ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾರಂಪರಿಕ ಔಷಧಕ್ಕೆ ರೋಗ ನಾಶಮಾಡುವ ಶಕ್ತಿ’

ಪಾರಂಪರಿಕ ವೈದ್ಯರ ಸಮಾವೇಶದಲ್ಲಿ ರಾಜ್ಯದ ವಿವಿಧೆಡೆಯ ನಾಟಿ ವೈದ್ಯರು ಭಾಗಿ
Last Updated 16 ನವೆಂಬರ್ 2019, 14:10 IST
ಅಕ್ಷರ ಗಾತ್ರ

ಶಿರಸಿ: ಆಧುನಿಕ ವೈದ್ಯ ಪದ್ಧತಿಯಲ್ಲಿ ರೋಗ ನಿಯಂತ್ರಿಸುವ ಶಕ್ತಿಯಿದ್ದರೆ, ನಾಟಿ ವೈದ್ಯ ಪದ್ಧತಿಗೆ ರೋಗ ನಾಶ ಮಾಡುವ ಶಕ್ತಿಯಿದೆ. ‍ಪ್ರಾಚೀನ ಪರಂಪರೆಯಿಂದ ಬಂದಿರುವ ನಾಟಿ ವೈದ್ಯ ಪದ್ಧತಿಗೆ ಹೆಚ್ಚು ಒತ್ತು ನೀಡಬೇಕು ಎಂದು ಸ್ವಾದಿ ದಿಗಂಬರ ಜೈನಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ನುಡಿದರು.

ಶಕ್ತಿ ಪಾರಂಪರಿಕ ವೈದ್ಯ ಸ್ವಾಸ್ಥ್ಯ ಕೇಂದ್ರ, ಜನಪದ ಮತ್ತು ಪಾರಂಪರಿಕ ವೈದ್ಯ ಸಂಘ ಉತ್ತರ ಕನ್ನಡ, ಐಸಿಎಂಆರ್– ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ವಿಜ್ಞಾನ ಸಂಸ್ಥೆ ಜಂಟಿಯಾಗಿ ಶನಿವಾರ ಇಲ್ಲಿ ಆಯೋಜಿಸಿದ್ದ ಪಾರಂಪರಿಕ ವೈದ್ಯರ ಸಮ್ಮಿಲನ, ಪ್ರಸೂತಿ ಮತ್ತು ಶಿಶುಪಾಲನಾ ವಿಚಾರ ಸಂಕಿರಣ ಉದ್ಘಾಟಿಸಿ, ಅವರು ಮಾತನಾಡಿದರು. ಸರಿಯಾದ ಆಹಾರ ಪದ್ಧತಿ ರೂಢಿಸಿಕೊಂಡರೆ ಕಾಯಿಲೆಯಿಂದ ದೂರವಿರಬಹುದು. ಭಾರತೀಯ ಸಂಸ್ಕೃತಿಯ ಮಾದರಿಯಲ್ಲಿ ಆಹಾರ ಸೇವಿಸುವ ಮೂಲಕ, ಆಹಾರದಲ್ಲಿ ಆರೋಗ್ಯ ಕಂಡುಕೊಳ್ಳಬೇಕು ಎಂದರು.

ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ಕೇಂದ್ರ ಸರ್ಕಾರದ ಆಯುಷ ವಿಭಾಗದಲ್ಲಿ ಆಯುರ್ವೇದ, ಸಿದ್ಧ, ಯುನಾನಿ ಇದ್ದಂತೆ ನಾಟಿ ವೈದ್ಯ ಪದ್ಧತಿಯನ್ನೂ ಸೇರ್ಪಡೆಗೊಳಿಸುವ ಸಂಬಂಧ ಪಾರಂಪರಿಕ ವೈದ್ಯರು ಸಂಘಟಿತರಾಗಿ ಹೋರಾಟ ಮಾಡಬೇಕು’ ಎಂದರು. ಪಾರಂಪರಿಕ ವೈದ್ಯರ ಬಗ್ಗೆ ಸಮಾಜ ಹಾಗೂ ಸರ್ಕಾರಕ್ಕೆ ಒಳ್ಳೆಯ ಭಾವನೆಯಿದೆ. ಆದರೆ, ಸಂಘಟನೆಯ ಕೊರತೆಯಿಂದ ಈ ಕ್ಷೇತ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಪಾರಂಪರಿಕ ವೈದ್ಯರನ್ನು ಗುರುತಿಸುವ ಕಾರ್ಯ ಆಗಬೇಕು. ಇಂಗ್ಲಿಷ್ ವೈದ್ಯ ಪದ್ಧತಿ ಅಡ್ಡ ಪರಿಣಾಮ ಬೀರುತ್ತಿವೆ ಎಂಬುದನ್ನು ಜನಸಾಮಾನ್ಯರು ಅರಿತು ಪಾರಂಪರಿಕ ವೈದ್ಯ ಪದ್ಧತಿಯೆಡೆಗೆ ಆಸಕ್ತರಾಗಿದ್ದಾರೆ. ಇದನ್ನು ಅರಿತು ಪಾರಂಪರಿಕ ವೈದ್ಯರು ಯೋಗ್ಯ ಚಿಕಿತ್ಸೆ ನೀಡಬೇಕು ಎಂದು ಹೇಳಿದರು.

ಇದೇ ವೇಳೆ ಪಾರಂಪರಿಕ ವೈದ್ಯ ವೃತ್ತಿ ನಡೆಸಿಕೊಂಡು ಬಂದಿರುವ ಬಸವರಾಜ ಕೊಂಚಿಗೇರಿ ಹಾಗೂ ಕುಟುಂಬ, ಸೀತಾ ನಾಯ್ಕ ಬಣಗಾರ, ಸುದರ್ಶನ ಚಿತ್ರದುರ್ಗ, ಮಲ್ಲಪ್ಪ ತರೀಕೆರೆ, ಕಲ್ಲಪ್ಪ ಪಡಶಾವಿಗಿ ಹುಬ್ಬಳ್ಳಿ, ರವಿಶಂಕರ ಬ್ಯಾಡರಹಳ್ಳಿ ಹಾಸನ, ಶ್ರೀಜಿತ್ ಸಿ. ಕುಶಾಲನಗರ, ಶೌಕತ್ ಬಾಬು ಬಟವಾಡಿ, ಎಸ್.ಎಂ.ಹೆಗಡೆ ಮಕ್ಕಳತಾಯಿಮನೆ ಅವರನ್ನು ಸನ್ಮಾನಿಸಲಾಯಿತು.

ಜೀವ ವೈವಿಧ್ಯ ಮಂಡಳಿಯಲ್ಲಿ ಪಾರಂಪರಿಕ ವೈದ್ಯ ಪದ್ದತಿ ಮಹತ್ವದ ಕುರಿತು ಪರಿಸರ ವಿಜ್ಞಾನಿ ಡಾ.ಎಂ.ಡಿ.ಸುಭಾಶ್ಚಂದ್ರನ್, ಪಾರಂಪರಿಕ ವೈದ್ಯರು ಇಡಬೇಕಾದ ದಾಖಲಾತಿಗಳ ಬಗ್ಗೆ ಐಸಿಎಂಆರ್ ವಿಜ್ಞಾನಿ ಡಾ.ಹರ್ಷ ಹೆಗಡೆ ಬೆಳಗಾವಿ, ಪ್ರಸೂತಿಕಾ ಸಮಯ ಮತ್ತು ತತ್ಕಾಲ ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ಡಾ.ವಿಜಯಲಕ್ಷ್ಮೀ ಕೊಂಚಿಗೇರಿ, ಶಿಶು ಪಾಲನೆ ಬಗ್ಗೆ ವೈದ್ಯ ಶ್ರೀಧರ ದೇಸಾಯಿ ಗುಂದ ಮಾಹಿತಿ, ಮಾರ್ಗದರ್ಶನ ನೀಡಿದರು. ಜ್ಯೋತಿಷ್ಯಾಚಾರ್ಯ ನಾಗೇಂದ್ರ ಭಟ್ಟ ಹಿತ್ಲಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಪ್ರಧಾನ ಸಂಯೋಜಕ ವಿಶ್ವನಾಥ ಕಡಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಟಿ ವೈದ್ಯ ರಾಮಚಂದ್ರ ಭಟ್ಟ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT