ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಹರಕೆ ಒಪ್ಪಿಸಲು ಲಕ್ಷಾಂತರ ಉಡಿ

ಅಂತಿಮ ಹಂತದಲ್ಲಿ ಮಾರಿಕಾಂಬಾ ದೇವಿ ಜಾತ್ರೆಯ ಸಿದ್ಧತೆ
Last Updated 29 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಶಿರಸಿ: ಮಾರಿಕಾಂಬಾ ದೇವಿಗೆ ಹೆಂಗಳೆಯರು ಸಲ್ಲಿಸುವ ಹರಕೆಗಳಲ್ಲಿ ಉಡಿ ಹೆಚ್ಚು ಶ್ರೇಷ್ಠ. ಅದರಲ್ಲೂ ಜಾತ್ರಾ ಗದ್ದುಗೆಯಲ್ಲಿ ದೇವಿ ಕುಳಿತಿರುವಾಗ ಸಲ್ಲಿಸುವ ಉಡಿಗೆ ವಿಶೇಷ ಮಹತ್ವವಿದೆ. ಹೀಗಾಗಿ, ಜಾತ್ರೆಯಲ್ಲಿ ಉಡಿಗೆ ಬೇಡಿಕೆ ಹೆಚ್ಚು.

ಮಾ.3ರಿಂದ ಪ್ರಾರಂಭವಾಗುವ ಮಾರಿಕಾಂಬಾ ಜಾತ್ರೆಗೆ ಬರುವ ಭಕ್ತರ ಅನುಕೂಲಕ್ಕಾಗಿ ದೇವಾಲಯದಲ್ಲಿ ಲಕ್ಷಾಂತರ ಉಡಿಗಳನ್ನು ಸಿದ್ಧಪಡಿಸಲಾಗುತ್ತಿದೆ. ದೇವಾಲಯದ 10ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ನಾಲ್ಕೈದು ದಿನಗಳಿಂದ ಈ ಕಾಯಕದಲ್ಲಿ ತೊಡಗಿದ್ದಾರೆ. ದಿನವೊಂದಕ್ಕೆ 500ರಷ್ಟು ಉಡಿಗಳು ಸಿದ್ಧವಾಗುತ್ತಿವೆ.

ಏನಿದು ಉಡಿ ?:

ತೆಂಗಿನಕಾಯಿ, ಅರಿಸಿನ–ಕುಂಕುಮ ಪೊಟ್ಟಣ, ಗಾಜಿನ ಹಸಿರು ಬಳೆ, ಕರಿಮಣಿ ಹಾಗೂ ಅಕ್ಕಿ ಇವಿಷ್ಟನ್ನು ರವಿಕೆಯ ಬಟ್ಟೆಯೊಂದಿಗೆ ಸೇರಿಸಿ ದೇವಿಗೆ ಅರ್ಪಿಸುವ ಹರಕೆಯಿದು. ‘ತೆಂಗಿನಕಾಯಿ ಜೊತೆ ಸೇರಿ ಗಾಜಿನ ಬಳೆಗಳು ಒಡೆಯಬಾರದೆಂಬ ಕಾರಣಕ್ಕೆ ಚಿಕ್ಕದಾದ ಪ್ರತ್ಯೇಕ ಡಬ್ಬದಲ್ಲಿ ಬಳೆ, ಇನ್ನಿತರ ವಸ್ತುಗಳನ್ನು ಹಾಕಿ, ಅದರನ್ನು ತೆಂಗಿನಕಾಯಿಯೊಂದಿಗಿಟ್ಟು ರವಿಕೆಯ ಬಟ್ಟೆಯಲ್ಲಿ ಕಟ್ಟಿಡುತ್ತೇವೆ. ಜಾತ್ರೆ ಶುರುವಾಗುವವರೆಗೆ ದೇವಾಲಯದಲ್ಲಿ ಇದನ್ನು ಸಿದ್ಧಪಡಿಸುತ್ತೇವೆ. ದೇವಿ ಗದ್ದುಗೆಗೆ ಹೋದ ಮೇಲೆ, ಅಲ್ಲಿಯೂ ನಾಲ್ಕಾರು ಜನರು ಬೆಳಗಿನಿಂದ ರಾತ್ರಿವರೆಗೆ ಇದೇ ಕೆಲಸ ಮಾಡುತ್ತಾರೆ’ ಎಂದು ಮಹಿಳಾ ಸಿಬ್ಬಂದಿಯೊಬ್ಬರು ಹೇಳಿದರು.

ದೇವಾಲಯವು ಪ್ರತಿ ಉಡಿಗೆ ₹ 40 ದರ ನಿಗದಿ ಮಾಡಿದೆ. ಜಾತ್ರೆಯಲ್ಲಿ ಕೆಲವರು ಅಂಗಡಿಯಿಟ್ಟು ಉಡಿಯೊಂದಕ್ಕೆ ₹ 70–80ಕ್ಕೆ ಮಾರಾಟ ಮಾಡುತ್ತಾರೆ. ಸ್ಥಳೀಯ ಕೆಲವರು ಮನೆಯಿಂದಲೇ ಉಡಿ ತಂದು ದೇವಿಗೆ ಒಪ್ಪಿಸುತ್ತಾರೆ ಎಂದು ಅವರು ಹೇಳಿದರು.

ಜಾತ್ರೆಯ ಒಂಬತ್ತು ದಿನಗಳಲ್ಲಿ, ಏಳು ದಿನ ಸೇವೆಗೆ ಅವಕಾಶವಿರುತ್ತದೆ. ಈ ದಿನಗಳಲ್ಲಿ 10 ಲಕ್ಷದಷ್ಟು ಉಡಿಗಳು ದೇವಿಯ ಪಾದಕ್ಕೆ ಸಮರ್ಪಣೆಯಾಗುತ್ತವೆ. ಮಂಗಳವಾರ ಮತ್ತು ಶುಕ್ರವಾರ ದೇವಿಗೆ ವಿಶೇಷ ದಿನ. ಇವೆರಡು ದಿನಗಳಲ್ಲಿ ಭಕ್ತರು ಕಿಲೋ ಮೀಟರ್ ದೂರದವರೆಗೆ ಸರದಿಯಲ್ಲಿ ನಿಂತು ದೇವಿ ದರ್ಶನ ಪಡೆದು, ಉಡಿ ಸಲ್ಲಿಸುತ್ತಾರೆ.

‘ಮಕ್ಕಳಿಗೆ ಕಾಯಿಲೆ ಬಂದಾಗ, ಕುಟುಂಬದಲ್ಲಿ ಕಷ್ಟ ಎದುರಾದಾಗ ಹಲವರು ಉಡಿಯ ಹರಕೆ ಹೇಳಿಕೊಳ್ಳುತ್ತಾರೆ. ಜಾತ್ರೆ ಮತ್ತು ನವರಾತ್ರಿಯ ಸಂದರ್ಭಗಳಲ್ಲಿ ದೇವಿಗೆ ಈ ಹರಕೆ ಒಪ್ಪಿಸುತ್ತಾರೆ. ಹೆಂಗಸರು ಮುತ್ತೈದೆ ಭಾಗ್ಯ ಬೇಡಿಕೊಂಡು ಉಡಿ ಸಲ್ಲಿಸುವವರಿಗೆ ಲೆಕ್ಕವಿಲ್ಲ’ ಎಂದು ದೇವಿಯ ಭಕ್ತೆ ಕುಸುಮಾ ಚಲವಾದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT