ಬುಧವಾರ, ಮೇ 27, 2020
27 °C
ಉಳಿದವರ ಆರೋಗ್ಯದಲ್ಲೂ ಚೇತರಿಕೆ

ಕೋವಿಡ್ ಪೀಡಿತ ಇಬ್ಬರು ಗುಣಮುಖ: ಕಾರವಾರದ ನೌಕಾಪಡೆ ಆಸ್ಪತ್ರೆಯಿಂದ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಜಿಲ್ಲೆಯಲ್ಲಿ ಕೋವಿಡ್ 19 ಪೀಡಿತರ ಆರೋಗ್ಯ ಸುಧಾರಿಸುತ್ತಿದ್ದು, ನೌಕಾಪಡೆಯ ಆಸ್ಪತ್ರೆಯಿಂದ ಮಂಗಳವಾರ ಇಬ್ಬರು ಬಿಡುಗಡೆಯಾಗಿದ್ದಾರೆ. ಉಳಿದವರೂ ಶೀಘ್ರವೇ ಸಂಪೂರ್ಣ ಗುಣಮುಖರಾಗುವ ವಿಶ್ವಾಸವಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಗುಣಮುಖರಾದವರನ್ನು ಜಿಲ್ಲಾಡಳಿತದಿಂದಲೇ 14 ದಿನ ಕ್ವಾರಂಟೈನ್ ಮಾಡಲಾಗುತ್ತದೆ. ಸೋಂಕಿತರ ಜೊತೆ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಕೂಡ 14 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. ಅವರ ಗಂಟಲುದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗುತ್ತದೆ. ಮುಂದಿನ 14 ದಿನಗಳ ಕಾಲ ಅವರನ್ನು ನಿಗಾವಣೆಯಲ್ಲಿ ಇಡಲಾಗುವುದು’ ಎಂದು ಮಾಹಿತಿ ನೀಡಿದರು.

‘ದೆಹಲಿಯ ತಬ್ಲೀಗ್ ಜಮಾತ್‌ ಸೇರಿದಂತೆ ವಿವಿಧೆಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಜಿಲ್ಲೆಯ ಎಲ್ಲರ ಕೋವಿಡ್ 19 ಪರೀಕ್ಷಾ ವರದಿಗಳೂ ನೆಗೆಟಿವ್ ಎಂದು ಬಂದಿದೆ. ಮೂರು ದಿನಗಳ ಬಳಿಕ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಮೂಲಕ ಮನೆ ಮನೆ ಸಮೀಕ್ಷೆ ಹಮ್ಮಿಕೊಳ್ಳಲಾಗುವುದು. ಈ ಮೂಲಕ ಜಿಲ್ಲೆಯ ಪರಿಸ್ಥಿತಿಯನ್ನು ಏ.14ರ ಒಳಗೆ ತಿಳಿಯಲು ಸಾಧ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾತನಾಡಿ, ‘ತಬ್ಲೀಗ್ ಜಮಾತ್ ವಿಚಾರವಾಗಿ ಜಿಲ್ಲೆಯಲ್ಲಿ ವಿಸ್ತಾರವಾಗಿ ತನಿಖೆ ಮಾಡಲಾಗುತ್ತಿದೆ. ಹೊರ ಜಿಲ್ಲೆಗಳಿಂದ ನಮ್ಮ ಜಿಲ್ಲೆಗೆ 44 ಮಂದಿ ಬಂದಿದ್ದಾರೆ. ಮೈಸೂರಿನ ಜಮಾತ್‌ನಲ್ಲಿ  ಭಾಗವಹಿಸಿದ್ದ 14 ಮಂದಿಯ ಗಂಟಲು ದ್ರವದ ಮಾದರಿಗಳನ್ನೂ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ತಿಳಿಸಿದರು.

‘ದೆಹಲಿಗೆ ಹೋಗಿದ್ದ ಒಟ್ಟು ಎಂಟು ಮಂದಿಯಲ್ಲಿ ಒಬ್ಬರು ಗೋವಾದಲ್ಲಿ ಮತ್ತೊಬ್ಬರು ದೆಹಲಿಯಲ್ಲೇ ಇದ್ದಾರೆ. ಐವರು ದಾಂಡೇಲಿಗೆ ಬಂದಿದ್ದಾರೆ. ಅವರೆಲ್ಲರ ಪರೀಕ್ಷಾ ವರದಿಗಳು ನೆಗೆಟಿವ್ ಬಂದಿದೆ. ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದ 200– 300 ಜನರ ಪಟ್ಟಿ ಸಿದ್ಧಪಡಿಸಲಾಗಿದ್ದು, ಅವರ ಆರೋಗ್ಯವನ್ನು ನಿತ್ಯವೂ‍ ಪರೀಕ್ಷೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು. 

‘ಪರಿಶೀಲನೆ ಕಷ್ಟ’: ‘ಮೀನುಗಾರಿಕೆಗೆ ಅವಕಾಶ ಕೊಡಲಿಲ್ಲ ಎಂದು ಮೀನುಗಾರರಲ್ಲಿ ಅಸಮಾಧಾನವಿದೆ. ಆದರೆ, ಕರಾವಳಿಯ ಮೂರು ಜಿಲ್ಲೆಗಳು ಪ್ರಜ್ಞಾಪೂರ್ವಕವಾಗಿ ತೆಗೆದುಕೊಂಡ ನಿರ್ಧಾರ ಇದಾಗಿದೆ. ಮಹಾರಾಷ್ಟ್ರ, ಗೋವಾ ಹಾಗೂ ಕೇರಳ ಗಡಿಗಳಲ್ಲಿ ತುಂಬ ಜನರು ತಮ್ಮ ಊರುಗಳಿಗೆ ಬರಲು ಕಾಯುತ್ತಿದ್ದಾರೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿಯಿದೆ. ಹಾಗಾಗಿ ಅವರು ಜಲಮಾರ್ಗದ ಮೂಲಕ ಬಂದರೆ ಈ ಹಂತದಲ್ಲಿ ಪರಿಶೀಲನೆ ಮಾಡುವುದು ಕಷ್ಟವಾಗುತ್ತದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಸ್ಪಷ್ಟಪಡಿಸಿದರು. ‌

ಮುಸ್ಲಿಂ ಮುಖಂಡರೊಂದಿಗೆ ಸಭೆ: ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇತರ ಪೊಲೀಸ್ ಅಧಿಕಾರಿಗಳು ಜಿಲ್ಲೆಯ ಮುಸ್ಲಿಂ ಮುಖಂಡರೊಂದಿಗೆ  ವಿಡಿಯೊ ಕಾನ್ಫರೆನ್ಸ್ ಹಮ್ಮಿಕೊಂಡರು. ಏ.10ರಂದು ನಡೆಯಲಿರುವ ಶಬ್ ಎ ಬಾರಾತ್ ಅಂಗವಾಗಿ ಮಸೀದಿಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡದೇ ತಮ್ಮ ತಮ್ಮ ಮನೆಗಳಲ್ಲೇ ಆಚರಿಸುವಂತೆ ಸೂಚಿಸಲಾಯಿತು.

ಈ ಬಗ್ಗೆ ಮಾಹಿತಿ ನೀಡಿದ ಶಿವಪ್ರಕಾಶ ದೇವರಾಜು, ‘ಶಬ್ ಎ ಬಾರಾತ್ ಆಚರಣೆ ಸಂದರ್ಭ ಗುಂಪುಗೂಡದಂತೆ ತಡೆಯಲು ಮಸೀದಿ ಸಮಿತಿಗಳ ಮುಖಂಡರಿಗೇ ಜವಾಬ್ದಾರಿ ನೀಡಲಾಗಿದೆ. ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು