ಮಂಗಳವಾರ, ಜನವರಿ 19, 2021
17 °C
ಜೊಯಿಡಾದ ಕುಣಬಿ ಸಮುದಾಯ ಭವನದಲ್ಲಿ ನಡೆಯಲಿರುವ ವಿಶಿಷ್ಟ ಕಾರ್ಯಕ್ರಮ

ಕಾರವಾರ: ಮತ್ತೆ ಬಂದಿದೆ ಗೆಡ್ಡೆ, ಗೆಣಸು ಮೇಳ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜೊಯಿಡಾದ ‘ಗೆಡ್ಡೆ ಗೆಣಸು ಮೇಳ‌’ವೆಂದರೆ ಸಾಕು, ಆಸಕ್ತರ ಕಿವಿ ನೆಟ್ಟಗಾಗುತ್ತದೆ. ಬೇರೆ ಬೇರೆ ಗಾತ್ರಗಳ, ವಿಭಿನ್ನ ರುಚಿಯ, ಔಷಧೀಯ ಗುಣಗಳುಳ್ಳ ಗೆಡ್ಡೆಗಳ ದೊಡ್ಡ ಸಂಗ್ರಹವೇ ಅಲ್ಲಿರುತ್ತದೆ. ಈ ಬಾರಿಯ ಮೇಳವು ಜ.13ರಂದು ಬೆಳಿಗ್ಗೆ 10ರಿಂದ ನಡೆಯಲಿದೆ.

ತಾಲ್ಲೂಕಿನ ಕುಣಬಿ ಅಭಿವೃದ್ಧಿ ಸಂಘವು ಹಮ್ಮಿಕೊಳ್ಳುವ ಈ ಮೇಳವು ಹಲವು ವೈಶಿಷ್ಟ್ಯಗಳಿಂದ ಕೂಡಿರುತ್ತದೆ. ಗೆಡ್ಡೆ, ಗೆಣಸುಗಳ ಪ್ರದರ್ಶನ ಮತ್ತು ಮಾರಾಟ, ಅವುಗಳಿಂದ ಸಿದ್ಧಪಡಿಸಲಾದ ರುಚಿಯಾದ ತಿನಿಸುಗಳೂ ಅಲ್ಲಿರುತ್ತವೆ. ಬುಡಕಟ್ಟು ಜನಾಂಗದವರು ಪಾರಂಪರಿಕವಾಗಿ ಬೆಳೆಯುವ ಮೂಲಕ ವಿವಿಧ ತಳಿಗಳ ಸಂರಕ್ಷಣೆ ಮಾಹಿತಿಯನ್ನೂ ನೀಡಲಾಗುತ್ತದೆ. ಈ ಬಾರಿಯ ಮೇಳದಲ್ಲೂ ಇವುಗಳು ಇರಲಿವೆ ಎನ್ನುತ್ತಾರೆ ಕುಣಬಿ ಸಮಾಜದ ಅಧ್ಯಕ್ಷರೂ ಆಗಿರುವ ಕಾರ್ಯಕ್ರಮದ ಸಂಘಟಕ ಡಾ.ಜಯಾನಂದ ಡೇರೇಕರ್.

‘ಮೇಳದ ಮೊದಲಿನ ವರ್ಷದಿಂದಲೂ ಗೆಡ್ಡೆ, ಗೆಣಸುಗಳಿಂದ ತಯಾರಿಸಿದ ತಿಂಡಿ, ತಿನಿಸುಗಳ ಮಾರಾಟ ಆಯೋಜಿಸಲಾಗುತ್ತಿದೆ. ಈ ವರ್ಷ ಹೆಚ್ಚಿನ ಖಾದ್ಯಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ಅದರಲ್ಲಿ ರೈತರಿಗೆ ಸ್ಪರ್ಧೆಗಳಿದ್ದು, ಮೂರು ಬಹುಮಾನಗಳನ್ನು ನೀಡಲಾಗುತ್ತದೆ. ಗೆಡ್ಡೆಗಳ ಪ್ರಭೇದ, ಅವುಗಳ ಗಾತ್ರಕ್ಕೆ ಅನುಗುಣವಾಗಿಯೂ ಬಹುಮಾನವಿದೆ’ ಎಂದು ಅವರು ಮಾಹಿತಿ ನೀಡಿದರು.

‘ಕೆಲವು ವರ್ಷಗಳ ಹಿಂದಿನ ತನಕ ಕೇವಲ ಮನೆ ಬಳಕೆಗೆ ಸೀಮಿತವಾಗಿದ್ದ ಜೊಯಿಡಾದ ಗೆಡ್ಡೆ, ಗೆಣಸುಗಳು, ಮೇಳದ ಆಯೋಜನೆಯಾದ ಬಳಿಕ ಹೊರ ರಾಜ್ಯಗಳಲ್ಲೂ ಪ್ರಸಿದ್ಧವಾಗಿವೆ. ಅವುಗಳ ಬಗ್ಗೆ ಆಸಕ್ತರು ಮಾಹಿತಿ ಕಲೆ ಹಾಕುತ್ತ, ಬೆಳೆಯುವ ವಿಧಾನಗಳನ್ನು ಅರಿತುಕೊಳ್ಳುತ್ತಿದ್ದಾರೆ. ಪ್ರವಾಸ ಬರುವ ಹಲವರು ಗೆಡ್ಡೆ, ಗೆಣಸುಗಳ ಕೃಷಿಯನ್ನೂ ಕಣ್ತುಂಬಿಕೊಳ್ಳುತ್ತಿದ್ದಾರೆ’ ಎಂದು ಅವರು ಹೇಳಿದರು.

‘ಮೇಳಕ್ಕೆ ಮಹಾರಾಷ್ಟ್ರದ ಪುಣೆ ವಿಶ್ವವಿದ್ಯಾಲಯ, ಕೊಲ್ಲಾಪುರ ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ತೋಟಗಾರಿಕಾ ವಿಶ್ವವಿದ್ಯಾಲಯ, ಧಾರವಾಡ ವಿಶ್ವವಿದ್ಯಾಲಯ ಮುಂತಾದ ಕಡೆಗಳಿಂದ ಪ್ರೊಫೆಸರ್‌ಗಳು, ಸಂಶೋಧಕರು ಭೇಟಿ ನೀಡುತ್ತಾರೆ. ಅವರಲ್ಲಿರುವ ಮಾಹಿತಿಗಳನ್ನು ನಮಗೆ ತಿಳಿಸುತ್ತಾರೆ. ಸ್ಥಳೀಯ ರೈತರು ತಮ್ಮ ಅನುಭವಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಾರೆ. ಇದರಿಂದ ಅನುಕೂಲವಾಗುತ್ತದೆ’ ಎಂದು ವಿವರಿಸಿದರು.

‘ಕಳೆದ ವರ್ಷದ ಮೇಳದಲ್ಲಿ ಎಲ್ಲ ಉತ್ಪನ್ನಗಳೂ ಮಾರಾಟವಾಗಿದ್ದವು. ಹಾಗಾಗಿ ಈ ಬಾರಿ ಸ್ವಲ್ಪ ಹೆಚ್ಚು ತರಲು ಸೂಚಿಸಲಾಗಿದೆ. ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿರುವ ಕಾರಣ ಹೆಚ್ಚಿನ ಜನರು ಬರುವ ನಿರೀಕ್ಷೆಯಿದೆ’ ಎಂದರು.

ಒಂದು ಕ್ವಿಂಟಲ್‌ನ ಗಡ್ಡೆ!

‘ಜೊಯಿಡಾದ ರೈತರೊಬ್ಬರು ಬೆಳೆದಿರುವ ಒಂದು ಕ್ವಿಂಟಲ್ ತೂಕದ ಆಳೆಕೋನ್ ಎಂಬ ಗೆಡ್ಡೆಯು ಈ ಬಾರಿ ಮೇಳದ ಪ್ರದರ್ಶನದಲ್ಲಿ ಇರಲಿದೆ. ಅದನ್ನು ರೈತರು ಹೊಲದಿಂದ ಹೊರ ತೆಗೆಯಲು ಮೂರು ದಿನಗಳೇ ಬೇಕಾದವು’ ಎಂದು ಡಾ.ಜಯಾನಂದ ಡೇರೇಕರ್ ಹೇಳಿದರು.

‘ಮೇಳದಲ್ಲಿ ಭಾಗವಹಿಸುವ ರೈತರ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಈ ಬಾರಿ ಸ್ಥಳೀಯರೂ ಸೇರಿದಂತೆ, ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ 150ಕ್ಕೂ ಅಧಿಕ ರೈತರು ಭಾಗವಹಿಸುವ ನಿರೀಕ್ಷೆಯಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು