ಸಹಕಾರಿ ಸಂಘಗಳ ಹೊಣೆಗಾರಿಕೆ ದೊಡ್ಡದು: ಎನ್.ಗಂಗಣ್ಣ

7
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರಿಗೆ ವಿಶೇಷ ತರಬೇತಿ

ಸಹಕಾರಿ ಸಂಘಗಳ ಹೊಣೆಗಾರಿಕೆ ದೊಡ್ಡದು: ಎನ್.ಗಂಗಣ್ಣ

Published:
Updated:
Deccan Herald

ಶಿರಸಿ: ಸಹಕಾರಿ ಸಂಘಗಳು ರೈತರಿಗೆ ಸಾಲ ನೀಡುವ ಜೊತೆಗೆ, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರುವ ಜವಾಬ್ದಾರಿ ಹೊಂದಿರಬೇಕು ಎಂದು ರಾಜ್ಯ ಸಹಕಾರಿ ಮಹಾಮಂಡಳದ ಅಧ್ಯಕ್ಷ ಎನ್.ಗಂಗಣ್ಣ ಹೇಳಿದರು.

ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ 5400ರಷ್ಟು ಪ್ರಾಥಮಿಕ ಸಹಕಾರಿ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಕಷ್ಟಕ್ಕೆ ಸಿಲುಕಿದ ರೈತರ ಸಮಸ್ಯೆಗೆ ಸ್ಪಂದಿಸಲು ಸಹಕಾರಿ ಸಂಘಗಳಿಂದ ಮಾತ್ರ ಸಾಧ್ಯ. ಇಷ್ಟು ದೊಡ್ಡ ಹೊಣೆಗಾರಿಕೆಯನ್ನು ಮನಗಂಡು ಕಾರ್ಯ ನಿರ್ವಹಿಸಬೇಕು. ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿ ಅನುಷ್ಠಾನವಾಗುವ ಹೊಸ ಕಾನೂನುಗಳ ಬಗ್ಗೆ ಅರಿವು ಬೆಳೆಸಿಕೊಂಡು, ಸಹಕಾರಿ ರಂಗದ ಸರ್ವತೋಮುಖ ಬೆಳವಣಿಗೆಗೆ ಪ್ರಮುಖರು ಆಸಕ್ತಿ ತೋರಬೇಕು ಎಂದರು.

ಎಪಿಎಂಸಿ ನಿರ್ಮಿಸಿರುವ ಗೋದಾಮು ಉದ್ಘಾಟಿಸಿದ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ‘ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಯಿಂದ ಸಹಕಾರಿ ಸಂಘಗಳು ಆರ್ಥಿಕ ಹೊರೆ ಎದುರಿಸಬೇಕಾಗಿದೆ. ಸಾಲ ಮನ್ನಾದಿಂದ ಸಹಕಾರಿ ಸಂಘಗಳ ಮೇಲೆ ಆಗುವ ಪರಿಣಾಮವನ್ನು ಸರ್ಕಾರ ಗಮನಿಸುತ್ತಿಲ್ಲ. ಮನ್ನಾ ಮಾಡುವ ಹಣವನ್ನು ಸಹಕಾರಿ ಸಂಘದ ತಲೆಗೆ ಕಟ್ಟುವ ಬದಲು ಸಾಲಗಾರ ರೈತರ ಖಾತೆಗೆ ನೇರ ಜಮಾ ಮಾಡಬೇಕು. ಈ ವಿಷಯವನ್ನು ಮುಖ್ಯಮಂತ್ರಿ ಗಮನಕ್ಕೂ ತರಲಾಗಿದೆ. ಸಾಲ ಮನ್ನಾದ ಹಣ ಜಮಾ ಆಗಲು ವಿಳಂಬವಾದರೆ, ಸಹಕಾರಿ ಸಂಘಗಳು ಹಾನಿ ಎದುರಿಸುವ ಜೊತೆಗೆ ಠೇವಣಿ ಇಟ್ಟವರ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ’ ಎಂದರು.

ತಟ್ಟೀಸರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಿ.ಟಿ.ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ಸುನಿಲ್ ನಾಯ್ಕ, ಸಹಕಾರಿ ಯೂನಿಯನ್ ಅಧ್ಯಕ್ಷ ವಿ.ಎನ್.ಭಟ್ಟ ಅಳ್ಳಂಕಿ, ಸಹಕಾರಿ ಸಂಘಗಳ ಜಿಲ್ಲಾ ಉಪನಿಬಂಧಕ ಜಿ.ಎಸ್.ಜಯಪ್ರಕಾಶ್, ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ಜೋಶಿ, ಮಹಾಮಂಡಳದ ನಿರ್ದೇಶಕರಾದ ಬಸವರಾಜ ಸುಲ್ತಾನಪುರಿ, ಆರ್.ಕೆ.ಪಾಟೀಲ ಇದ್ದರು. ಎಂ.ಎನ್.ಹೆಗಡೆ ಸ್ವಾಗತಿಸಿದರು. ರಾಜೇಂದ್ರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರತಿಭಾವಂತರನ್ನು ಸನ್ಮಾನಿಸಲಾಯಿತು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !