಯಿಲ್ಲದ ಕಾರಣ ಊಟಕ್ಕೂ ಸಮಸ್ಯೆಯಾಗುತ್ತಿದೆ. ಮನೆಗಳಿಗೆ ಪೂರೈಕೆ ಮಾಡುವ ತರಕಾರಿ ಕೆ.ಜಿ.ಗೆ ₹ 50ರಂತೆ ಮಾರಾಟ ಮಾಡ್ತಿದ್ದಾರೆ. ಅಷ್ಟು ಹಣ ಎಲ್ಲಿಂದ ತರೋದು? ದಿನಸಿ ಖರೀದಿಗೂ ದುಡ್ಡಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದುಹಾರವಾಡದ ಸಾಂಪ್ರದಾಯಿಕ ಮೀನುಗಾರ ಉಮೇಶ ಅಳಲು ತೋಡಿಕೊಂಡರು.

‘ಜನರ ಆರೋಗ್ಯ ಕಾಪಾಡಲು ಸರ್ಕಾರ ಮಾಡಿದ ಆದೇಶವನ್ನು ನಾವೂ ಪಾಲಿಸುತ್ತೇವೆ. ಆದರೆ, ಮೀನುಗಾರಿಕೆ ಇಲ್ಲದ ಕಾರಣ ಹೊಟ್ಟೆಪಾಡಿಗೆ ಏನು ಮಾಡಬೇಕು ಎಂದು ತೋಚುತ್ತಿಲ್ಲ. ನಾವು ಪಾತಿ ದೋಣಿಗಳಲ್ಲಿ ಮೀನುಗಾರಿಕೆ ಮಾಡುವವರು. ಹಾಗಾಗಿ ಮೀನು ಸಿಕ್ಕಿದ ಪ್ರಮಾಣಕ್ಕೆ ಅನುಗುಣವಾಗಿ ದಿನದ ಆದಾಯ ನಿರ್ಧಾರವಾಗುತ್ತದೆ. ₹ 500– ₹ 600ವರೆಗೆ ಪ್ರತಿ ದೋಣಿಯಲ್ಲಿ ದುಡಿಯಲು ಅವಕಾಶವಾಗುತ್ತಿತ್ತು. ಆದರೆ, ಈಗ ದುಡಿಮೆಯೇ ಸಂಪೂರ್ಣ ನಿಂತಿದೆ. ಪೊಲೀಸರು ಬಂದು ಎಲ್ಲ ಚಟುವಟಿಕೆಗಳನ್ನು ನಿಲ್ಲಿಸುವಂತೆ ಹೇಳಿದರು. ಅದರಂತೆ ನಾವು ಸ್ಥಗಿತಗೊಳಿಸಿದ್ದೇವೆ’ ಎಂದು ಹೇಳಿದರು.

ಕಿತ್ತಳೆ ಬಣ್ಣದ ಧ್ವಜ: ‘ಸಾಂಪ್ರದಾಯಿಕ ಮೀನುಗಾರಿಕೆಗೆ ರಾಜ್ಯ ಸರ್ಕಾರ ಅವಕಾಶ ಕೊಟ್ಟಿದೆ ಎಂದು ಗೊತ್ತಾಗಿದೆ. ಅಧಿಕೃತವಾಗಿ ತಿಳಿಸುವವರೆಗೂ ನಾವು ಕಡಲಿಗಿಳಿಯಲು ಸಾಧ್ಯವಿಲ್ಲ. ಮೀನುಗಾರಿಕೆ ಮಾಡಬಾರದು ಎಂಬ ಸೂಚನೆಯ ಕಿತ್ತಳೆ ಬಣ್ಣದ ಧ್ವಜಗಳನ್ನು ಕಡಲತೀರದಲ್ಲಿ ಅಳವಡಿಸಿದ್ದೇವೆ. ಅದನ್ನು ತೆಗೆದ ಬಳಿವೇ ಕೆಲಸ ಶುರು ಮಾಡುತ್ತೇವೆ. ಇದು ಮೊದಲಿನಿಂದಲೂ ಪಾಲಿಸಿಕೊಂಡು ಬಂದಿರುವ ಸಂಪ್ರದಾಯವಾಗಿದೆ’ ಎಂದು ಅವರು ವಿವರಿಸಿದರು.

ಬಲೆ, ದೋಣಿ ದುರಸ್ತಿ:‘ಕಡಲತೀರದಲ್ಲೇ ನಮ್ಮ ವಾಸ್ತವ್ಯ. ಹಾರವಾಡಮತ್ತು ಸುತ್ತಮುತ್ತ ಪ್ರದೇಶದಲ್ಲೇಸುಮಾರು 700 ಕುಟುಂಬಗಳು ಸಾಂಪ್ರದಾಯಿಕ ಮೀನುಗಾರಿಕೆ ಮಾಡುತ್ತಿವೆ. ಸದ್ಯ ಬಿಡುವು ಇರುವ ಕಾರಣ ಬಲೆಗಳನ್ನು ಹೆಣೆಯುತ್ತ, ದೋಣಿಗಳ ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ಮಾಡುತ್ತಿದ್ದೇವೆ’ ಎಂದು ಉಮೇಶ ಹೇಳಿದರು.

‘ಸದ್ಯಕ್ಕೆ ಸಾಲದ ಕಂತು ಕಟ್ಟಬೇಡಿ ಎಂದು ಸರ್ಕಾರ ಹೇಳಿದೆ. ಆದರೆ, ಮುಂದೆ ಮೂರೂ ತಿಂಗಳಿನ ಕಂತನ್ನು ಕಟ್ಟಲೇಬೇಕಲ್ಲ. ಸಂಕಷ್ಟದ ಸ್ಥಿತಿಯಲ್ಲಿ ನಾವುಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದೇವೆ.‌ ಕೃಷಿಕರಿಗೆ ಕೊಡುವ ರೀತಿಯ ಸೌಲಭ್ಯಗಳನ್ನು ನಮಗೂ ನೀಡಬೇಕು. ಸಾಲಮನ್ನಾದಂತಹ ಯೋಜನೆಗಳ ಪ್ರಯೋಜನವನ್ನು ವಿಸ್ತರಿಸುವ ಉದಾರತೆ ತೋರಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT