ಸಾಮೂಹಿಕ ಉತ್ಸವದಿಂದ ಒಳ್ಳೆಯ ಚಿಂತನೆ: ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

ಶುಕ್ರವಾರ, ಏಪ್ರಿಲ್ 26, 2019
21 °C
ಬೃಹತ್ ಶೋಭಾಯಾತ್ರೆ

ಸಾಮೂಹಿಕ ಉತ್ಸವದಿಂದ ಒಳ್ಳೆಯ ಚಿಂತನೆ: ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

Published:
Updated:
Prajavani

ಶಿರಸಿ: ಸಂಸ್ಕೃತಿ ಬೆಳೆಸುವ ಜೊತೆಗೆ ವಿಕೃತಿಯನ್ನು ದೂರ ಮಾಡುವುದು ಯುಗಾದಿ ಉತ್ಸವ ಆಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು.

ಯುಗಾದಿ ಹಬ್ಬದ ಅಂಗವಾಗಿ ನಗರದ ಯುಗಾದಿ ಉತ್ಸವ ಸಮಿತಿಯು ಶನಿವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಒಳ್ಳೆಯ ಚಿಂತನೆ ಬೆಳೆಸುವುದು ಯುಗಾದಿ ಹಬ್ಬದ ಸಾಮೂಹಿಕ ಹಬ್ಬದ ಆಶಯವಾಗಿದೆ. ಇಂದಿನ ತಲೆಮಾರು ಭೋಗ ಜೀವನಕ್ಕೆ ಮಾರುಹೋಗುತ್ತಿದೆ. ಯುವ ಪೀಳಿಗೆ ಮರಳಿ ಯೋಗ ಜೀವನಕ್ಕೆ ಬಂದು, ಸಾಧನೆ ಮಾಡಬೇಕಾಗಿದೆ ಎಂದರು.

ಬಣ್ಣದ ಮಠದ ಶಿವಲಿಂಗ ಸ್ವಾಮೀಜಿ ಮಾತನಾಡಿ, ‘ಇಂದಿನ ಶಿಕ್ಷಣವು ಸಂಸ್ಕೃತಿಯನ್ನು ನಾಶಮಾಡುತ್ತಿದೆ. ನೀತಿಯಿಲ್ಲದ ಶಿಕ್ಷಣ, ಭೀತಿಯಿಲ್ಲದ ಶಾಸನ, ಆಚಾರವಿಲ್ಲದ ಧರ್ಮ ದೇಶಕ್ಕೆ ಅಪಾಯ ತಂದೊಡ್ಡುತ್ತದೆ. ಭಾರತೀಯ ಸಂಸ್ಕೃತಿಯು ಜನರ ಶ್ರೇಯೋಭಿವೃದ್ಧಿ ಮಾಡುತ್ತದೆ. ದೇಶಿಯ ಸಂಸ್ಕೃತಿ ಬೆಳೆಸುವ ಶಿಕ್ಷಣ ಸಂಸ್ಥೆಗಳು ಅಪರೂಪವಾಗಿದೆ. ಯುವ ಜನರಿಗೆ ನೈತಿಕ ನೀಡುವ ಶಿಕ್ಷಣ ವ್ಯವಸ್ಥೆ ಬರಬೇಕು’  ಎಂದು ಆಶಿಸಿದರು.

ಸಮಿತಿ ಗೌರವಾಧ್ಯಕ್ಷ ಉಪೇಂದ್ರ ಪೈ ಮಾತನಾಡಿ, ‘ಯುಗಾದಿ ಶೋಭಾಯಾತ್ರೆಯು 21ವರ್ಷಗಳ ಹಿಂದೆ ಶಿರಸಿಯಲ್ಲಿ ಆರಂಭವಾಗಿ, ರಾಜ್ಯದ ಹಲವೆಡೆ ವಿಸ್ತರಿಸಿದೆ. ದೇಶಕ್ಕೆ ಸಂಸ್ಕೃತಿಯ ಉತ್ಸವವನ್ನು ಕೊಡುಗೆ ನೀಡಿದ ಶ್ರೇಯಸ್ಸು ಶಿರಸಿಗರದ್ದಾಗಿದೆ’ ಎಂದರು. ಉತ್ಸವ ಸಮಿತಿ ಅಧ್ಯಕ್ಷ ಕೃಷ್ಣಾನಂದ ಕೊಡಿಯಾ ಮಾತನಾಡಿ, ‘ಹಿಂದೂಗಳು ಒಂದಾಗಿ ಉತ್ಸವ ಆಚರಿಸಬೇಕು. ಹಿಂದೂಗಳ ಏಕತೆಯನ್ನು ಉತ್ಸವದ ಮೂಲಕ ತೋರಿಸಬೇಕು’ ಎಂದರು. ಸಂಚಾಲಕ ಗೋಪಾಲ ದೇವಾಡಿಗ, ಉಪಾಧ್ಯಕ್ಷ ಮೋಹನ ಲಾಲ್ ಇದ್ದರು. ಗಜಾನನ ಸಕಲಾತಿ ಕಾರ್ಯಕ್ರಮ ನಿರೂಪಿಸಿದರು.

ಬೃಹತ್ ಶೋಭಾಯಾತ್ರೆಗೆ ಸ್ವಾಮೀಜಿ ದ್ವಯರು ಚಾಲನೆ ನೀಡಿದರು. 25ಕ್ಕೂ ಹೆಚ್ಚು ಪೌರಾಣಿಕ ಕಥಾನಕದ ಬಂಡಿಚಿತ್ರಗಳು, ಡೊಳ್ಳು ಕುಣಿತ, ಬೇವು–ಬೆಲ್ಲ ವಿತರಣೆ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು. ಜೈ ಸಂತೋಷಿಮಾ ಬಾಲವಾಡಿ ಮಕ್ಕಳ ರೂಪಕ, ಕುಂದಾಪುರದ ಆಸ್ಟ್ರಿಚ್ ಪಕ್ಷಿ ನೃತ್ಯ, ಕೇರಳದ ಚಂಡೆ ವಾದನ, ಮರಾಠಿಕೊಪ್ಪದ ಗೋಸಂರಕ್ಷಣೆ, ಬಣ್ಣದಮಠದ ವತಿಯಿಂದ ಸಿದ್ಧಗಂಗಾ ಶ್ರೀಗಳ ರೂಪಕ ಗಮನಸೆಳೆದವು. ಸಹಸ್ರಾರು ಜನರು ಕೇಸರಿ ಪೇಟತೊಟ್ಟು ಸಂಭ್ರಮದಿಂದ ಮೆರವಣಿಗೆಯಲ್ಲಿ ಭಾಗವಹಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !