ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಅಮರ ಜವಾನ್ ಸ್ಮಾರಕಕ್ಕೆ ನಿರಂತರ ಗೌರವಾರ್ಪಣೆ

ಮಾಜಿ ಸೈನಿಕರ ಬೇಡಿಕೆಗೆ ಮನ್ನಣೆ: ಗಣರಾಜ್ಯೋತ್ಸವದಂದು ಚಾಲನೆ
Last Updated 26 ಜನವರಿ 2022, 19:30 IST
ಅಕ್ಷರ ಗಾತ್ರ

ಶಿರಸಿ: ಇಲ್ಲಿನ ಮರಾಠಿಕೊಪ್ಪದ ವಿಶಾಲ ನಗರದ ಉದ್ಯಾನವನದಲ್ಲಿ ನಿರ್ಮಾಣಗೊಂಡಿರುವ ಹುತಾತ್ಮ ಸೈನಿಕರ ಸ್ಮಾರಕಕ್ಕೆ (ಅಮರ ಜವಾನ್) ರಾಷ್ಟ್ರೀಯ ವಿಶೇಷ ದಿನಗಳ ವೇಳೆ ಗೌರವಾರ್ಪಣೆಗೆ ಮಾಜಿ ಸೈನಿಕರ ಸಂಘ ಬೇಡಿಕೆ ಇಟ್ಟಿದೆ. ಗಣರಾಜ್ಯೋತ್ಸವದ ದಿನವೇ ಗೌರವಾರ್ಪಣೆ ಮೂಲಕ ಈ ಬೇಡಿಕೆಗೆ ಮನ್ನಣೆ ನೀಡಲಾಗಿದೆ.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈಚೆಗಷ್ಟೆ ಅಮರ ಜವಾನ್ ಸ್ಮಾರಕ ಲೋಕಾರ್ಪಣೆಗೊಂಡಿದೆ. ಉತ್ತರ ಕನ್ನಡದಲ್ಲಿ ಸ್ಥಾಪನೆಯಾಗಿರುವ ಮೊದಲ ಹುತಾತ್ಮ ಸೈನಿಕರ ಸ್ಮಾರಕ ಇದಾಗಿದೆ.

‘ಹುತಾತ್ಮ ಸೈನಿಕರ ದಿನವಾಗಿರುವ ಜು.26 ರಂದು ಮಾತ್ರ ಸ್ಮಾರಕಕ್ಕೆ ಗೌರವ ಸಲ್ಲಿಸುವ ಪರಿಪಾಠವಾಗಿರಬಾರದು. ಎಲ್ಲ ರಾಷ್ಟ್ರೀಯ ಉತ್ಸವ, ರಾಷ್ಟ್ರೀಯ ನಾಯಕರ ಜಯಂತಿ ಮತ್ತು ಸ್ಮರಣೆ ವೇಳೆ ಇಲ್ಲಿ ಗೌರವ ಸಲ್ಲಿಸುವ ಪರಂಪರೆ ಬೆಳೆಯಬೇಕು’ ಎಂದು ಬೇಡಿಕೆಯನ್ನು ಹಲವು ಮಾಜಿ ಸೈನಿಕರು ಇಟ್ಟಿದ್ದರು.

ಇದಕ್ಕೆ ಸ್ಪಂದಿಸಿರುವ ನಗರಸಭೆ ಗಣರಾಜ್ಯೋತ್ಸವದ ಧ್ವಜಾರೋಹಣಕ್ಕೂ ಮುನ್ನ ಸ್ಮಾರಕಕ್ಕೆ ಗೌರವ ಸಲ್ಲಿಸುವ ಪದ್ಧತಿ ಆರಂಭಿಸಿತು. ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಮೊದಲು ಗೌರವ ಸಲ್ಲಿಸಿದರು. ಶಿರಸಿ ಉಪವಿಭಾಗಾಧಿಕಾರಿ ದೇವರಾಜ ಆರ್., ಡಿವೈಎಸ್ಪಿ ರವಿ ನಾಯ್ಕ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ಮಾಜಿ ಸೈನಿಕರು, ವೈದ್ಯರು ಸೇರಿ ಹಲವರು ಗೌರವ ಸಮರ್ಪಿಸಿದರು.

‘ಹುತಾತ್ಮ ಸೈನಿಕರ ಸ್ಮಾರಕಕ್ಕೆ ಗೌರವ ಸಲ್ಲಿಸುವ ಪದ್ಧತಿ ನಿರಂತರವಾಗಿದ್ದರೆ ಮಕ್ಕಳಲ್ಲೂ ದೇಶಪ್ರೇಮ, ಸೇನೆಯ ಬಗೆಗಿನ ಗೌರವ ಹೆಚ್ಚಿಸಲು ಸಾಧ್ಯವಿದೆ. ವಿಶೇಷ ಸಂದರ್ಭಗಳಲ್ಲೂ ಹಲವರು ಸ್ಮಾರಕಕ್ಕೆ ಗೌರವ ಸಲ್ಲಿಸುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ’ ಎಂದು ವೈದ್ಯ ಡಾ.ರವಿಕಿರಣ ಪಟವರ್ಧನ ಹೇಳಿದರು.

‘ಸ್ಮಾರಕಕ್ಕೆ ಪ್ರತಿ ರಾಷ್ಟ್ರೀಯ ಉತ್ಸವದ ದಿನ ಗೌರವ ಸಮರ್ಪಿಸಲು ಆಸಕ್ತಿ ಹೊಂದಿದ್ದೇವೆ. ಇದನ್ನು ರೂಢಿಯಾಗಿಸಲು ಪ್ರಯತ್ನಿಸುತ್ತೇವೆ. ಆ ಮೂಲಕ ವರ್ಷದ ಬಹುತೇಕ ದಿನಗಳಲ್ಲಿ ಸ್ಮಾರಕ ವೀಕ್ಷಿಸಿ ಗೌರವ ಅರ್ಪಣೆಯಾಗುವಂತೆ ಮಾಡಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಪ್ರತಿಕ್ರಿಯಿಸಿದರು.

ಧ್ವಜಾರೋಹಣಕ್ಕೆ ಮುನ್ನ ಗೌರವಾರ್ಪಣೆ:

‘ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನಡೆಸುವ ಮುನ್ನ ಪ್ರಧಾನಮಂತ್ರಿ ಅಮರ ಜ್ಯೋತಿ, ಗಾಂಧಿ ಸ್ಮಾರಕಕ್ಕೆ ಗೌರವ ಅರ್ಪಿಸುತ್ತಾರೆ. ಇದೇ ಮಾದರಿಯಲ್ಲಿ ಇಲ್ಲಿ ಧ್ವಜಾರೋಹಣ ನಡೆಸುವ ಉಪವಿಭಾಗಾಧಿಕಾರಿ ಅಮರ ಜವಾನ್ ಸ್ಮಾರಕಕ್ಕೆ ಗೌರವ ಸಲ್ಲಿಸಿ ತೆರಳುವ ಪದ್ಧತಿ ರೂಢಿಸಬೇಕು’ ಎನ್ನುತ್ತಾರೆ ನಿವೃತ್ತ ಸೈನಿಕರೊಬ್ಬರು.

‘ಶಿರಸಿಗೆ ಭೇಟಿ ನೀಡುವ ಗಣ್ಯ ವ್ಯಕ್ತಿಗಳಿಗೂ ಈ ಸ್ಮಾರಕ ವೀಕ್ಷಣೆಗೆ ಸಲಹೆ ನೀಡಬೇಕು. ಅದರಿಂದಾಗಿ ಇದೊಂದು ಪ್ರವಾಸಿ ತಾಣವಾಗಿಯೂ ರೂಪಿಸಿದಂತಾಗುತ್ತದೆ’ ಎಂದು ಸಲಹೆ ನೀಡಿದರು.

-----

ಅಮರ ಜವಾನ್ ಸ್ಮಾರಕಕ್ಕೆ ವಿಶೇಷ ದಿನಗಳಲ್ಲಿ ಗೌರವ ಸಮರ್ಪಣೆ ನಡೆದರೆ ಅದು ಉತ್ತಮ ಬೆಳವಣಿಗೆ. ಇದು ಯುವ ಜನಾಂಗಕ್ಕೆ ಸೇನೆಗೆ ಸೇರಲು ಪ್ರೇರಣೆ ನೀಡಬಹುದು.

ಸುಭೇದಾರ್ ರಾಮು,ಮಾಜಿ ಸೈನಿಕರ ಸಂಘದ ಸಹ ಕಾರ್ಯದರ್ಶಿ

--------

ಜನರಿಗೆ ತಿಳಿವಳಿಕೆ ನೀಡಲು ಸ್ಮಾರಕದ ಸಮೀಪ ರಾಷ್ಟ್ರೀಯ ವಿಶೇಷ ದಿನಗಳ ಮಾಹಿತಿ ಇರುವ ಫಲಕ ಅಳವಡಿಸಲು ಕ್ರಮವಹಿಸಲಾಗುವುದು.

ಕೇಶವ ಚೌಗುಲೆ, ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT